ಹಾಸ್ಯ ಕಲಾವಿದ ಕಟಪಾಡಿ ಖಾದರ್ ನಿಧನ

Update: 2018-09-18 12:33 GMT

ಶಿರ್ವ, ಸೆ.18: ಕಟಪಾಡಿಯ ಹಿರಿಯ ಹಾಸ್ಯ ನಾಟಕ ಕಲಾವಿದ, ಸಾವಿರ ನಾಟಕಗಳ ಸರದಾರ ಕಟಪಾಡಿಯ ವ್ಯಾಪಾರಿ ಫಕೀರ್ ಬ್ಯಾರಿ ಅವರ ಪುತ್ರ ಅಬ್ದುಲ್ ಖಾದರ್ ಕಟಪಾಡಿ(58) ಹೃದಯಾಘಾತದಿಂದ ರವಿವಾರ ರಾತ್ರಿ ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಹಿರಿಯ ರಂಗಕರ್ಮಿ ಪಿ.ಬಿ.ರೈ ಸಾರಥ್ಯದ ನಂದಿಕೇಶ್ವರ ನಾಟಕ ಕಂಪೆನಿ ಯಲ್ಲಿ ಸುಮಾರು ಮೂರು ದಶಕಗಳ ಕಾಲ ಪ್ರಮುಖ ಹಾಸ್ಯ ಕಲಾವಿದನಾಗಿ ಮಿಂಚಿದ್ದ ಕಟಪಾಡಿ ಖಾದರ್, ಈ ಕಂಪೆನಿಯ ಮೂಲಕ ಕರ್ನಾಟಕ ರಾಜ್ಯಾದಾದ್ಯಂತ ತಿರುಗಾಟ ನಡೆಸಿ ಸಹಸ್ರಾರು ಕನ್ನಡ ,ತುಳು ನಾಟಕಗಳನ್ನು ಪ್ರದರ್ಶಿಸಿ ಮನೆಮಾತಾಗಿದ್ದರು.

ಸಾವಿರಾರು ಪ್ರದರ್ಶನಗಳನ್ನು ಕಂಡಿರುವ ಕಂಪೆನಿ ನಾಟಕದ ಪ್ರಸಿದ್ಧ ಗೌಡ್ರ ಗದ್ಲ, ಮುದುಕನ ಮದುವೆ ನಾಟಕಗಳಲ್ಲಿ ಇವರು ಪ್ರಧಾನ ಹಾಸ್ಯ ಪಾತ್ರವನ್ನು ಮಾಡಿದ್ದಾರೆ. ನಾಟಕ ಕಂಪೆನಿಯಲ್ಲಿ ಚಿತ್ರನಟಿ ಉಮಾಶ್ರೀ, ಸುಧೀರ್, ಡಿಂಗ್ರಿ ನಾಗರಾಜ್, ಬ್ಯಾಂಕ್ ಜನಾದರ್ನ್, ವಜ್ರಮುನಿ, ಮುಸುರಿ ಕೃಷ್ಣಮೂರ್ತಿ, ಚಿಂದೋಡಿ ಲೀಲಾ ಜೊತೆ ನಟಿಸಿರುವ ಇವರು ಯುವ ನಾಟಕ ಹಾಗೂ ಚಿತ್ರಕಲಾವಿದರಾದ ಶೋಭಾ ರೈ ಮತ್ತು ರಾಘವೇಂದ್ರ ರೈಗೆ ಮಾರ್ಗದರ್ಶಕ ರಾಗಿದ್ದರು. ಮೃತರು ಪತ್ನಿ, ಮೂವರು ಪುತ್ರಿಯರು, ಓರ್ವ ಪುತ್ರನನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News