ಬಲಿಪ ನಾರಾಯಣ ಭಾಗವತರಿಗೆ ಪಾರ್ತಿ ಸುಬ್ಬ ಪ್ರಶಸ್ತಿ

Update: 2018-09-17 17:07 GMT

ಮೂಡುಬಿದಿರೆ, ಸೆ. 17: ತೆಂಕುತಿಟ್ಟು ಯಕ್ಷಗಾನ ರಂಗದ ಹೆಸರಾಂತ ಹಿರಿಯ ಭಾಗವತ ಬಲಿಪ ನಾರಾಯಣ ಭಾಗವತರು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಪಾರ್ತಿ ಸುಬ್ಬ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ರೂ. 1 ಲಕ್ಷ ನಗದು ಪುರಸ್ಕಾರ ಹೊಂದಿದ್ದು. ಇದೇ ವೇಳೆಗೆ, ಕಳೆದ ಬಾರಿ  ಬಲಿಪರು ಬರೆದ 14 ಪ್ರಸಂಗಗಳನ್ನು ಒಳಗೊಂಡ ಯಕ್ಷಧ್ರುವ ಪಟ್ಲ ಫೌಂಡೇಶನ್ ಪ್ರಕಟಿಸಿರುವ `ಜಯಲಕ್ಷ್ಮೀ' ಕೃತಿಯು ಯಕ್ಷಗಾನ ಅಕಾಡೆಮಿಯು ನೀಡುವ ರೂ.25,000 ಮೊತ್ತದ ನಗದು ಪುರಸ್ಕಾರಕ್ಕೆ ಆಯ್ಕೆಯಾಗಿದೆ.

ಪೂರ್ವರಂಗ ಸಂಗೀತದ ಬಗ್ಗೆ ನಿಖರವಾದ ಮಾಹಿತಿ ಕೊಡಬಲ್ಲ ವಿರಳ ಭಾಗವತರಲ್ಲಿ  ಓರ್ವರಾದ 80ರ ಹರೆಯದ ಬಲಿಪ ಭಾಗವತರು 6 ದಶಕಗಳಿಗೂ ಮಿಗಿಲಾಗಿ ಯಕ್ಷರಂಗದಲ್ಲಿ ತಮ್ಮ ಅರ್ಹತೆ, ಸಾಧನೆಗಳಿಂದ  ದಂತಕತೆಯಾಗಿದ್ದಾರೆ.

ಅಂಗ್ರಾಜೆ ಮನೆತನದಲ್ಲಿ 1938ರ ಮಾರ್ಚ್ 13ರಂದು ಕಾಸರಗೋಡು ಪಡ್ರೆಯಲ್ಲಿ ಮಾಧವ ಬಲಿಪ -ಸರಸ್ವತಿ ದಂಪತಿಯ  ಪುತ್ರರಾಗಿ ಜನಿಸಿದ ಬಲಿಪ ನಾರಾಯಣ ಅವರು 7ನೇ ತರಗತಿವರೆಗೆ ಶಾಲಾ ಶಿಕ್ಷಣವನ್ನು ಪಡೆದಿದ್ದರೂ ಸಾಹಿತ್ಯಾಭ್ಯಾಸದಿಂದ, ವಿಶೇಷವಾಗಿ ಪ್ರಸಂಗ ಸಾಹಿತ್ಯಗಳಿಂದ ತಮ್ಮ ಅಧ್ಯಯನ ಶೀಲತೆಯನ್ನು ಬೆಳೆಸಿಕೊಂಡಿದ್ದಾರೆ. ಇವರ ಅಜ್ಜ , ದೊಡ್ಡ ಬಲಿಪರು ಎಂದೇ ಹೆಸರಾದ ಬಲಿಪ ನಾರಾಯಣ ಹುಟ್ಟು ಹಾಕಿದ ಬಲಿಪ ಮಟ್ಟು  ಎಂಬ ಶೈಲಿಯನ್ನು ಕರಗತ ಮಾಡಿಕೊಂಡು, ತಂದೆ ಬಲಿಪ ಭಾಗವತರಲ್ಲಿಯೂ ಭಾಗವತಿಕೆ ಅಭ್ಯಾಸ ನಡೆಸಿದ ಈ ಕಿರಿಯ  ಬಲಿಪ ಭಾಗವತರು 13ರ ಹರೆಯದಲ್ಲೇ ಯಕ್ಷರಂಗ ಪ್ರವೇಶಿಸಿದವರು.

