ಬಿಪಿಎಲ್‌ನ ಪ್ರತೀ ಕುಟುಂಬಕ್ಕೆ 5 ಲಕ್ಷ ರೂ. ಆರೋಗ್ಯ ನೆರವು: ಸಚಿವ ಶಿವಾನಂದ ಪಾಟೀಲ

Update: 2018-09-18 13:30 GMT

ಮಂಗಳೂರು, ಸೆ.18: ಕೇಂದ್ರ ಸರಕಾರದ ವತಿಯಿಂದ ಆಯುಷ್ಮಾನ್ ಭಾರತ್ ಯೋಜನೆ ಅನುಷ್ಠಾನಗೊಳ್ಳಲಿದ್ದು, ಅದರ ಜತೆಗೆ ರಾಜ್ಯ ಸರಕಾರದ ಆರೋಗ್ಯ ಕರ್ನಾಟಕ ಯೋಜನೆಯನ್ನು ಸೇರಿಸಿಕೊಂಡು 1600ಕ್ಕೂ ಅಧಿಕ ರೋಗಗಳಿಗೆ ಉಚಿತವಾಗಿ ಚಿಕಿತ್ಸೆ ನೀಡುವ ಯೋಜನೆಗೆ ಈಗಾಗಲೇ ಒಡಂಬಡಿಕೆ ಮಾಡಲಾಗಿದೆ. ಇದರಡಿ ಬಿಪಿಎಲ್ ಕುಟುಂಬಕ್ಕೆ 5 ಲಕ್ಷ ರೂ. ಮಿತಿಯಲ್ಲಿ ಉಚಿತ ಆರೋಗ್ಯ ಸೇವೆ ದೊರೆಯಲಿದೆ ಎಂದು ರಾಜ್ಯ ಆರೋಗ್ಯ ಸಚಿವ ಶಿವಾನಂದ ಎಸ್.ಪಾಟೀಲ ಹೇಳಿದರು.

ದ.ಕ. ಜಿಲ್ಲಾಡಳಿತ ಹಾಗೂ ವಿವಿಧ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಮಂಗಳೂರಿನ ಪುರಭವನದಲ್ಲಿ ಮಂಗಳವಾರ ಆಯೋಜಿಸಲಾದ ಕಾರ್ಯ ಕ್ರಮದಲ್ಲಿ ದಿವ್ಯಾಂಗಚೇತನರಿಗೆ ಮತ್ತು ಮಕ್ಕಳ ಪಾಲನಾ ಸಂಸ್ಥೆಗಳಿಗೆ ಎಂಆರ್‌ಪಿಎಲ್ ನೆರವಿನೊಂದಿಗೆ 1.85 ಕೋ.ರೂ. ಮೌಲ್ಯದ ಸಾಧನ-ಸಲಕರಣೆಗಳನ್ನು ವಿತರಿಸಿ ಅವರು ಮಾತನಾಡಿದರು.

ಈ ಯೋಜನೆಯಿಂದಾಗಿ ರಾಜ್ಯದ ಒಟ್ಟು 1.20 ಕೋಟಿ ಕುಟುಂಬಗಳಿಗೆ ನೆರವಾಗಲಿದೆ ಎಂದು ಸಚಿವರು ಹೇಳಿದರು.

ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಕಾಡುತ್ತಿರುವ ಹಿನ್ನೆಲೆಯಲ್ಲಿ 420 ವೈದ್ಯರ ನೇರ ನೇಮಕಾತಿ ಮಾಡಲಾಗಿದೆ. ವೈದ್ಯರ ನೇರ ನೇಮಕಾತಿ ನಡೆಸದೆ ಕೆಲವು ವರ್ಷಗಳು ಕಳೆದಿವೆ. ಆದರೆ, ಪ್ರಸ್ತುತ ವೈದ್ಯರ ಕೊರತೆ ಸಮಸ್ಯೆ ಮನಗಂಡು 180 ತಜ್ಞ ವೈದ್ಯರು ಹಾಗೂ 240 ವೈದ್ಯರನ್ನು ನೇರ ನೇಮಕಾತಿಗೊಳಿಸಲಾಗಿದೆ. 1618 ನರ್ಸ್‌ಗಳ ನೇರ ನೇಮಕಾತಿ ಮಾಡಲಾಗಿದೆ. ಮುಂದೆಯೂ ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಹಾಗೂ ನರ್ಸ್‌ಗಳ ಕೊರತೆ ಕಾಣಿಸದಂತೆ ನೇರ ನೇಮಕಾತಿ ಮಾಡಲಾಗುವುದು ಎಂದು ಸಚಿವರು ಹೇಳಿದರು.

