ನ.15ರಿಂದ ಆಳ್ವಾಸ್ ಕೃಷಿಸಿರಿ ಆರಂಭ

Update: 2018-09-17 17:01 GMT

ಮೂಡುಬಿದಿರೆ, ಸೆ. 17: ಇಲ್ಲಿನ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ವಾರ್ಷಿಕ ಉತ್ಸವವಾಗಿ ನಡೆಸಿಕೊಂಡು ಬರುತ್ತಿರುವ ಕನ್ನಡ ನಾಡು-ನುಡಿ-ಸಂಸ್ಕೃತಿಯ  ರಾಷ್ಟ್ರೀಯ ಸಮ್ಮೇಳನ “ಆಳ್ವಾಸ್ ನುಡಿಸಿರಿ”ಯನ್ನು  ನ.16, 17 ಮತ್ತು 18ರಂದು ಮೂರು ದಿನಗಳ ಕಾಲ  ಶ್ರೀಮತಿ ಸುಂದರಿ ಆನಂದ ಆಳ್ವ ಆವರಣದಲ್ಲಿ ನಡೆಯಲಿದ್ದು ಈ ಸಂದರ್ಭದಲ್ಲಿ ಸಾಹಿತ್ಯ, ಸಂಸ್ಕೃತಿಗಳೊಡನೆ ಜನಜೀವನಕ್ಕೆ ಮೂಲಾಧಾರವಾಗಿರುವ ಕೃಷಿಯನ್ನೂ ಮುನ್ನೆಲೆಗೆ ತರಬೇಕೆಂಬ ಇರಾದೆಯಿಂದ ನ.15ರ ಸಂಜೆಯಿಂದ "ಆಳ್ವಾಸ್ ಕೃಷಿಸಿರಿ" ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ.ಮೋಹನ ಆಳ್ವ ತಿಳಿಸಿದ್ದಾರೆ.

ಅವರು ಸೋಮವಾರ ತನ್ನ ಕಚೇರಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಫಿಶರೀಶ್ ಇಲಾಖೆ, ಕೃಷಿ ಇಲಾಖೆ, ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ, ಕೃಷಿಕ ಸಮಾಜ, ಕೃಷಿ ವಿಚಾರ ವಿನಿಮಯ ಕೇಂದ್ರ ಮೂಡುಬಿದಿರೆ ಮತ್ತು ರೈತಸಂಘಗಳ ಸಹಯೋಗಗಳೊಂದಿಗೆ ಹಮ್ಮಿಕೊಂಡ ಈ ಕೃಷಿ ಸಮ್ಮೇಳನದಲ್ಲಿ ಕೃಷಿ ಸಂಬಂಧಿ ಚಟುವಟಿಕೆಗಳ ಪ್ರಾತ್ಯಕ್ಷಿಕೆ, ಪ್ರದರ್ಶನ ಹಾಗೂ ಮಾರಾಟಗಳನ್ನು ಹಮ್ಮಿಕೊಳ್ಳಲಾಗಿದ್ದು ನ. 15ರಂದು ಸಂಜೆ 5 ಗಂಟೆಗೆ ಉದ್ಘಾಟನೆಗೊಂಡು  16ರಿಂದ 18ರ ವರೆಗೆ 3 ದಿನಗಳು ನಡೆಯಲಿದೆ ಎಂದರು.

ಆಳ್ವಾಸ್ ಕೃಷಿಸಿರಿ ಆವರಣಕ್ಕೆ 'ಕೆ.ಎಸ್.ಪುಟ್ಟಣ್ಣಯ್ಯ' ಹೆಸರು

ಹಿರಿಯ ರೈತಮುಖಂಡ, ಕೃಷಿಪ್ರೇಮಿ, ರೈತ ಹೋರಾಟಗಾರ ದಿ.ಕೆ.ಎಸ್.ಪುಟ್ಟಣ್ಣಯ್ಯನವರ ಗೌರವಾರ್ಥ ಆಳ್ವಾಸ್ ಕೃಷಿಸಿರಿ-ಕೃಷಿ ಮೇಳ ನಡೆಯುವ ಆವರಣಕ್ಕೆ 'ಕೆ.ಎಸ್.ಪುಟ್ಟಣ್ಣಯ್ಯ ಆವರಣ' ಎಂದು ನಾಮಕರಣ ಮಾಡಲಾಗಿದೆ.