ಕಪ್ಪು 3, ಬಿಳಿ ನಾಲ್ಕರ ಏರುಶ್ರುತಿಯಲ್ಲಿ , ಇಡೀ ರಾತ್ರಿ, ನಿಂತೇ ಹಾಡಬಲ್ಲವರು ಬಲಿಪರು. ಆಶುಕವಿ, ಪ್ರಸಂಗದೊಂದಿಗೇ ಹಾಡಿನ ಸಾಲು ಹೊಸೆದು ಹಾಡಬಲ್ಲವರು. ಅವರು ರಚಿಸಿದ 50 ಪ್ರಸಂಗಗಳಲ್ಲಿ 30 ಪ್ರಸಂಗಗಳು ಮುದ್ರಿತವಾಗಿವೆ. ಕಳೆದ ವರ್ಷ ಯಕ್ಷಧ್ರುವ ಪಟ್ಲ ಫೌಂಡೇಶನ್ ಬಲಿಪರ ಆಯ್ದ 14 ಪ್ರಸಂಗಳಿರುವ `ಜಯಲಕ್ಷ್ಮೀ' ಹೆಸರಿನ ಕೃತಿಯನ್ನು  ಮುದ್ರಿಸಿದೆ. ಬಲಿಪರು 5 ದಿನಗಳಲ್ಲಿ ಹಾಡಬಲ್ಲ  `ಶ್ರೀ ದೇವೀ ಮಹಾತ್ಮೆ'ಯನ್ನು ರಚಿಸಿದವರು. 

ಮುಲ್ಕಿ, ಕೂಡ್ಲು, ಕುಂಡಾವು ಮೇಳಗಳಲ್ಲಿ ಸೇವೆ ಸಲ್ಲಿಸಿದ ಬಳಿಕ ಕಟೀಲು ಮೇಳದಲ್ಲಿ ಸುಮಾರು 40 ವರ್ಷಗಳಷ್ಟು ಸುದೀರ್ಘ ಕಾಲ ಭಾಗವತರಾಗಿ ಸೇವೆ ಸಲ್ಲಿಸಿದವರು. ಸ್ವತ: ಪಡ್ರೆ ಜಟಾಧಾರಿ ಮೇಳವನ್ನು ನಡೆಸಿದ ಅನುಭವಿ. ನೂರಾರು ಧ್ವನಿಸುರುಳಿ, ಸಿಡಿ ತಟ್ಟೆಗಳಲ್ಲಿ ಬಲಿಪರು ದಾಖಲಾಗಿದ್ದಾರೆ. ಅನೇಕ ಕಡೆಗಳಲ್ಲಿ  ಅಪೂರ್ವ ರಾಗಗಳ ದಾಖಲೀಕರಣದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಗಾನ ವೈಭವಗಳಲ್ಲಿ  ಹಿರಿಯ ಕಿರಿಯ ಭಾಗವತರೊಂದಿಗೆ ಹಾಡಿದ್ದಾರೆ. 

4 ದಶಕಗಳಿಂದ ಮೂಡುಬಿದಿರೆ ಬಳಿಯ ಮಾರೂರು ನೂಯಿ ಎಂಬಲ್ಲಿ  ಕೃಷಿ ಸಂಸ್ಕøತಿಯೊಂದಿಗೆ ವಾಸವಾಗಿರುವ ಬಲಿಪರಿಗೆ 75 ವರ್ಷ ತುಂಬಿದ ಸಂದರ್ಭ ಅವರ ಅಭಿಮಾನಿಗಳು ಸೇರಿ ಅವರ ಮನೆಯ ಪಕ್ಕದಲ್ಲೇ  `ಬಲಿಪ ಭವನ' ನಿರ್ಮಿಸಿಕೊಟ್ಟಿರುವುದು ಯಕ್ಷಗಾನ ಕಲಾವಿದರೊಬ್ಬರಿಗೆ ಅವರ ಜೀವಮಾನದಲ್ಲೇ ಸಂದ ದೊಡ್ಡ ಅಭಿಮಾನದ ಕೊಡುಗೆ.

