ಲಂಚ ಬೇಡಿಕೆಯಿಟ್ಟ ಪ್ರಕರಣ: ಆರೋಪಿಗೆ ಜೈಲು ಶಿಕ್ಷೆ

Update: 2018-09-17 14:35 GMT

ಮಂಗಳೂರು, ಸೆ.17: ಮಹಿಳೆ ಹೆಸರಿಗೆ ಆರ್‌ಟಿಸಿ ಮಾಡಿಸಲು ಲಂಚಕ್ಕೆ ಬೇಡಿಕೆಯಿಟ್ಟ ಪ್ರಕರಣದಲ್ಲಿ ಅಪರಾಧಿಗೆ ಒಂದು ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಶನಿವಾರ ತೀರ್ಪು ನೀಡಿದೆ.

ಸಂಪಾಜೆ ಗ್ರಾಮ ಕರಣಿಕ ವಿನೋದ್‌ಕುಮಾರ್ ಶಿಕ್ಷೆಗೊಳಗಾದ ಅಪರಾಧಿ.

ಸುಳ್ಯ ತಾಲೂಕಿನ ಮುಹಮ್ಮದ್ ಹನೀಫ್ ಎಂಬವರು ತನ್ನ ಸಹೋದರಿ ನಸೀಮಾ ಹೆಸರಿಗೆ ಆರ್‌ಟಿಸಿಯನ್ನು ಮಾಡಿಸಿಕೊಡುವಂತೆ ಸಂಪಾಜೆ ಗ್ರಾಮದ ಗ್ರಾಮ ಕರಣಿಕ ವಿನೋದ್‌ಕುಮಾರ್ ಅವರನ್ನು ಭೇಟಿಯಾಗಿ ಮನವಿ ಮಾಡಿದ್ದಾರೆ. ಆಗ ಗ್ರಾಮ ಕರಣಿಕ ಆರ್‌ಟಿಸಿಯನ್ನು ನಸೀಮಾ ಹೆಸರಿಗೆ ಮಾಡಿಕೊಡಲು 3 ಸಾವಿರ ರೂ. ಲಂಚಕ್ಕೆ ಬೇಡಿಕೆಯೊಡ್ಡಿದ್ದರು.

ಈ ಬಗ್ಗೆ ಮುಹಮ್ಮದ್ ಹನೀಫ್ ಅವರು ಗ್ರಾಮ ಕರಣಿಕರ ವಿರುದ್ಧ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಲೋಕಾಯುಕ್ತ ಪೊಲೀಸ್ ನಿರೀಕ್ಷಕರು ತನಿಖೆ ನಡೆಸಿ, ಆರೋಪಿ ವಿರುದ್ಧ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದಲ್ಲಿ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

ಈ ಪ್ರಕರಣದ ವಿಚಾರಣೆಯನ್ನು ಕೈಗತ್ತಿಕೊಂಡ ಜಿಲ್ಲಾ ಮತ್ತು ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಮುರಳೀಧರ ಪೈ ತನ್ನ ತೀರ್ಪಿನಲ್ಲಿ ಆರೋಪಿ ಲಂಚಕ್ಕೆ ಬೇಡಿಕೆ ಸಲ್ಲಿಸಿರುವುದು ಕಂಡುಬಂದಿದೆ. ನ್ಯಾಯಾಧೀಶರು ಆರೋಪಿಗೆ ಒಂದು ವರ್ಷ ಜೈಲುಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ.

ಪ್ರಕರಣದಲ್ಲಿ ಪೂರ್ಣ ತನಿಖೆ ನಡೆಸಿದ ಬಿ.ಕೆ. ಮಂಜಯ್ಯ ಸಹಕರಿಸಿದ್ದು, ಮುಂದಿನ ಹೆಚ್ಚುವರಿ ತನಿಖೆಯನ್ನು ವಿಜಯಪ್ರಸಾದ್ ನಡೆಸಿ ದೋಷಾರೋಪಣ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಲೋಕಾಯುಕ್ತ ಪರವಾಗಿ ಹೆಚ್ಚುವರಿ ವಿಶೇಷ ಸರಕಾರಿ ಅಭಿಯೋಜಕ ರವೀಂದ್ರ ಮುನ್ನಿಪ್ಪಾಡಿ ವಾದ ಮಂಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News