94ಸಿಸಿಯಡಿ 16,122 ಅರ್ಜಿಗಳ ವಿಲೇವಾರಿ: ತಹಶೀಲ್ದಾರ್

Update: 2018-09-18 14:53 GMT

ಮಂಗಳೂರು, ಸೆ. 18: ತಾಲೂಕಿನಲ್ಲಿ 94 ಸಿಸಿಯಡಿ 20,748 ಅರ್ಜಿಗಳು ಬಂದಿದ್ದು, ಆ ಪೈಕಿ 16,122 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಉಳಿದ 4,626 ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಲಾಗುವುದು. 94 ಸಿ ಅಡಿ ಮಂಜೂರಾದ ಪ್ರಕರಣಗಳಲ್ಲಿ 15 ಮಂದಿ ಶುಲ್ಕ ಪಾವತಿಸಲು ಬಾಕಿಯಿದ್ದು, ಶುಲ್ಕ ಪಾವತಿಸಿದ ಕೂಡಲೇ ಹಕ್ಕುಪತ್ರ ನೀಡಲಾಗುವುದು ಎಂದು ತಹಶೀಲ್ದಾರ್ ಗುರುಪ್ರಸಾದ್ ಹೇಳಿದರು.

ತಾಪಂ ಅಧ್ಯಕ್ಷ ಮುಹಮ್ಮದ್ ಮೋನು ಅಧ್ಯಕ್ಷತೆಯಲ್ಲಿ ಮಂಗಳವಾರ ಜಿಪಂ ಸಭಾಂಗಣದಲ್ಲಿ ನಡೆದ ಮಂಗಳೂರು ತಾಪಂ ಸಾಮಾನ್ಯ ಸಭೆಯಲ್ಲಿ ಸದಸ್ಯ ಶ್ರೀಧರ್ ಅವರ ಪ್ರಶ್ನೆಗೆ ತಹಶೀಲ್ದಾರ್ ಉತ್ತರಿಸಿದರು.

ಗೋಮಾಳದಲ್ಲಿ ಕೆಂಪು ಕಲ್ಲು ಗಣಿಗಾರಿಕೆ: ನೀರುಮಾರ್ಗ ಗ್ರಾಪಂನಲ್ಲಿ 12 ಎಕರೆ ಗೋಮಾಳ ಹಾಗೂ 8 ಎಕರೆ ಸರಕಾರಿ ಜಾಗವಿದೆ. ಇದರಲ್ಲಿ ಸರ್ವೆ ನಂಬರ್ 190/1 ಗೋಮಾಳ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲಾಗುತ್ತಿದೆ. ಸ್ಥಳಕ್ಕೆ ಹಿಂದಿನ ತಹಶೀಲ್ದಾರ್ ದಾಳಿ ನಡೆಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಅಕ್ರಮ ಗಣಿಗಾರಿಕೆ ಕಂಡು ಬಂದಲ್ಲಿ ಗಣಿಗಾರಿಕೆ ಇಲಾಖೆ ಸೂಕ್ತ ಕ್ರಮಕೈಗೊಳ್ಳಬೇಕಾದ ಕಾರಣ ಕಳೆದ ಸಭೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಮುಂದಿನ ಸಭೆಗೆ ಹಾಜರಾಗಲು ಸೂಚಿಸಲಾಗಿತ್ತು. ಆದರೆ ಇಂದಿನ ಸಭೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಯಾವುದೇ ಅಧಿಕಾರಿಗಳು ಬಂದಿಲ್ಲ ಎಂದು ಶ್ರೀಧರ್ ಆರೋಪಿಸಿದರು. ಇದಕ್ಕೆ ಇತರ ಸದಸ್ಯರು ಧ್ವನಿಗೂಡಿಸಿದರು.

