ಕರವೇ ಪಾದಯಾತ್ರೆಗೆ ಅನುಮತಿ ನಿರಾಕರಣೆ: ಪೊಲೀಸ್ ಠಾಣೆಯಲ್ಲಿ ಕುಸಿದು ಬಿದ್ದ ಕರವೇ ಮುಖಂಡ

Update: 2018-09-17 16:05 GMT

ಉಡುಪಿ, ಸೆ.17: ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ್ ಶೆಟ್ಟಿ ಬಣ) ಉಡುಪಿ ಜಿಲ್ಲಾ ಘಟಕದ ವತಿಯಿಂದ ಆಳ್ವಾಸ್ ವಿದ್ಯಾಸಂಸ್ಥೆ ವಿರುದ್ಧ ನಡೆಸಲು ಉದ್ದೇಶಿಸಿದ್ದ ಪಾದಯಾತ್ರೆಗೆ ಅನುಮತಿ ನಿರಾಕರಣೆ ಹಾಗೂ ಅಪರಿಚಿತರ ಬೆದರಿಕೆ ಕರೆಯ ಹಿನ್ನೆಲೆಯಲ್ಲಿ ಕರವೇ ಜಿಲ್ಲಾಧ್ಯಕ್ಷ ಅನ್ಸಾರ್ ಅಹ್ಮದ್ ಸೆ.16 ರಂದು ರಾತ್ರಿ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕುಸಿದು ಬಿದ್ದು ಆಸ್ಪತ್ರೆಗೆ ದಾಖಲಾಗಿರುವ ಬಗ್ಗೆ ವರದಿಯಾಗಿದೆ.

ಮೂಡಬಿದ್ರೆಯ ಆಳ್ವಾಸ್ ವಿದ್ಯಾಸಂಸ್ಥೆಯಲ್ಲಿ ನಡೆಯುತ್ತಿರುವ ವಿದ್ಯಾರ್ಥಿನಿ ಯರ ಆತ್ಮಹತ್ಯೆ ಪ್ರಕರಣಗಳ ಬಗ್ಗೆ ರಾಜ್ಯ ಸರಕಾರ ಉನ್ನತ ಮಟ್ಟದ ತನಿಖೆ ಯನ್ನು ನಡೆಸುವಂತೆ ಆಗ್ರಹಿಸಿ ಸೆ.17ರಂದು ಹೆಜಮಾಡಿ ಟೋಲ್‌ಗೇಟ್‌ನಿಂದ ಮಣಿಪಾಲದ ಉಡುಪಿ ಜಿಲ್ಲಾಧಿಕಾರಿ ಕಚೇರಿಯವರೆಗೆ ಪಾದಯಾತ್ರೆ ಮೂಲಕ ಸಾಗಿ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸುವ ಕಾರ್ಯ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಆದರೆ ಇದಕ್ಕೆ ಪೊಲೀಸ್ ಇಲಾಖೆ ಅನುಮತಿ ನಿರಾಕರಿಸಿದ್ದು, ಈ ಮಧ್ಯೆ ಪಾದಯಾತ್ರೆ ಸಂಬಂಧಿಸಿ ಅನ್ಸಾರ್ ಅಹ್ಮದ್‌ಗೆ ಅಪರಿಚಿತ ವ್ಯಕ್ತಿಗಳಿಂದ ಜೀವ ಬೆದರಿಕೆ ಕರೆ ಬರುತ್ತಿತ್ತೆನ್ನಲಾಗಿದೆ. ಈ ಬಗ್ಗೆ ರಾತ್ರಿ ದೂರು ನೀಡಲು ಉಡುಪಿ ನಗರ ಪೊಲೀಸ್ ಠಾಣೆಗೆ ತೆರಳಿದ್ದ ಅನ್ಸಾರ್ ಅಹ್ಮದ್ ಠಾಣೆಯಲ್ಲೇ ಅಸ್ವಸ್ಥ ರಾಗಿ ಕುಸಿದು ಬಿದ್ದರೆಂದು ತಿಳಿದುಬಂದಿದೆ. ಬಳಿಕ ಅವರನ್ನು ಪೊಲೀಸರು ಮತ್ತು ಕಾರ್ಯಕರ್ತರು ಉಡುಪಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ‘ಕಾನೂನು ಸುವ್ಯವಸ್ಥೆಯ ಕಾರಣ ನೀಡಿ ಪೊಲೀಸರು ಪಾದಯಾತ್ರೆಗೆ ಅಸಹಕಾರ ವ್ಯಕ್ತಪಡಿಸಿರುವ ಕ್ರಮವನ್ನು ಕರವೇ ಜಿಲ್ಲಾ ಘಟಕ ತೀವ್ರವಾಗಿ ಖಂಡಿಸುತ್ತದೆ’ ಎಂದು ಕರವೇ ಜಿಲ್ಲಾಧ್ಯಕ್ಷ ಅನ್ಸಾರ್ ಅಹ್ಮದ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News