ಬಂಟ್ವಾಳ ತಾಲೂಕು ಪಂಚಾಯತ್‍: ಸಮೀಕ್ಷಾ ಸಭೆ

Update: 2018-09-17 15:13 GMT

ಬಂಟ್ವಾಳ, ಸೆ. 17: ಬಂಟ್ವಾಳ ತಾಲೂಕು ಪಂಚಾಯತ್‍ನ 2018-19ನೆ ಸಾಲಿನ ತ್ರೈಮಾಸಿಕ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಸಮೀಕ್ಷಾ ಸಭೆಯು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಅಧ್ಯಕ್ಷತೆಯಲ್ಲಿ ತಾಲೂಕು ಪಂಚಾಯತ್ ಎಸ್.ಜಿ.ಎಸ್.ವೈ. ಸಭಾಗಂಣದಲ್ಲಿ ಸೋಮವಾರ ನಡೆಯಿತು.

ಕಳೆದ ಸಾಲಿನ ಪ್ರಾಕೃತಿಕ ವಿಕೋಪ ಸಂದರ್ಭ ಬೆಳೆ ನಾಶಕ್ಕೆ ಸಂಬಂಧಿಸಿ ಜುಜುಬಿ ಪರಿಹಾರ ವಿತರಣೆಯಾಗಿದ್ದು, ಇದು ರೈತರಿಗೆ ಮಾಡಿದ ಅವಮಾನ. ಅಧಿಕಾರಿಗಳು ಈ ಸಂದರ್ಭ ಫಲಾನುಭವಿಯ ಸಮಗ್ರ ಅಧ್ಯಯನ ಮಾಡಿ ಪರಿಹಾರ ಮೊತ್ತವನ್ನು ನಿಗದಿಗೊಳಿಸಬೇಕು ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಹೇಳಿದರು.

ರೈತರಿಗಾಗಲೀ, ಸಾರ್ವಜನಿಕರಿಗಾಗಲೀ ಪ್ರಾಕೃತಿಕ ವಿಕೋಪ ನಿಧಿಯಿಂದ ಪರಿಹಾರ ಒದಗಿಸುವ ಮೊತ್ತ ಏನೇನೂ ಸಾಲದು ಎಂದು ಹೇಳಿದರು.
ಇದಕ್ಕೆ ದನಿಗೂಡಿಸಿದ ಜಿಲ್ಲಾ ಪಂಚಾಯತ್ ಸದಸ್ಯೆ ಮಮತಾ ಡಿ.ಎಸ್. ಗಟ್ಟಿ, ಪ್ರಾಕೃತಿಕ ವಿಕೋಪ ನಿಧಿಯಿಂದ ಎಷ್ಟು ಮೊತ್ತ ಈ ಬಾರಿ ಬಳಕೆಯಾಗದೆ ವಾಪಸ್ ಹೋಗಿದೆ ಎಂದು ತಹಶೀಲ್ದಾರ್ ಬಳಿ ಸ್ಪಷ್ಟನೆ ಬಯಸಿದರು. ಆಗ ಉತ್ತರಿಸಿದ ತಹಶೀಲ್ದಾರ್ ಪುರಂದರ ಹೆಗ್ಡೆ, ಸುಮಾರು 70 ಲಕ್ಷ ರೂ.ಗಳಷ್ಟು ಹಣ ವಾಪಸಾಗಿದೆ ಎಂದಾಗ ಆಕ್ರೋಶಗೊಂಡ ಮಮತಾ ಸರಕಾರದ ಹಣವನ್ನು ನೈಜ ಫಲಾನುಭವಿಗಳಿಗೆ ಒದಗಿಸಬೇಕೇ ವಿನಃ ಅದನ್ನು ಹಿಂದೆ ಮರಳಿಸುವುದಲ್ಲ ಎಂದರು.

ಇದಕ್ಕೆ ದನಿಗೂಡಿಸಿದ ಜಿಲ್ಲಾ ಪಂಚಾಯತ್ ಸದಸ್ಯ ಎಂ.ಎಸ್.ಮುಹಮ್ಮದ್, ಸರಕಾರದಿಂದ ದೊರಕುವ ಪರಿಹಾರವನ್ನು ನಿಗದಿಪಡಿಸುವ ಸಂದರ್ಭ ಬಡವರಿಗೆ ಉಪಯೋಗವಾಗುವಂತೆ ಮಾಡಬೇಕು ಎಂದರು.

