25ಕ್ಕೂ ಅಧಿಕ ಮರಗಳಿಗೆ ಕೊಡಲಿ: ಜಿಲ್ಲಾಧಿಕಾರಿಗಳಿಗೆ ಮನವಿ

Update: 2018-09-17 15:47 GMT

ಉಡುಪಿ, ಸೆ.17: ಬನ್ನಂಜೆಯಲ್ಲಿ ನಿರ್ಮಾಣವಾಗಲಿರುವ ಕೆಎಸ್‌ಆರ್‌ಟಿ ಬಸ್ ನಿಲ್ದಾಣದ ಕಾಮಗಾರಿಗಾಗಿ ಅಲ್ಲಿರುವ ಸುಮಾರು 25ಕ್ಕೂ ಹೆಚ್ಚು ಶತ ಮಾನ ಕಂಡ ಮರಗಳಿಗೆ ಕೊಡಲಿ ಏಟು ಬೀಳಲಿದ್ದು, ಇದು ಪರಿಸರವಾದಿಗಳ ಆತಂಕಕ್ಕೆ ಕಾರಣವಾಗಿದೆ.

ಈ ಸಂಬಂಧ ಉಡುಪಿ ಜಿಲ್ಲಾ ಪರಿಸರಾಸಕ್ತರ ಒಕ್ಕೂಟವು ಇಂದು ಉಡುಪಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ. ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಕಾಮಗಾರಿಯು ಬನ್ನಂಜೆಯಲ್ಲಿರುವ ಸುಮಾರು ಒಂದೂವರೆ ಎಕರೆ ಜಾಗದಲ್ಲಿ ಆರಂಭವಾಗಿದ್ದು, ಈ ಪ್ರದೇಶದಲ್ಲಿರುವ ಸುಮಾರು 25-30 ಬೃಹತ್ ಮರಗಳನ್ನು ಕಡಿಯಲು ಅರಣ್ಯ ಇಲಾಖೆ ಅನುಮತಿ ನೀಡಿದೆ ಎಂದು ಮನವಿ ಯಲ್ಲಿ ತಿಳಿಸಲಾಗಿದೆ.

ಜಾಗತಿಕ ತಾಪಮಾನ ಇಳಿಕೆ ಹಾಗೂ ನಗರದೊಳಗೆ ಹಸಿರು ಉಳಿಸಿ ಕೊಳ್ಳುವ ಅಗತ್ಯವಿದ್ದು, ಪ್ರಸ್ತುತ ಅರಣ್ಯ ಇಲಾಖೆಯಿಂದ ಕಡಿಯಲು ಅನು ಮತಿ ಪಡೆದಿರುವ ಪಟ್ಟಿಯಲ್ಲಿರುವ ಕನಿಷ್ಠ 10ರಿಂದ 15 ಮರಗಳನ್ನು ಉಳಿಸಿ ಕೊಂಡು ಕಾಮಗಾರಿ ನಡೆಸಲು ಸಾಧ್ಯತೆ ಇದೆ. ಮುಂದಿನ ದಿನಗಳಲ್ಲಿ ಈ ಪ್ರದೇಶದಲ್ಲಿ ಉದ್ಭವಿಸಲಿರುವ ಬಿಸಿಲಿನ ತಾಪವನ್ನು ಸರಿದೂಗಿಸಲು ಮರಗಳ ಅಗತ್ಯವಿದೆ. ಆದುದರಿಂದ ಪರಿಸರ ಸಹ್ಯ ಹಾಗೂ ವೈಜ್ಞಾನಿಕ ದೃಷ್ಠಿಕೋನದಲ್ಲಿ ಅಭಿವೃದ್ಧಿ ಮುಂದುವರೆಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಪರಿಸರಕ್ಕೆ ಹಾನಿಯಾದರೆ ಏನು ಆಗಬಹುದು ಎಂಬುದನ್ನು ಈಗಾಗಲೇ ಎಲ್ಲಾ ಕಡೆಗಳಲ್ಲಿ ಪ್ರಾಕೃತಿಕ ವಿಕೋಪ ತೋರಿಸಿಕೊಟ್ಟಿದೆ. ಆದರೆ ಸರಕಾರ ಮಾತ್ರ ಇನ್ನೂ ಎಚ್ಚೆತ್ತುಕೊಂಡಿಲ್ಲ. ಅಭಿವೃದ್ಧಿ ಹೆಸರಿನಲ್ಲಿ ಪರಿಸರ ನಾಶದ ಘೋರ ಪರಿಣಾಮದಿಂದ ಪರಿಸರದ ಅಸಮತೋಲನಗಳು ಕಾಣ ಸಿಗುತ್ತಿವೆ. ಪರಿಸರಕ್ಕೆ ಸಂಬಂಧಿಸಿದಂತೆ ಮತ್ತೊಂದು ದುರಂತಕ್ಕೆ ಉಡುಪಿಯಲ್ಲಿ ಗುದ್ದಲಿ ಪೂಜೆ ನಡೆಸಲಾಗಿದೆ. ಸರಕಾರಿ ಬಸ್ ನಿಲ್ದಾಣಕ್ಕಾಗಿ ಬೃಹತ್ತಾಗಿ ಬೆಳೆದಿರುವ ಮರಗಳನ್ನು ಉರುಳಿಸಲಾಗುತ್ತಿದೆ.

-ಪ್ರೇಮಾನಂದ ಕಲ್ಮಾಡಿ, ಪರಿಸರವಾದಿ

ಉಡುಪಿಯಲ್ಲಿ ಅದೆಷ್ಟೋ ಕೈಗಾರಿಕೆಗಳು ಕಾಲಿಟ್ಟಿವೆ. ಈಗಾಗಲೇ ಉಡುಪಿ ಯಲ್ಲಿ ಬೂದಿ ಮಳೆ ಬಿದ್ದಾಗಿದೆ. ಮರಗಳನ್ನ ಸಂರಕ್ಷಿಸದಿದ್ದರೆ ಮುಂದಿನ ದಿನಗಳಲ್ಲಿ ನಡೆಯುವ ಘೋರ ಆಪತ್ತಿನ ಅಪಾಯವನ್ನು ಎದುರಿಸಲು ಸಜ್ಜಾಗ ಬೇಕಾಗಿದೆ. ಉಡುಪಿಯ ನಾಗರಿಕರು ಎಚ್ಚೆತ್ತು ಮರಗಳನ್ನು ಉಳಿಸಲು ಮುಂದಾಗಬೇಕಾಗಿದೆ.

-ವಿನಯಚಂದ್ರ, ಪರಿಸರ ಪ್ರೇಮಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News