ತುಳು ಬರೇ ಭಾಷೆಯಲ್ಲ; ಅದೊಂದು ದೇಶ: ಬಿ.ಅಪ್ಪಣ್ಣ ಹೆಗ್ಡೆ

Update: 2018-09-17 14:32 GMT

ಬಸರೂರು, ಸೆ.17: ತುಳುನಾಡಿನ ಸಂಸ್ಕೃತಿ ಅದು ಸಮಗ್ರ ಜಗತ್ತಿಗೇ ಮಾದರಿ. ಇಲ್ಲಿನ ದೈವಾರಾಧನೆಯಲ್ಲಿ, ಆಚಾರ-ವಿಚಾರಗಳಲ್ಲಿ ಒಳ್ಳೆಯದನ್ನು ಸ್ವೀಕ ರಿಸಿ ಕೂಡಿ ಬದುಕುವ ಸಂದೇಶವಿದೆ. ತುಳು ಎಂದರೆ ಅದು ಕೇವಲ ಭಾಷೆಯಲ್ಲ. ಅದೊಂದು ದೇಶ. ಇದರಲ್ಲಿ ಸಂಸ್ಕೃತಿ ಅಡಗಿದೆ. ಆ ಸಂಸ್ಕೃತಿಯನ್ನು ಗಟ್ಟಿಗೊಳಿಸುವುದು ‘ತುಳುನಾಡೋಚ್ಚಯ-2018’ ಕಾರ್ಯಕ್ರಮದ ಮೂಲ ಉದ್ದೇಶ ಎಂದು ಮಾಜಿ ಶಾಸಕ ಅಪ್ಪಣ್ಣ ಹೆಗ್ಡೆ ಬಸ್ರೂರು ಅಭಿಪ್ರಾಯಪಟ್ಟಿದ್ದಾರೆ.

ಬಸ್ರೂರಿನ ನಿವೇದಿತಾ ಫ್ರೌಢಶಾಲೆಯಲ್ಲಿ ನಡೆದ ರವಿವಾರ ತುಳುನಾಡೋಚ್ಚಯ ಸ್ವಾಗತ ಸಮಿತಿ ರಚನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ತುಳು ಎಂದರೆ ದ್ರಾವಿಡ ಸಂಸ್ಕೃತಿ. ಕನ್ನಡ, ಕುಂದಗನ್ನಡವು ದ್ರಾವಿಡ ಸಂಸ್ಕೃತಿಯ ಮೂಲವಾಗಿದೆ. ಕುಂದಾಪುರದಲ್ಲಿ ಹಲವಾರು ಕುಟುಂಬಗಳು ತುಳು ಮತ್ತು ಕುಂದಗನ್ನಡ ಭಾಷೆಗಳ ಸಮ್ಮಿಲನವಾಗಿದೆ. ಈ ಭಾಷಾ ಬಾಂಧವ್ಯವನ್ನು ಇನ್ನಷ್ಟು ಬೆಳೆಸುವ ಬೆಸುಗೆಯಾಗಿ ತುಳುನಾಡೋಚ್ಚಯ ಮೂಡಿಬರಲಿ ಎಂದು ನಿವೃತ್ತ ಪ್ರಾಧ್ಯಾಪಕ, ಜಾನಪದ ವಿದ್ವಾಂಸ ಡಾ. ಕನರಾಡಿ ವಾದಿರಾಜ್ ಭಟ್ ಆಶಿಸಿದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ತುಳುವೆರೆ ಆಯನೊ ಕೂಟ ಕುಡ್ಲದ ಗೌರವಾಧ್ಯಕ್ಷ ಡಾ. ಆರೂರು ಪ್ರಸಾದ್ ರಾವ್, ಬಸ್ರೂರಿನಲ್ಲಿರುವ ತುಳುವೇಶ್ವರ ದೇವಸ್ಥಾನದ ಅಭಿವೃದ್ಧಿ ಕೆಲಸವು ಈ ಕಾರ್ಯಕ್ರಮದ ಜೊತೆ ನಡೆಯ ಬೇಕಿರುವುದರಿಂದ ಇದು ಒಂದು ಧಾರ್ಮಿಕ ಕಾರ್ಯಕ್ರಮವೂ ಆಗಿದೆ. ಆದುದರಿಂದ ಎಲ್ಲರೂ ಈ ನಿಟ್ಟಿನಲ್ಲಿಯೂ ಕಾರ್ಯಪ್ರವೃತ್ತರಾಗಿ ಸಕರಿಸಬೇಕು ಎಂದು ವಿನಂತಿಸಿದರು.

ವಿಶ್ವ ತುಳುವೆರೆ ಆಯನೊ ಕೂಟ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಒಡಿಪು ತುಳು ಕೂಟ ಮತ್ತು ವಿವಿಧ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಬಸ್ರೂರಿನಲ್ಲಿ ತುಳುನಾಡಿನಲ್ಲಿ ಜಾತಿ, ಮತ, ಭಾಷಾ ಸೌಹಾರ್ದತೆ ಎಂಬ ನೆಲೆಗಟ್ಟಿನಲ್ಲಿ ‘ತುಳುನಾಡೋಚ್ಚಯ-2018’ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪ್ರಸ್ತುತ ಕರಾವಳಿ ಜಿಲ್ಲೆಗಳಲ್ಲಿ ಭಾವೈಕ್ಯತೆಯನ್ನುಂಟು ಮಾಡುವುದು ಮತ್ತು ತುಳು ಭಾಷಾ ಸಂಸ್ಕೃತಿಯನ್ನು ಇನ್ನಷ್ಟು ಬಲಪಡಿಸುವುದು ತುಳುನಾಡೋಚ್ಚಯದ ಮೂಲ ಉದ್ದೇಶವಾಗಿದೆ. ಅಲ್ಲದೆ ಬಸ್ರೂರಿನ ಪ್ರಾಚೀನ ತುಳುಸಂಸ್ಕೃತಿಯನ್ನು ಅನಾವರಣಗೊಳಿಸಿ ಜಗತ್ತಿಗೆ ಪರಿಚಯಿಸುವುದು. ಇದರೊಂದಿಗೆ ಪುರಾತನ ದೇವಾಲಯವಾದ ತುಳುವೇಶ್ವರನ ಅಭಿವೃದ್ಧಿ ಹಾಗೂ ಹೆಚ್ಚಿನ ಜನಾಕರ್ಷಣೆ ಗೊಳಿಸುವುದು ನಮ್ಮ ಗುರಿಯಾಗಿದೆ ಎಂದರು.