ಎಂಡೋಪೀಡಿತರಿಗೆ ಕೇರಳ ಮಾದರಿಯಲ್ಲಿ ಪರಿಹಾರ ಒದಗಿಸುವ ಬಗ್ಗೆ ಸರಕಾರ ಕ್ರಮ ಕೈಗೊಂಡಿದೆ. ಎಂಡೋಪೀಡಿತರಿಗೆ ವಾರ್ಷಿಕ ಬರುತ್ತಿದ್ದ ಮಾಸಾಶನವನ್ನು ಶೇ.33ರಷ್ಟು ಏರಿಕೆ ಮಾಡಲಾಗಿದೆ. ವಿಕಲಚೇತನರಿಗೆ ಸರಕಾರಿ ನೌಕರಿಯಲ್ಲಿ ಆದ್ಯತೆ ನೀಡಲಾಗುವುದು. ಉದ್ಯಮದ ಜತೆಗೆ ಸಮಾಜದ ಜತೆಗೆ ಸ್ಪಂದಿಸುವ ಎಂಆರ್‌ಪಿಎಲ್ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರ ಆಯುಷ್ಮಾನ್ ಭಾರತ್ ಯೋಜನೆಯಡಿ ಆರೋಗ್ಯ ಕರ್ನಾಟಕ ಯೋಜನೆಯನ್ನು ರಾಜ್ಯ ಸರಕಾರ ವಿಲೀನ ಮಾಡುವ ಮೂಲಕ ಉತ್ತಮ ಕೆಲಸವನ್ನು ಮಾಡಿದೆ ಎಂದು ಹೇಳಿದ ಅವರು, ಬೆನ್ನು ಹುರಿ ಸಮಸ್ಯೆ ಸೇರಿದಂತೆ ದಿವ್ಯಾಂಗಚೇತನರಿಗೆ ವಿವಿಧ ರೀತಿಯಲ್ಲಿ ತರಬೇತಿ ನೀಡಲು ಸೆಂಟರ್‌ಗಳನ್ನು ಆರಂಭಿಸುವ ಬಗ್ಗೆಯೂ ಸಂಘ ಸಂಸ್ಥೆಗಳು ಮನಸ್ಸು ಮಾಡಬೇಕು. ಈ ನಿಟ್ಟಿನಲ್ಲಿ ಎಂಆರ್‌ಪಿಎಲ್ ಸಂಸ್ಥೆಯ ಕಾರ್ಯ ಅವಿಸ್ಮರಣೀಯ. ಜಿಲ್ಲೆಗೆ ಎಂಆರ್‌ಪಿಎಲ್‌ನಿಂದ ಒಳಿತಾಗಿದೆ ಎಂದರು.

ಶಾಸಕ ಡಾ. ವೈ.ಭರತ್ ಶೆಟ್ಟಿ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷರಾದ ಕಸ್ತೂರಿ ಪಂಜ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಅನಿತಾ ಹೇಮನಾಥ ಶೆಟ್ಟಿ, ಎಂಆರ್‌ಪಿಎಲ್ ಎಚ್‌ಆರ್ ವಿಭಾಗದ ಗ್ರೂಪ್ ಮ್ಯಾನೇಜರ್ ಬಿಎಚ್‌ಬಿ ಪ್ರಸಾದ್, ಫೈನಾನ್ಸ್ ವಿಭಾಗದ ಗ್ರೂಪ್ ಮ್ಯಾನೇಜರ್ ಸುಬ್ರತಾ ಭಂಡೋಪಧ್ಯಾಯ, ಜಿಲ್ಲಾಧಿಕಾರಿ ಎಸ್.ಸಸಿಕಾಂತ್ ಸೆಂಥಿಲ್, ಜಿಲ್ಲಾ ಪಂಚಾಯತ್ ಸಿಇಒ ಡಾ.ಎಂ.ಆರ್.ರವಿ, ವೆನ್ಲಾಕ್, ಲೇಡಿಗೋಶನ್ ಆಸ್ಪತ್ರೆಯ ಜಂಟಿ ನಿರ್ದೆಶಕರಾದ ಡಾ.ದಮಯಂತಿ ಕೃಷ್ಣಮೋಹನ್, ವೆನ್ಲಾಕ್ ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ. ರಾಜೇಶ್ವರಿದೇವಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೆಶಕರಾದ ಸುಂದರ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.

ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ. ರಾಮಕೃಷ್ಣ ರಾವ್ ಪ್ರಸ್ತಾವಿಸಿದರು. ವಿಕಲಚೇತನರ ಜಿಲ್ಲಾ ನೋಡೆಲ್ ಅಧಿಕಾರಿ ಡಾ.ರತ್ನಾಕರ್ ಸ್ವಾಗತಿಸಿದರು.

1.85 ಕೋಟಿ ರೂ. ಮೊತ್ತದ ಸಲಕರಣೆ ವಿತರಣೆ

ಎಂಆರ್‌ಪಿಎಲ್‌ನ ಪೂರ್ಣ ನೆರವಿನೊಂದಿಗೆ ಜಿಲ್ಲಾ ಆರೋಗ್ಯ ಇಲಾಖೆಯ ಮೂಲಕ 1 ಕೋ.ರೂ. ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೂಲಕ 85 ಲಕ್ಷ ರೂ. ಸೇರಿದಂತೆ ಒಟ್ಟು 1.85 ಕೋ.ರೂ. ಮೊತ್ತದಲ್ಲಿ ವಿಕಲಚೇತನರಿಗೆ ಹಾಗೂ ಮಕ್ಕಳ ಪಾಲನಾ ಸಂಸ್ಥೆಗಳಿಗೆ ಸಾಧನ-ಸಲಕರಣೆಗಳನ್ನು ವಿತರಿಸಲಾಯಿತು.

ತ್ರಿಚಕ್ರ ವಾಹನ, ವೀಲ್ ಚಯರ್, ಕೃತಕ ಕಾಲು, ಕೈ ಸೇರಿದಂತೆ ವಿವಿಧ ಸಾಧನ ಸಲಕರಣೆಗಳನ್ನು 1093 ದಿವ್ಯಾಂಗಚೇತನರಿಗೆ ವಿತರಿಸಲಾಯಿತು. 71 ಮಕ್ಕಳ ಪಾಲನಾ ಸಂಸ್ಥೆಗಳಿಗೆ ಟಿವಿ, ಫ್ಯಾನ್, ವಾಷಿಂಗ್ ಮೆಷಿನ್, ಪುಸ್ತಕಗಳು, ಡೆಸ್ಕ್, ಬೆಂಚ್ ಸೇರಿದಂತೆ ಇತರ  ವಸ್ತುಗಳನ್ನು ಹಸ್ತಾಂತರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News