ಆಧಾರ್ ತಿದ್ದುಪಡಿ: ಅಧಾರ್‌ಗೆ ಸಂಬಂಧಿಸಿದಂತೆ ತಿದ್ದುಪಡಿ ಕುರಿತು ಎಲ್ಲ ಗ್ರಾಪಂಗಳಲ್ಲಿ ಅವಕಾಶ ಕಲ್ಪಿಸಲಾಗುತ್ತಿದೆ. ಸುರತ್ಕಲ್ ನಾಡ ಕಚೇರಿಯಲ್ಲಿ ತಾಂತ್ರಿಕ ಕಾರಣದಿಂದ ಆಧಾರ್ ನೋಂದಣಿ ಸಾಧ್ಯವಾಗಿಲ್ಲ. ಸಮೀಪದ ಮಂಗಳೂರು ಒನ್ ಕೇಂದ್ರದಲ್ಲಿ ಆಧಾರ್ ತಿದ್ದುಪಡಿ ಮಾಡಲಾಗುತ್ತಿದೆ ಎಂದು ತಶೀಲ್ದಾರ್ ಸದಸ್ಯರ ಪ್ರಶ್ನೆಗೆ ಸಮಜಾಯಿಸಿ ನೀಡಿದರು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಗ್ರಾಪಂ ಅಧ್ಯಕ್ಷರು ಯಾವ ಪಂಚಾಯತ್‌ಗಳಲ್ಲಿ ಆಧಾರ್ ತಿದ್ದುಪಡಿ ನಡೆಸಲಾಗುತ್ತಿದೆ ಎಂಬುದರ ಮಾಹಿತಿ ನೀಡಿ ಎಂದು ಆಗ್ರಹಿಸಿದರು.

ಜಿಪಂ ಉಪಾಧ್ಯಕ್ಷೆ ಕಸ್ತೂರಿ ಪಂಜ , ತಾಪಂ ಉಪಾಧ್ಯಕ್ಷೆ ಪೂರ್ಣಿಮಾ ಗಣೇಶ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ರೀಟಾ ನರೋನ್ಹಾ, ಯು.ಪಿ. ಇಬ್ರಾಹೀಂ, ಜನಾರ್ದನ ಗೌಡ, ಮಂಗಳೂರು ತಾಪಂ ಇಒ ಸದಾನಂದ, ಮೂಡುಬಿದರೆ ತಹಶೀಲ್ದಾರ್ ಡಾ. ರಶ್ಮಿ ಉಪಸ್ಥಿತರಿದ್ದರು.

2 ವರ್ಷ ಕಳೆದರೂ ಬಿಪಿಎಲ್ ಕಾರ್ಡಿಲ್ಲ !

ಪರಿಶಿಷ್ಟ ಜಾತಿಗೆ ಸೇರಿದ ಲಾನುಭವಿಯೊಬ್ಬರು ಬಿಪಿಎಲ್ ಕಾರ್ಡ್‌ಗಾಗಿ ಎರಡು ವರ್ಷಗಳಿಂದ ಬವಣೆ ಪಡುತ್ತಿರುವ ಅಂಶವನ್ನು ತಾಪಂ ಸದಸ್ಯೆ ವಜ್ರಾಕ್ಷಿ ಶೆಟ್ಟಿ ಸಭೆಯ ಗಮನ ಸೆಳೆದರು. ಇದಕ್ಕೆ ಉತ್ತರಿಸಿದ ಕಂದಾಯ ಅಧಿಕಾರಿಯೊಬ್ಬರು, ಬಿಪಿಎಲ್ ಕಾರ್ಡ್ ಅರ್ಜಿ ನೀಡಲು 2017ರಿಂದ ಅವಕಾಶ ಕಲ್ಪಿಸಲಾಗಿದೆ. ಈಗಲೂ ಅರ್ಜಿ ನೀಡಲು ಅವಕಾಶ ಇರುತ್ತದೆ. ಪ್ರಸ್ತುತ ಬಿಪಿಎಲ್ ಕಾರ್ಡ್ ನೀಡಲು ಸರಕಾರದಿಂದ ಯಾವುದೇ ಆದೇಶ ಬಂದಿಲ್ಲ ಎಂದರು.