ಆಳ್ವಾಸ್ ಕೃಷಿಸಿರಿ-2018ರ ವಿಶೇಷತೆಗಳು 

ಈ ಸಮ್ಮೇಳನಕ್ಕಾಗಿ ಎರಡು ಎಕ್ರೆ ಪ್ರದೇಶದಲ್ಲಿ ಊರಿನ ಸಾಂಪ್ರದಾಯಿಕ ಮಾದರಿಯಲ್ಲಿ ತರಕಾರಿಗಳನ್ನು ಬೆಳೆಯಲಾಗಿದೆ. 44 ವಿಧದ ಬಿದಿರಿನ ಗಿಡಗಳು ಹಾಗೂ 40 ವಿಧದ ಬಿದಿರುಗಳ ಪ್ರದರ್ಶನ, ನ್ಯೂಜಿಲೇಂಡ್ ಮೂಲದ ವಿಶಿಷ್ಟ ಬಣ್ಣಗಳ ಹಾಗೂ ಆಹಾರಕ್ಕಾಗಿ ಬಳಸುವ ಸಸ್ಯಗಳ ಪ್ರದರ್ಶನ, ಪುಷ್ಪ ಪ್ರದರ್ಶನ ಮತ್ತು ತರಕಾರಿ ಹಾಗೂ ಹಣ್ಣುಗಳಲ್ಲಿ ಕಲಾಕೃತಿಗಳ ರಚನೆಯ ಪ್ರದರ್ಶನಗಳನ್ನು ಏರ್ಪಡಿಸಲಾಗಿದೆ. ಜೊತೆಗೆ ಕೃಷಿ ಸಾಹಿತ್ಯ-ಸಲಕರಣೆಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳಿಗೂ ಅವಕಾಶ ನೀಡಲಾಗಿದೆ. ವಿಶೇಷ ಆಕರ್ಷಣೆಯಲ್ಲಿ ಮತ್ಸ್ಯಮೇಳ, ಸಮುದ್ರ ಚಿಪ್ಪು ಪ್ರದರ್ಶನ, ಶ್ವಾನ ಪ್ರದರ್ಶನ. ಪಕ್ಷಿಗಳ ಪ್ರದರ್ಶನ, ಬೆಕ್ಕು ಪ್ರದರ್ಶನಗಳನ್ನು ಆಯೋಜಿಸಲಾಗಿದೆ.

ಅಸಂಖ್ಯ ಕೃಷಿ ಸಂಬಂಧಿ-ಸಲಕರಣೆ-ಪರಿಕರ ಮತ್ತು ಕೃಷಿ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಮಳಿಗೆಗಳು ಒಂದೆಡೆ ಸೇರಲಿವೆ. ಆಸಕ್ತರ ವೀಕ್ಷಣೆ ಮತ್ತು ಖರೀದಿಗೆ ಇದೊಂದು ಸುವರ್ಣಾವಕಾಶವಾಗಿದೆ. ಜೊತೆಗೆ ಆಸಕ್ತರ ಮನತಣಿಸಲು ದಿನವಿಡೀ ಸಾಂಸ್ಕøತಿಕ ಕಾರ್ಯಕ್ರಮಗಳನ್ನೂ ಇಲ್ಲಿನ ವೇದಿಕೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಮಳಿಗೆದಾರರು ಮತ್ತು ವೀಕ್ಷಕರೆಲ್ಲರಿಗೂ ಉಚಿತ ಊಟೋಪಚಾರದ ವ್ಯವಸ್ಥೆ ಇದೆ. ಆಸಕ್ತರಿಗೆ ವಸತಿಯ ವ್ಯವಸ್ಥೆಯನ್ನೂ ಮಾಡಲಾಗುವುದು.

ದಿನಂಪ್ರತಿ ಒಂದು ಲಕ್ಷಕ್ಕೂ ಮಿಕ್ಕಿ ಸಾಹಿತಿಗಳು, ಸಾಹಿತ್ಯ ಪ್ರೇಮಿಗಳು, ಕಲಾವಿದರು, ಕೃಷಿಕರು, ಕೃಷಿಪ್ರೇಮಿಗಳು, ಸಾರ್ವಜನಿಕರು, ಮಕ್ಕಳಿಂದ ತೊಡಗಿ ವಯೋವೃದ್ಧರವರೆಗೆ ವಿವಿಧ ವಯೋಮಾನದ, ವಿವಿಧ ಅಭಿರುಚಿಗಳ ಜನರನ್ನು ಈ ಸಮ್ಮೇಳನವು ಆಕರ್ಷಿಸುವುದರಲ್ಲಿ ಸಂಶಯವಿಲ್ಲ. ಅದಕ್ಕೆ ಸಂಬಂಧಿಸಿದ ಎಲ್ಲಾ ಕೆಲಸ ಕಾರ್ಯಗಳು ಭರದಿಂದ ಸಾಗುತ್ತಿದೆ ಎಂದು ತಿಳಿಸಿದರು.

ಸಂಪರ್ಕಕ್ಕಾಗಿ : ಶ್ರೀರಾಜವರ್ಮ ಬೈಲಂಗಡಿ - 9845276622 Email : rajavarmabylangady@gmail.com, rajavarmabylangady@gmail.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News