ಮಂಗಳೂರು: ವಿವಿಧ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಯ ಬಂಧನ

Update: 2018-09-17 14:47 GMT

ಮಂಗಳೂರು, ಸೆ.17: ಜಿಲ್ಲೆಯಲ್ಲಿ ನಡೆದ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ಕಂಕನಾಡಿ ನಗರ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ವಾಮಂಜೂರು ನಿವಾಸಿ ಆರೀಫ್ (24) ಬಂಧಿತ.

ಆ.24ರಂದು ಕುಲಶೇಖರ ನಿಡ್ಡೇಲ್ ಮೈದಾ ಫಾಕ್ಟರಿ ಬಳಿ ಸಂಜೆ ವೇಳೆಗೆ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಬ್ಯಾಗ್‌ನ್ನು ಆರೋಪಿ ಆರೀಫ್ ಹಾಗೂ ಇನ್ನೋರ್ವ ಕಾನೂನಿನ ಸಂಘರ್ಷಕ್ಕೆ ಒಳಗಾದ (ಅಪ್ರಾಪ್ತ) ಬಾಲಕ ಸುಲಿಗೆ ಮಾಡಿದ್ದರು. ಈ ಬಗ್ಗೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಕೃತ್ಯಕ್ಕೆ ಬಳಸಿದ್ದ ನಂಬರ್ ಇಲ್ಲದ ಹೋಂಡಾ ಆಕ್ಟಿವಾ ವಾಹನ ಸಮೇತ ಆರೋಪಿಯನ್ನು ಸೆ.16ರಂದು ಕಣ್ಣೂರು ಜಂಕ್ಷನ್‌ನಲ್ಲಿ ವಶಕ್ಕೆ ಪಡೆದುಕೊಳ್ಳಲಾಗಿದೆ.

ಹಲವು ಪ್ರಕರಣ: ಆರೋಪಿ ಆರೀಫ್ ವಿರುದ್ಧ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈಗಾಗಲೇ ಕೊಲೆ ಯತ್ನ ಹಾಗೂ ದರೋಡೆಗೆ ಯತ್ನದಂತಹ ಮೂರು ಪ್ರಕರಣಗಳು ದಾಖಲಾಗಿವೆ. ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಹೊರತು ಪಡಿಸಿ ಪ್ರಸ್ತುತ ಆರೀಫ್ ಎಂಬಾತನ ವಿರುದ್ಧ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು, ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎರಡು ಹಾಗೂ ದ.ಕ. ಜಿಲ್ಲಾ ಪೊಲೀಸ್ ವ್ಯಾಪ್ತಿಯ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಒಂದು, ಒಟ್ಟಾಗಿ ಮಂಗಳೂರು ನಗರ ಪೊಲೀಸ್ ಹಾಗೂ ದ.ಕ. ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಆರು ಮಹಿಳೆಯರ ಬ್ಯಾಗ್ ಸುಲಿಗೆ ಪ್ರಕರಣಗಳು ದಾಖಲಾಗಿವೆ.

ಈ ಪತ್ತೆ ಕಾರ್ಯಾಚರಣೆಯನ್ನು ಮಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್, ಉಪ-ಪೊಲೀಸ್ ಆಯುಕ್ತೆ ಉಮಾ ಪ್ರಶಾಂತ್ ಹಾಗೂ ಮಂಗಳೂರು ದಕ್ಷಿಣ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ರಾಮರಾವ್ ಮಾರ್ಗದರ್ಶನದಲ್ಲಿ ಕಂಕನಾಡಿ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ರವೀಶ್ ನಾಯಕ್, ಕಾನೂನು ಸುವ್ಯವಸ್ಥೆಯ ಪೊಲೀಸ್ ಉಪ ನಿರೀಕ್ಷಕ ಪ್ರದೀಪ್ ಟಿ.ಆರ್., ಅಪರಾಧ ಪತ್ತೆ ವಿಭಾಗದ ಪೊಲೀಸ್ ಉಪ ನಿರೀಕ್ಷಕಿ ಜಾನಕಿ ಹಾಗೂ ಸಿಬ್ಬಂದಿ ಸಂತೋಷ್, ಮದನ್, ವಿನೋದ್, ರಾಜೇಶ್, ನೂತನ್, ಸತೀಶ್, ಸಂದೀಪ್, ಜೀವನ್, ಮೇಘರಾಜ್ ಪಾಲ್ಗೊಂಡಿದ್ದರು.