ಚುನಾವಣೆಯ ಸಂದರ್ಭ ಬಿಪಿಎಲ್ ಕಾರ್ಡ್: ಚುನಾವಣಾ ಸಂದರ್ಭ ಬಿಪಿಎಲ್ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದರೆ 15 ದಿನಗಳಲ್ಲಿ ಅಂಚೆ ಮೂಲಕ ಅರ್ಜಿದಾರರ ಮನೆ ಬಾಗಿಲಿಗೆ ಕಾರ್ಡ್ ಬರುತ್ತದೆ. ಮಿಕ್ಕ ಸಂದರ್ಭ ಬಿಪಿಎಲ್ ಪಡಿತರ ಚೀಟಿಗಾಗಿ ಅರ್ಜಿ ಹಾಕಿ ವರ್ಷಗಟ್ಟಲೆ ಕಾದರೂ ಸಿಗದಿರಲು ಕಾರಣ ಏನು ಎಂದು ಸದಸ್ಯರು ಪ್ರಶ್ನಿಸಿದರು.

2017ರಲ್ಲಿ 2,733 ಮತ್ತು 2018ರಲ್ಲಿ 1,522 ಅರ್ಜಿಗಳು ಬಿಪಿಎಲ್ ಪಡಿತರ ಚೀಟಿಗಾಗಿ ಆನ್‌ಲೈನ್ ಮೂಲಕ ಸಲ್ಲಿಕೆಯಾಗಿವೆ. ಅವುಗಳ ಪೈಕಿ 2017ರ ಫೆಬ್ರವರಿಯಿಂದ ಜೂನ್ ತನಕ ಸಲ್ಲಿಸಲ್ಪಟ್ಟ ಅರ್ಜಿಗಳ ಪರಿಶೀಲನೆ ನಡೆಯುತ್ತಿದೆ. ಪರಿಶೀಲನೆಯ ಬಳಿಕ ಅರ್ಜಿದಾರರಿಗೆ ಕಾರ್ಡುಗಳನ್ನು ವಿತರಿಸಲಾ ಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಅಧಿಕಾರಿ ಸಭೆಗೆ ಮಾಹಿತಿ ನೀಡಿದರು.

ಮುಂದಿನ ಹಂತದಲ್ಲಿ 2017ರ ಜುಲೈ ನಂತರದ ಅರ್ಜಿಗಳನ್ನು ಪರಿಶೀಲನೆಗೆ ಎತ್ತಿಕೊಳ್ಳಲಾಗುವುದು. ಪರಿಶೀಲನೆಯ ಸಂದರ್ಭ ಅರ್ಜಿದಾರರು ಆದಾಯ ಪ್ರಮಾಣ ಪತ್ರ ಮತ್ತು ಕುಟುಂಬದ ಸದಸ್ಯರ ಆಧಾರ್ ಕಾರ್ಡ್ ತಂದು ಆಹಾರ ಇಲಾಖೆಯ ಕಚೇರಿಯಲ್ಲಿ ಆನ್‌ಲೈನ್ ಅಪ್‌ಲೋಡ್ ಮಾಡಬೇಕು ಎಂದು ಅಧಿಕಾರಿ ವಿವರಿಸಿದರು.

8.5 ಲಕ್ಷ ಮತದಾರರು

ಮಂಗಳೂರು ತಾಲೂಕಿನಲ್ಲಿ 8.5 ಲಕ್ಷ ಮತದಾರರಿದ್ದಾರೆ. ಮತದಾರರ ಗುರುತು ಚೀಟಿಯಲ್ಲಿ ತಪ್ಪುಗಳಿದ್ದರೆ ನಮೂನೆ 8ರಲ್ಲಿ ಬೂತ್ ಮಟ್ಟದ ಅಧಿಕಾರಿಗಳಲ್ಲಿ ಅರ್ಜಿ ನೀಡಿದಲ್ಲಿ ಗುರುತು ಚೀಟಿ ತಿದ್ದುಪಡಿಗೆ ಕ್ರಮಕೈಗೊಳ್ಳಲಾಗುವುದು. ನವೆಂಬರ್ ಅಂತ್ಯದೊಳಗೆ ಹೊಸ ಕರಡು ಮತದಾರರ ಪಟ್ಟಿ ಪ್ರಕಟಿಸಲಾಗುವುದು. ಮುಂದಿನ ಸಂಸತ್ ಚುನಾವಣೆಗೆ ಇದೇ ಮತದಾರರ ಪಟ್ಟಿ ಇರಲಿದೆ ಎಂದು ತಹಶೀಲ್ದಾರ್ ಗುರುಪ್ರಸಾದ್ ಹೇಳಿದರು.

