ಭಟ್ಕಳ ತಾಲೂಕು ಮಟ್ಟದ ಪ್ರೌಢಶಾಲಾ ಕ್ರೀಡಾಕೂಟಕ್ಕೆ ಚಾಲನೆ

Update: 2018-09-17 15:35 GMT

ಭಟ್ಕಳ, ಸೆ. 17: ಜಿ.ಪಂ. ಉತ್ತರ ಕನ್ನಡ, ಸಾರ್ವಜನಿಕ ಶಿಕ್ಷಣ ಇಲಾಖೆ ಉತ್ತರಕನ್ನಡ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಭಟ್ಕಳ ಹಾಗೂ ತಾಲೂಕು ಪ್ರೌಢ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಆಶ್ರಯದಲ್ಲಿ ಭಟ್ಕಳ ತಾಲೂಕು ಮಟ್ಟದ ಪ್ರೌಢಶಾಲಾ ಬಾಲಕ ಬಾಲಕಿಯರ ಕ್ರೀಡಾಕೂಟವು ಸೋಮವಾರ ತಾಲೂಕಿನ ಬೆಳೆಕೆ ಸರಕಾರಿ ಪ್ರೌಢ ಶಾಲಾ ಮೈದಾನದಲ್ಲಿ ಆರಂಭಗೊಂಡಿತು. 

ಕ್ರೀಡಾಕೂಟವನ್ನು ಉದ್ಘಾಟಿಸಿದ ತಾ.ಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ಮೀನಾಕ್ಷಿ ಜಟ್ಟಪ್ಪ ನಾಯ್ಕ್, ಕ್ರೀಡಾ ಕ್ಷೇತ್ರವು ಇಂದು ಶೀಘ್ರಗತಿಯಲ್ಲಿ ಬೆಳೆಯುತ್ತಿದೆ. ನಮ್ಮ ದೇಶದಲ್ಲಿ ಹಿಂದಿನಿಂದಲೂ ಕ್ರೀಡೆಗೆ ಮಹತ್ವ ನೀಡಲಾಗುತ್ತಿದೆ. ವಿದ್ಯಾರ್ಥಿಗಳು ಕ್ರೀಡೆಯನ್ನು ಸ್ಪರ್ಧಾ ಮನೋಭಾವದೊಂದಿಗೆ ಸ್ವೀಕರಿಸುವುದರ ಮೂಲಕ ಮುಂದೆ ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ ಉತ್ತಮ ಸಾಧನೆ ಮಾಡಬೇಕು ಎಂದರು. 

 ಬೆಳ್ಕೆ ಗ್ರಾಮಪಂಚಾಯತ್ ಅಧ್ಯಕ್ಷ ರಮೇಶ್ ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಭಟ್ಕಳ ಶಾಖೆಯ ಅಧ್ಯಕ್ಷ ಎಂ.ಬಿ.ನಾಯ್ಕ, ಬೆಳಕೆ ಸರ್ಕಾರಿ ಪ್ರೌಢಶಾಲೆ ಮುಖ್ಯಾಧ್ಯಾಪಕ ಚಂದ್ರಕಾಂತ್ ಗಾಂವಕರ್, ದೈಹಿಕ ಶಿಕ್ಷಣ ಪರಿವೀಕ್ಷಕ ಶ್ರೀಕಾಂತ್ ನಾಯಕ, ಎಸ್.ಆರ್. ಗೊಂಡ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಆರ್.ಮುಂಜಿ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ಮಧುಕರ್ ಹೆಗಡೆ ಕಾರ್ಯಕ್ರಮ ನಿರೂಪಿಸಿದರು. ಗೋಪಾಲ ನಾಯ್ಕ ವಂದಿಸಿದರು. 

ಜನಪ್ರತಿನಿಧಿಗಳ ಗೈರು: ತಾಲೂಕು ಮಟ್ಟದಲ್ಲಿ ಕ್ರೀಡಾಕೂಟದ ಆಹ್ವಾನ ಪತ್ರಿಕೆಯಲ್ಲಿ ಎರಡು ಪುಟದಷ್ಟು ಜನಪ್ರತಿಗಳ ಹೆಸರೇ ರಾರಾಜಿಸುತ್ತಿದ್ದು ವೇದಿಕೆಯಲ್ಲಿ ಮಾತ್ರ ಒಂದಿಬ್ಬರನ್ನು ಹೊರತು ಪಡಿಸಿ ಬಾಕಿ ಎಲ್ಲರೂ ಗೈರಾಗಿದ್ದು ವೇದಿಕೆಯಲ್ಲಿ ಎದ್ದು ಕಾಣುತ್ತಿತ್ತು ಎಂದು ಸ್ಥಳೀಯರು ಹೇಳಿದರು.

ಶಾಸಕರು, ಜಿ.ಪಂ, ತಾ.ಪಂ., ಗ್ರಾ.ಪಂ., ಸದಸ್ಯರು ಹಾಗೂ ವಿವಿಧ ಸಮಿತಿಗಳ ಸದಸ್ಯರು ತಮ್ಮ ಹೆಸರು ಆಹ್ವಾನ ಪತ್ರಿಕೆಯಲ್ಲಿ ಕ್ರಮಬದ್ಧವಾಗಿ ಹೀಗೆಯೇ ಮುದ್ರಿತವಾಗಬೇಕು ಎಂದು ಬಯಸುತ್ತಾರೆ. ಆದರೆ ಕಾರ್ಯಕ್ರಮಗಳಲ್ಲಿ ಮಾತ್ರ ಅವರು ಗೈರಾಗಿತ್ತಾರೆ. ಇದನ್ನು ಕಂಡು ಸಾರ್ವಜನಿಕರು ಬೇಸತ್ತು ಹೋಗಿದ್ದಾರೆ. ಅಲ್ಲದೆ ಸಂಘಟಕರಿಗೆ ಇದೊಂದು ಭಾರಿ ತಲೆನೋವಾಗಿ ಪರಿಣಮಿಸಿದ್ದು ಈ ವ್ಯವಸ್ಥೆ ರದ್ದಾಗಬೇಕು ಎಂಬ ಬೇಡಿಕೆಯೂ ಕೆಲವರು ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News