ಎಟಿಎಂ ಕಳವು ಯತ್ನ ಪ್ರಕರಣ

ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜೂ.21ರಂದು ನಡೆದ ಪಾಣೆಮಂಗಳೂರಿನ ಸಿಂಡಿಕೇಟ್ ಬ್ಯಾಂಕ್ ಎಟಿಎಂ ಕಳವು ಯತ್ನ ಪ್ರಕರಣದಲ್ಲಿ ಆರೋಪಿ ಆರೀಫ್ ಭಾಗಿಯಾಗಿದ್ದನು. ಆರೋಪಿ ಆರೀಫ್ ಎಂಬಾತನ ವಶದಲ್ಲಿದ್ದ ಹೋಂಡಾ ಆಕ್ಟಿವಾ, ಕೃತ್ಯ ನಡೆಸಲು ಉಪಯೋಗಿಸಿದ ಎರಡು ಹೆಲ್ಮೆಟ್, ಸುಲಿಗೆ ಮಾಡಿದ ಬ್ಯಾಗ್ ಗಳಲ್ಲಿದ್ದ ಎಂಟು ವಿವಿಧ ಕಂಪೆನಿಗಳ ಮೊಬೈಲ್ ಫೋನ್ ಹಾಗೂ ಎಟಿಎಂ ಕಳವು ಯತ್ನಕ್ಕೆ ಉಪಯೋಗಿಸಿದ ರಾಡ್‌ನ್ನು ಸ್ವಾಧೀನ ಪಡಿಸಿಕೊಂಡಿದ್ದು, ಸೊತ್ತುಗಳ ಒಟ್ಟು ಮೌಲ್ಯ 87,750 ರೂ. ಎಂದು ಅಂದಾಜಿಸಲಾಗಿದೆ. ಆರೋಪಿ ಆರೀಫ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಲಾರಿ ಬ್ಯಾಟರಿ ಕಳವು ಪ್ರಕರಣದಲ್ಲೂ ಭಾಗಿ

ಮಂಗಳೂರು ನಗರದ ಹೊರ ವಲಯದ ವಾಮಂಜೂರಿನಲ್ಲಿ ನಿಲ್ಲಿಸಲಾಗಿದ್ದ ಲಾರಿಗಳ ಬ್ಯಾಟರಿ ಹಾಗೂ ಕಾಂಕ್ರಿಟ್ ಕಬ್ಬಿಣದ ಶೀಟ್‌ಗಳನ್ನು ಕಳ್ಳತನ ಮಾಡಿ ಸಾಗಾಟ ಮಾಡುತ್ತಿದ್ದ ಮತ್ತೋರ್ವ ಆರೋಪಿ ಆರಿಫ್‌ನನ್ನು ಕಂಕನಾಡಿ ನಗರ ಪೊಲೀಸ್ ಠಾಣಾ ಬಂಧಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರವಿವಾರ ಇನ್ನೋರ್ವ ಆರೋಪಿ ವಾಮಂಜೂರು ನಿವಾಸಿ ಅಜರುದ್ದೀನ್ (26)ನನ್ನು ಬಂಧಿಸಿ, ನ್ಯಾಯಂಗ ಬಂಧನ ವಿಧಿಸಲಾಗಿತ್ತು.

ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಜಪ್ಪಿನಮೊಗರು ಎಂಬಲ್ಲಿ ಠಾಣಾ ಅಪರಾಧ ವಿಭಾಗದ ಪಿಎಸ್ಸೈ ಸಿಬ್ಬಂದಿಯೊಂದಿಗೆ ವಾಹನ ತಪಾಸಣೆ ನಡೆಸುವಾಗ ಸ್ಪಾರ್ಪಿಯೋ ವಾಹನದಲ್ಲಿ ಕಳ್ಳತನ ಸಾಗಾಟ ಮಾಡುತ್ತಿದ್ದ ವೇಳೆ ಆರೋಪಿಗಳು ಪತ್ತೆಯಾಗಿದ್ದರು.

ಪ್ರಸ್ತುತ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯ ಪ್ರಕರಣದಲ್ಲಿ ಕಳವಾದ 40,000 ರೂ. ಮೌಲ್ಯದ ಬ್ಯಾಟರಿ ಹಾಗೂ ಕಾಂಕ್ರಿಟ್ ಶೀಟ್‌ಗಳನ್ನು ಮತ್ತು ಸೊತ್ತುಗಳನ್ನು ಸಾಗಾಟ ಮಾಡುತ್ತಿದ್ದ ಸ್ಕಾರ್ಪಿಯೋ ವಾಹನವನ್ನು ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಸ್ವಾಧೀನಪಡಿಸಿಕೊಂಡ ಒಟ್ಟು ಸೊತ್ತಿನ ಮೌಲ್ಯ 4.50 ಲಕ್ಷ ರೂ. ಆಗಬಹುದು ಎಂದು ಅಂದಾಜಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News