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಸಾಮಗ ಪ್ರಶಸ್ತಿ, ಶೇಣಿ ಪ್ರಶಸ್ತಿ, ಅಗರಿ ಪ್ರಶಸ್ತಿ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಜ್ಞಾನ ಪ್ರಶಸ್ತಿ, ಮುದ್ದಣ ಪುರಸ್ಕಾರ, ಕರ್ನಾಟಕ ಶ್ರೀ ಪ್ರಶಸ್ತಿ, ಕಳೆದ ವರ್ಷ ರೂ. 1 ಲಕ್ಷದ ನಗದು ಸಹಿತ ಯಕ್ಷಧ್ರುವ ಪಟ್ಲ ಫೌಂಡೇಶನ್ ನೀಡಿದ ಪಟ್ಲ ಪ್ರಶಸ್ತಿ , ಮೂಡುಬಿದಿರೆಯ ನುಡಿಸಿರಿ ಪ್ರಶಸ್ತಿ, ಯಕ್ಷಸಂಗಮವೇ ಮೊದಲಾದ ಸಂಘಟನೆಗಳಿಂದ  ಪ್ರಶಸ್ತಿ, ಸಮ್ಮಾನಗಳು ಅವರಿಗೆ ಸಂದಿವೆ. ದುಬೈ ಸೇರಿದಂತೆ ದೇಶ, ವಿದೇಶಗಳಲ್ಲಿ ಅಭಿಮಾನಿಗಳು ಅವರನ್ನು  ಪ್ರಶಸ್ತಿ ಸಹಿತ ಸಮ್ಮಾನಿಸಿದ್ದಾರೆ.  

ಬಲಿಪ ನಾರಾಯಣ ಭಾಗವತರ ನಾಲ್ವರು ಪುತ್ರರಲ್ಲಿ  ಬಲಿಪ ಮಾಧವ ಭಟ್ಟರು ಮದ್ದಳೆವಾದಕ,  ಬಲಿಪ ಪ್ರಸಾದ್ ಭಟ್ಟರು ಕಟೀಲು ಮೇಳದಲ್ಲಿ ಭಾಗವತ, ಶಿವಶಂಕರ ಭಟ್ಟರು ಹವ್ಯಾಸಿ ಭಾಗವತರಾಗಿದ್ದರೆ ಶಶಿಧರ ಭಟ್ಟರು ಕೃಷಿಕರಾಗಿದ್ದಾರೆ. 

ಬಲಿಪ ಭಾಗವತರಿಗೆ ಪಾರ್ತಿ ಸುಬ್ಬ ಪ್ರಶಸ್ತಿ ಲಭಿಸಿರುವುದಕ್ಕೆ  ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ, ಮೂಡುಬಿದಿರೆ `ಯಕ್ಷಸಂಗಮ'ದ ಸಂಚಾಲಕ ಎಂ.ಶಾಂತರಾಮ ಕುಡ್ವ, ಯಕ್ಷ  ಮೇನಕಾ ಕಾರ್ಯಾಧ್ಯಕ್ಷ  ನೆಲ್ಲಿಮಾರು ಸದಾಶಿವ ರಾವ್ ಮೊದಲಾದವರು ಹರ್ಷ ವ್ಯಕ್ತಪಡಿಸಿದ್ದಾರೆ.

ಪಾರ್ತಿಸುಬ್ಬನ ಎಲ್ಲ ಪ್ರಸಂಗಗಳ ಪದ್ಯಗಳನ್ನು ಕಂಟಸ್ಥವಾಗಿ ಈಗಲೂ ಹಾಡಬಲ್ಲೆ. ಅವರ ಹೆಸರಲ್ಲಿ ದೊರೆಯುವ ಈ ಪ್ರಶಸ್ತಿಯ ಬಗ್ಗೆ ನನಗೆ ಗೌರವವಿದೆ. ಆದರೆ ವೃತ್ತಿಯಲ್ಲಿರುವಾಗಲೇ ಈ ಪ್ರಶಸ್ತಿ ಲಭಿಸುತ್ತಿದ್ದರೆ ನಿವೃತ್ತಿಯ ಬಳಿಕ ದೊರೆಯುವ ಸಂತಸಕ್ಕಿಂತಲೂ ಅಧಿಕವಾದ ಸಂತಸವನ್ನು ಪಡೆಯುತ್ತಿದ್ದೆ.

-ಬಲಿಪ ನಾರಾಯಣ ಭಾಗವತ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News