ಮಂಗಳೂರು ತಾಲೂಕು ಕಚೇರಿಯಲ್ಲಿ (ಮಿನಿ ವಿಧಾನ ಸೌಧ) ವಿಧಾನ ಸಭಾ ಕ್ಷೇತ್ರವಾರು ಕೌಂಟರ್ ಇದೆ. ಮತದಾರರ ಚೀಟಿಯ(ವೋಟರ್ ಐಡಿ) ತಿದ್ದುಪಡಿ ಬಯಸುವವರು ತಮ್ಮ ಕ್ಷೇತ್ರ ವ್ಯಾಪ್ತಿಯ ಕೌಂಟರ್‌ಗೆ ಭೇಟಿ ಕೊಟ್ಟು ಗುರುತು ಪತ್ರವನ್ನು ಸರಿ ಪಡಿಸಿ ಹೊಸ ಗುರುತಿನ ಚೀಟಿ ಪಡೆಯ ಬಹುದಾಗಿದೆ ಎಂದು ಗುರುಪ್ರಸಾದ್ ತಿಳಿಸಿದರು.

ತಾಪಂ ಇಒ ಲಂಚ ಪ್ರಕರಣ

ಮಂಗಳೂರು ತಾಪಂ ಇಒ ಸದಾನಂದ ಲಂಚ ಕೇಳುತ್ತಾರೆ ಎಂಬ ಕೆಲವು ಪಿಡಿಒಗಳ ಆರೋಪದ ಕುರಿತು ತಾಪಂ ಸಭೆ ಆರಂಭವಾಗುತ್ತಿದ್ದಂತೆ ಭಾರಿ ಚರ್ಚೆ ನಡೆಯಿತು. ಆದರೆ ಯಾವುದೇ ತೀರ್ಮಾನಕ್ಕೆ ಬರುವಲ್ಲಿ ಸಭೆ ವಿಲವಾಯಿತು. ಈ ನಡುವೆ ಮೈಕ್ ಕೈಕೊಟ್ಟಿರುವುದರಿಂದ ಪ್ರಕರಣದ ಕುರಿತು ತಾಪಂ ಅಧ್ಯಕ್ಷರು ನೀಡಿದ ಸ್ಪಷ್ಟನೆ ಸಭೆಗೆ ಸರಿಯಾಗಿ ಕೇಳಿಸದೆ ಹೋಯಿತು.

ನಮೂನೆ 9,11 ಅಗತ್ಯ

94ಸಿ ಮತ್ತು 94ಸಿಸಿ ಅಡಿಯಲ್ಲಿ ಹಕ್ಕುಪತ್ರ ಪಡೆದವರಿಗೆ ಪಹಣಿ ಪತ್ರ ಕಡ್ಡಾಯವಲ್ಲ. ಆದರೆ ಅವರು ತಮ್ಮ ಗ್ರಾಮ ಪಂಚಾಯತ್‌ನಿಂದ ನಮೂನೆ 9 ಮತ್ತು 11 ಪಡೆಯುವುದು ಕಡ್ಡಾಯವಾಗಿದೆ. ಅದನ್ನು ಪಡೆಯಲು ಅನುಕೂಲವಾಗುವಂತೆ ಕಂದಾಯ ಇಲಾಖೆಯಿಂದ ಗ್ರಾಮ ಪಂಚಾಯತುಗಳಿಗೆ ಹಕ್ಕುಪತ್ರದ ಪ್ರತಿ ಮತ್ತು ನಕ್ಷೆ ಒದಗಿಸಲಾಗುತ್ತಿದೆ. ನಕ್ಷೆಯ ಅಗತ್ಯ ಬಿದ್ದರೆ ಅದೇ ವ್ಯಾಪ್ತಿಯ ಗ್ರಾಮಕರಣಿಕರಿಂದ ಪಡೆದುಕೊಳ್ಳಬಹುದು. ಅದಕ್ಕೆ ಸರ್ವೆಯರ್ ಅಗತ್ಯವಿಲ್ಲ ಎಂದು ತಹಶೀಲ್ದಾರ್ ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News