ಪಾಕ್: 70 ವಿಲಾಸಿ ಕಾರುಗಳನ್ನು ಮಾರಿದ ಸರಕಾರ

Update: 2018-09-17 16:27 GMT

ಇಸ್ಲಾಮಾಬಾದ್, ಸೆ. 17: ಪ್ರಧಾನಿ ಇಮ್ರಾನ್ ಖಾನ್‌ರ ಮಿತವ್ಯಯ ಯೋಜನೆಯ ಭಾಗವಾಗಿ, ಪಾಕಿಸ್ತಾನ ಸರಕಾರವು ಸೋಮವಾರ ಕೆಲವು ಗುಂಡುನಿರೋಧಕ ಕಾರುಗಳು ಸೇರಿದಂತೆ 70 ವೈಭವೋಪೇತ ಕಾರುಗಳನ್ನು ಮಾರಾಟ ಮಾಡಿದೆ.

ಒಟ್ಟು 102 ಭವ್ಯ ಕಾರುಗಳನ್ನು ಹರಾಜುಹಾಕಲು ಪಾಕಿಸ್ತಾನ ಸರಕಾರ ನಿರ್ಧರಿಸಿರುವುದನ್ನು ಸ್ಮರಿಸಬಹುದಾಗಿದೆ. ಅಗಾಧ ಪ್ರಮಾಣದಲ್ಲಿ ಸಾಲದ ಹೊರೆಯನ್ನು ಹೊತ್ತಿರುವ ಪಾಕಿಸ್ತಾನವು, ಭವ್ಯ ಕಾರುಗಳ ಜೊತೆಗೆ 8 ಎಮ್ಮೆಗಳನ್ನೂ ಹರಾಜು ಹಾಕಲು ಇಮ್ರಾನ್ ಸರಕಾರ ನಿರ್ಧರಿಸಿದೆ. ಈ ಎಮ್ಮೆಗಳನ್ನು ಮಾಜಿ ಪ್ರಧಾನಿ ನವಾಝ್ ಶರೀಫ್ ಪ್ರಧಾನಿ ನಿವಾಸದಲ್ಲಿ ಇಟ್ಟುಕೊಂಡಿದ್ದರು. ವಿಶಿಷ್ಟ ಖಾದ್ಯಗಳ ತಯಾರಿಕೆಗಾಗಿ ಆ ಎಮ್ಮೆಗಳನ್ನು ವಿಶೇಷವಾಗಿ ಸಾಕಲಾಗುತ್ತಿತ್ತು.

ಅದೂ ಅಲ್ಲದೆ, ಕ್ಯಾಬಿನೆಟ್ ವಿಭಾಗದಲ್ಲಿ ಬಳಕೆಯಾಗದೆ ಬಿದ್ದಿರುವ ನಾಲ್ಕು ಹೆಚ್ಚುವರಿ ಹೆಲಿಕಾಪ್ಟರ್‌ಗಳನ್ನೂ ಸರಕಾರ ಮಾರಾಟ ಮಾಡಲಿದೆ ಎಂದು ಪ್ರಧಾನಿಯ ರಾಜಕೀಯ ವ್ಯವಹಾರಗಳ ವಿಶೇಷ ಸಲಹಾಕಾರ ನಯೀಮುಲ್ ಹಕ್ ತಿಳಿಸಿದರು. 34 ದೇಶಿ ನಿರ್ಮಿತ ಕಾರುಗಳನ್ನು ಹರಾಜು ಹಾಕಲಾಗಿದೆ ಎಂದು ‘ಜಿಯೋ ನ್ಯೂಸ್’ ವರದಿ ಮಾಡಿದೆ. ಎರಡನೇ ಹಂತದಲ್ಲಿ 41 ಆಮದಿತ ಕಾರುಗಳನ್ನು ಹರಾಜು ಹಾಕಲಾಗುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News