ಮುಂದಿನ ಡಿಸೆಂಬರ್ ತಿಂಗಳಲ್ಲಿ ನಡೆಯುವ ತುಳುನಾಡೋಚ್ಚಯದಲ್ಲಿ ತುಳುನಾಡ ಭಾಷಾ ಸಂಸ್ಕೃತಿ ಹಾಗೂ ಜಾತಿ,ಮತ,ಭಾಷಾ ಸೌಹಾರ್ದತೆಯನ್ನು ಸಾರುವ ವಿವಿಧ ಗೋಷ್ಠಿ, ಪ್ರಾತ್ಯಕ್ಷಿಕೆ ಮತ್ತು ವಸ್ತು ಪ್ರದರ್ಶನಗಳು, ಜಾನಪದ ಪ್ರದರ್ಶನಗಳು, ಆಹಾರೋತ್ಸವ, ಕುಲ ಕಸುಬು ಪ್ರದರ್ಶನಗಳು ನಡೆಯಲಿವೆ.

ಸಮ್ಮೇಳನದಲ್ಲಿ ಕನ್ನಡ, ತುಳು, ಕುಂದಗನ್ನಡ, ಕೊಂಕಣಿ, ಮರಾಠಿ, ಹವ್ಯಕ, ಶಿವಳ್ಳಿ, ಮಲೆಯಾಳ, ಮಾವಿಲ, ಉರ್ದು, ಕರ್ಹಾಡ, ಅರೆಗನ್ನಡ, ಕೊಡವ, ಕೊರಗ, ಬ್ಯಾರಿ ಭಾಷೆಗಳ ಸಾಹಿತ್ಯ, ಸಾಂಸ್ಕೃತಿಕ, ಜನಪದ ಕಾರ್ಯಕ್ರಮಗಳನ್ನು ನಡೆಸಲಾಗುವುದು. ಅಲ್ಲದೆ ತುಳು ಭಾಷಾ ಸಂಸ್ಕೃತಿಗೆ ಅಲ್ಲದೇ ಇಲ್ಲಿನ ಸೌಹಾರ್ದತೆಗೆ ಕೊಡುಗೆ ನೀಡಿದ ಗಣ್ಯರನ್ನು ಗೌರವಿಸಲಾಗುವುದು ಎಂದು ವಿಶ್ವ ತುಳುವೆರೆ ಆಯನೊ ಕೂಟದ ಸಂಚಾಲಕ ಡಾ. ರಾಜೇಶ ಆಳ್ವ ಪ್ರಾಸ್ತಾವಿಕ ವಾಗಿ ಮಾತನಾಡುತ್ತಾ ನುಡಿದರು.

ತುಳುವೆರೆ ಆಯನೊ ಕೂಟ ಕುಡ್ಲದ ಅಧ್ಯಕ್ಷ ದಯಾನಂದ ಕತ್ತಲ್‌ಸಾರ್ ‘ತುಳುನಾಡಿನ ದೈವಾರಾಧನೆಯ ವೈಶಿಷ್ಟತೆ’ ಬಗ್ಗೆ ಮಾಹಿತಿ ನೀಡಿದರು. ಸಭೆಯಲ್ಲಿ ತುಳುವೆರೆ ಆಯನೊ ಕೂಟ ಕಾಸರಗೋಡಿನ ಗೌರವಾಧ್ಯಕ್ಷ ಪ್ರೊ. ಎ.ಶ್ರೀನಾಥ್, ಶಾರದ ಕಾಲೇಜು ಬಸ್ರೂರಿನ ನಿವೃತ್ತ ಎಚ್‌ಒಡಿ ಪ್ರೊ. ಜಗದೀಶ್, ನಿವೃತ್ತ ಬಿಇಒ ಗೋಪಾಲ್ ಶೆಟ್ಟಿ, ಕುಂದಪ್ರಭಾ ಪತ್ರಿಕೆಯ ಯು.ಎಸ್. ಶೆಣೈ, ತಾಪಂ ಸದಸ್ಯ ರಾಮಕಿಶನ್ ಹೆಗ್ಡೆ, ಶಾರದ ಕಾಲೇಜು ಪ್ರಾಂಶುಪಾಲ ಪ್ರೊ.ಕೆ. ರಾಧಾಕೃಷ್ಣ ಶೆಟ್ಟಿ ಮೊದಲಾದವರು ಅಭಿಪ್ರಾಯ ಮಂಡಿಸಿದರು.

ನಿವೇದಿತಾ ಪ್ರೌಢಶಾಲೆಯ ಅಧ್ಯಾಪಕ ದಿನಕರ ಶೆಟ್ಟಿ ಸ್ವಾಗತಿಸಿ, ಅಖಿಲ ಭಾರತ ತುಳು ಒಕ್ಕೂಟದ ಪ್ರಧಾನ ಕಾರ್ಯದಶಿರ್ ನಿಟ್ಟೆ ಶಶಿಧರ ಶೆಟ್ಟಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News