ಪಡುಬಿದ್ರೆ: ಅಂಗಡಿ ಕೋಣೆಗಳ ಬಾಡಿಗೆ ವಸೂಲಿಗೆ ಕ್ರಮಕೈಗೊಳ್ಳಲು ಆಗ್ರಹ

Update: 2018-09-17 15:11 GMT

ಪಡುಬಿದ್ರೆ, ಸೆ. 17:  ಪಡುಬಿದ್ರೆ ಗ್ರಾಮ ಪಂಚಾಯತ್ ನಲ್ಲಿ ಬಾಡಿಗೆದಾರರು ಅಂಗಡಿ ಕೋಣೆಗಳ ಬಾಡಿಗೆ ಬಾಕಿ ಇರಿಸಿದ್ದು, ವಸೂಲಿಗೆ ಹೋಗಲು ಗ್ರಾಪಂ ಪ್ರತಿನಿಧಿಗಳೇ ಅಡ್ಡಿಯಾಗುತಿದ್ದಾರೆ. ಬಾಕಿ ಬಾಡಿಗೆ ವಸೂಲಿಗೆ ಕ್ರಮ ಕೈಗೊಳ್ಳಿ ಎಂದು ತಾಲ್ಲೂಕು ಪಂ. ಮಾಜಿ ಸದಸ್ಯ ಭಾಸ್ಕರ ಪಡುಬಿದ್ರೆ ಒತ್ತಾಯಿಸಿದರು.

ಸೋಮವಾರ ಪಡುಬಿದ್ರೆ ಗ್ರಾಮ ಪಂ. ಸಭಾಭವನದಲ್ಲಿ ನಡೆದ ಜಮಾ ಬಂದಿ ಸಭೆಯಲ್ಲಿ ಅವರು ಮಾತನಾಡಿದ ಅವರು, ನಿವೇಶನ ಹಾಗೂ ವಸತಿ ರಹಿತರ ಪಟ್ಟಿಯನ್ನು ಪರಿಷ್ಕರಿಸಿ ಬಿಟ್ಟು ಹೋಗಿರುವವರ ಪಟ್ಟಿಯನ್ನು ಸಿದ್ದಪಡಿಸಬೇಕು ಎಂದು ಹೇಳಿದರು. 

ಗ್ರಾಮ ಪಂ. ವ್ಯಾಪ್ತಿಯಲ್ಲಿ ನಿವೇಶನಕ್ಕಾಗಿ 800 ಅರ್ಜಿಗಳು ಬಂದಿದ್ದು, ಜಮೀನಿನ ಅಲಭ್ಯತೆಯಿಂದ ನಿವೇಶನ ನೀಡಲು ತೊಡಕಾಗಿದೆ ಎಂದು ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಹರಿಕೃಷ್ಣ ಶಿವತ್ತಾಯ ಹೇಳಿದರು. 

ಮಾಸಿಕ 2,000 - 2,500ರೂ.ಗಳಿಷ್ಟಿದ್ದ ಬಾಡಿಗೆಯನ್ನು 20,100ಕ್ಕೂ ಮೇಲ್ಪಟ್ಟು ಏಲಂ ಮೂಲಕ ಮಾರ್ಕೆಟ್ ಪ್ರದೇಶದ ಬಾಡಿಗೆದಾರರು ವಹಿಸಿಕೊಂಡಿದ್ದಾರೆ. ಅವರಲ್ಲಿ ಕೆಲವರು ಈಗ ಕಳೆದ ಆರು ತಿಂಗಳಿಂದ ಬಾಡಿಗೆಯನ್ನೇ ಪಾವತಿಸದೇ ವ್ಯವಹಾರ ಮುಂದುವರಿಸಿದ್ದಾರೆ. ಇವರಿಗೆ ಪಂಚಾಯಿತಿಯಿಂದ ಮೂರು ನೋಟಿಸ್‍ಗಳನ್ನು ಜಾರಿಗೊಳಿಸಲಾಗಿದೆ. ಬಾಡಿಗೆಯ ಆರು ತಿಂಗಳ ಮುಂಗಡವನ್ನು ಠೇವಣಿಯಾಗಿರಿಸಿರುವ ಅವರ ಆರು ತಿಂಗಳ ಅವಧಿ ಈ ತಿಂಗಳಾಂತ್ಯಕ್ಕೆ ಮುಕ್ತಾಯವಾಗಲಿದೆ. 

ಗ್ರಾಮ ಪಂಚಾಯಿತಿಗೆ 2016-17ರ ಸಾಲಿನಲ್ಲಿ ಅಂಗಡಿಗಳ ಬಾಡಿಗೆ 5,67,830 ರೂ. ಬಾಕಿ ಹಾಗೂ 2017-18 ರ ಸಾಲಿನಲ್ಲಿ 18,14,460 ಸೇರಿ 23,82,290 ರೂ. ವಸೂಲಿಯಾಗಬೇಕಿತ್ತು. ಅದರಲ್ಲಿ 18,29,140 ಸಂಗ್ರಹವಾಗಿದ್ದು, ಇನ್ನೂ 3,48,550 ರೂಪಾಯಿ ಬಾಕಿಯಿದೆ ಎಂದು ಪಿಡಿಒ ಪಂಚಾಕ್ಷರಿ ಸ್ವಾಮಿ ಕೆರಿಮಠ ತಿಳಿಸಿದರು.

ಅಂಗಡಿ ಬಾಡಿಗೆ ಬಾಕಿ ಇರಿಸಿದ ಕೆಲ ವ್ಯಕ್ತಿಗಳು ನಾಪತ್ತೆಯಾಗಿದ್ದು, ಅವರು ನೀಡಿರುವ ವಿಳಾಸವೂ ಇಲ್ಲವಾಗಿದೆ. ಉದ್ಯಮ ಪರವಾನಿಗೆಯಲ್ಲಿಯೂ ಹಿಂದಿನ ಬಾಕಿ  91,571 ರೂ. ಸೇರಿ 3,32,271 ರೂ. ಸಂಗ್ರಹವಾಗಬೇಕಿತ್ತು. ಅದರಲ್ಲಿ 2,60,709 ಪಾವತಿಯಾಗಿ71, 562 ಬಾಕಿ ಬರಬೇಕಿದೆ ಎಂದು ವಿವರಿಸಿದರು.

ಬಾಡಿಗೆ ಬಾಕಿಯಿರಿಸಿರುವ ಅಂಗಡಿಗಳಿಗೆ ನೋಟಿಸ್ ನೀಡಿ, ಪಾವತಿ ಮಾಡದಿದ್ದಲ್ಲಿ ಪುನರ್ ಏಲಂ ಮಾಡಿ ಎಂದು ಪಿಡಿಒ ಅವರಿಗೆ ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಹರಿಕೃಷ್ಣ ಶಿವತ್ತಾಯ ನಿರ್ದೇಶನ ನೀಡಿದರು.

ಪಂ. ಉಪಾಧ್ಯಕ್ಷ ವೈ. ಸುಕುಮಾರ್ ಅಧ್ಯಕ್ಷತೆರ ವಹಿಸಿದ್ದರು. ತೆಂಕ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ವಸಂತಿ ಬಾಯಿ ಹಾಗೂ ತಾಲ್ಲೂಕು ಪಂಚಾಯಿತಿ ಗುಮಾಸ್ತ ವಿನಾಯಕ್ ಜಮಾಬಂದಿ ಸಹಾಯಕರಾಗಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News