ಈ ಸಂದರ್ಭ ಮಾತನಾಡಿದ ಜಿಪಂ ಸದಸ್ಯ ರವಿಂದ್ರ ಕಂಬಳಿ, ಕೆಲ ದಿನಗಳ ಹಿಂದೆ ಸಚಿವ ಯು.ಟಿ.ಖಾದರ್ ಅವರು ನೀಡಿದ ಚೆಕ್ ಕೂಡ ಕಡಿಮೆ ಮೊತ್ತದ್ದಾಗಿದ್ದು, ಫಲಾನುಭವಿಗಳಿಗೆ ಯಾವ ಪ್ರಯೋಜನವೂ ದೊರಕುವುದಿಲ್ಲ, ಮನೆ ಪೂರ್ತಿ ಕುಸಿದರೆ, ಜುಜುಬಿ ಮೊತ್ತದ ಪರಿಹಾರ ಯಾಕೆ ಎಂದರು.
ಮಮತಾ ಗಟ್ಟಿ ಮಾತನಾಡಿ, ಇಂಜಿನಿಯರುಗಳು ಎಷ್ಟು ನಷ್ಟ ಅಂದಾಜು ಮೊತ್ತ ಮಾಡಿದರೂ ಕೇವಲ 5 ಸಾವಿರ ರೂ.ಗಳ ಪರಿಹಾರ ಸಿಗುತ್ತದೆ. ಇದು ಯಾವ ನ್ಯಾಯ ಎಂದು ಪ್ರಶ್ನಿಸಿದರು.

ಜನವರಿಯಿಂದ ಆಗಸ್ಟ್‍ವರೆಗೆ 30 ಮಲೇರಿಯಾ ಮತ್ತು 37 ಡೆಂಗ್ ಪ್ರಕರಣಗಳು ತಾಲೂಕಿನಲ್ಲಿ ಪತ್ತೆಯಾಗಿದ್ದು, ಎಲ್ಲರೂ ಗುಣಮುಖರಾಗಿದ್ದಾರೆ ಎಂದು ಆರೋಗ್ಯಾಧಿಕಾರಿ ಡಾ.ದೀಪಾ ಪ್ರಭು ಮಾಹಿತಿ ನೀಡಿದರು.

ಈ ಸಂದರ್ಭ ಮಾತನಾಡಿದ ಜಿಪಂ ಸದಸ್ಯ ಎಂ.ಎಸ್.ಮುಹಮ್ಮದ್, ಮಂಚಿ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರಿಲ್ಲದಿರುವುದನ್ನು ಗಮನ ಸೆಳೆದರು.
ಬಂಟ್ವಾಳ ತಾಲೂಕಿನಲ್ಲಿ 17 ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದು, ಅವುಗಳಲ್ಲಿ 4ರಲ್ಲಿ ವೈದ್ಯರ ಕೊರತೆ ಇದೆ. ಕನ್ಯಾನ, ಅಡ್ಯನಡ್ಕ, ರಾಯಿ ಮತ್ತು ಮಂಚಿಯಲ್ಲಿ ವೈದ್ಯರಿಲ್ಲ. ಅಲ್ಲಿಗೆ ಶೀಘ್ರ ತಾತ್ಕಾಲಿಕ ನೆಲೆಯಲ್ಲಿ ವೈದ್ಯರು ನೇಮಕಗೊಳ್ಳುತ್ತಾರೆ ಎಂದು ಹೇಳಿದ ಆರೋಗ್ಯಾಧಿಕಾರಿ, ಬಂಟ್ವಾಳದಲ್ಲಿ ತಜ್ಞ ವೈದ್ಯರ ಕೊರತೆ ಇದ್ದು, ಪ್ರಸೂತಿ ತಜ್ಞೆ ಮತ್ತು ಅನಸ್ತೇಶಿಯಾ ತಜ್ಞರ ಸ್ಥಾನ ಭರ್ತಿಯಾಗಿಲ್ಲ ಎಂದರು.

ಗೋ ಶಾಲೆಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸುವ ಕುರಿತು ಮಮತಾ ಗಟ್ಟಿ ಗಮನ ಸೆಳೆದರು. ಗ್ರಾಮ ವಿಕಾಸ ಯೋಜನೆಯಡಿ 8 ಗ್ರಾಮಗಳು ಮಂಜೂರುಗೊಂಡಿವೆ ಎಂದು ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ನರೇಂದ್ರಬಾಬು ಮಾಹಿತಿ ನೀಡಿದರು.

ಸಾಮಾಜಿಕ ಅರಣ್ಯ ಇಲಾಖೆಯಿಂದ ಬಂದ 6 ಲೋಡ್ ಮರದ ದಿಮ್ಮಿಗಳ ಲೆಕ್ಕ ಕಡಿಮೆಯಾಗುತ್ತಿದೆ ಎಂದು ನರಿಂಗಾನ ಗ್ರಾಪಂನಿಂದ ದೂರು ಬಂದಿದ್ದು, ಗಮನಹರಿಸುವಂತೆ ಮಮತಾ ಗಟ್ಟಿ ಹೇಳಿದರು.

ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಅಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಬಂಗೇರ, ತಾಪಂ ಇಒ ರಾಜಣ್ಣ, ತಹಶೀಲ್ದಾರ್ ಪುರಂದರ ಹೆಗ್ಡೆ ಉಪಸ್ಥಿತರಿದ್ದ ಸಭೆಯಲ್ಲಿ ಕೆಡಿಪಿ ಸದಸ್ಯ ಉಮೇಶ್ ಬೋಳಂತೂರು ಸಹಿತ ಜನಪ್ರತಿನಿಧಿಗಳು ವಿವಿಧ ವಿಷಯಗಳ ಕುರಿತು ಗಮನ ಸೆಳೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News