ಸೆ.20 ರಂದು ತಲಪಾಡಿ ಟೋಲ್ ಗೇಟ್ ಎದುರು ಪ್ರತಿಭಟನೆ

Update: 2018-09-18 15:11 GMT

ಉಳ್ಳಾಲ, ಸೆ. 18: ಮಂಗಳೂರು ಆರ್ ಟಿ ಒ ನೋಂದಾಯಿತ (ಕೆಎ19) ವಾಹನಗಳಿಗೆ ಉಚಿತ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ಹಾಗೂ ಹೆದ್ದಾರಿ ಕಾಮಗಾರಿ ಅಪೂರ್ಣ ಮತ್ತು ನಿಧಾನಗತಿಯಲ್ಲಿ ಸಾಗುತ್ತಿರುವ ಕಾಮಗಾರಿಯನ್ನು ಖಂಡಿಸಿ ಸೆ.20 ರಂದು  ತಲಪಾಡಿ ಟೋಲ್ ಗೇಟ್ ಎದುರುಗಡೆ ಪ್ರತಿಭಟನೆ ನಡೆಯಲಿದೆ ಎಂದು ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ದ.ಕ ಮತ್ತು ಉಡುಪಿ ಜಿಲ್ಲೆ ಪ್ರಧಾನ ಕಾರ್ಯದರ್ಶಿ ಸಿದ್ದೀಖ್ ತಲಪಾಡಿ ಹೇಳಿದ್ದಾರೆ.

ತೊಕ್ಕೊಟ್ಟು ಹೊಟೇಲಿನಲ್ಲಿ ಮಂಗಳವಾರ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಕೇರಳ ಗಡಿನಾಡು ತಲಪಾಡಿಯಲ್ಲಿ ಟೋಲ್ ಗೇಟ್ ಹೆಸರಿನಲ್ಲಿ  ಕನ್ನಡಿಗರ ಮೇಲೆ ಉತ್ತರಪ್ರದೇಶ, ಬಿಹಾರ ಮೂಲದ ಕಾರ್ಮಿಕರಿಂದ  ದಬ್ಬಾಳಿಕೆ ನಡೆಯುತ್ತಿದೆ. ಸುಂಕ ವಸೂಲಾತಿ ಮೂಲಕ ಹಗಲು ದರೋಡೆ ನಡೆಯುತ್ತಿದ್ದರೂ ಸಂಬಂಧಪಟ್ಟವರು ಸುಮ್ಮನಿದ್ದಾರೆ. ಹೊರ ರಾಜ್ಯದಿಂದ ಬಂದವರು ತಲಪಾಡಿ ಟೋಲ್ ಗೇಟಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರು ದಾಖಲೆ ಪರಿಶೀಲಿಸಿ, ಸುಂಕ ಪಡೆಯುವ ನೆಪದಲ್ಲಿ ಕನ್ನಡಿಗರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ. ಒಂದು ವೇಳೆ ಇಲ್ಲಿನ ಜನ ಅವರ ರಾಜ್ಯದಲ್ಲಿ ದಬ್ಬಾಳಿಕೆ ನಡೆಸಿದಲ್ಲಿ ಬಿಟ್ಟಾರ ? ಅನ್ನುವ ಕುರಿತು ಪ್ರಶ್ನೆಯಿದೆ.  ಕಾಮಗಾರಿ ಪೂರ್ಣಗೊಳ್ಳಲು ಸೆ.30 ಕ್ಕೆ ಗಡುವು ನೀಡಲಾಗಿತ್ತು. ಆದರೆ ಇನ್ನೂ ಕಾಮಗಾರಿ ಮುಗಿದಿಲ್ಲ,  ಆದರೂ ಸುಂಕ ವಸೂಲಿ ಮಾಡಲಾಗುತ್ತಿದೆ. ಗಡುವು ದಿನಾಂಕದ ನಂತರ ಸುಂಕ ವಸೂಲಾತಿಗೆ  ಎಂದಿಗೂ ಬಿಡುವುದಿಲ್ಲ. ರಾ.ಹೆ.66ರ ಕಾಮಗಾರಿ ಅಪೂರ್ಣಗೊಂಡಿದ್ದು, ಮೂಲ ನಕಾಶೆ  ತಿರುಚಿ ನಿಧಾನಗತಿಯಲ್ಲಿ ನಡೆಯುತ್ತಿರುವ ಯೋಜನೆ ವಿರುದ್ಧ  ಸೆ.20 ರಂದು ತಲಪಾಡಿಯಿಂದ ಸಾಸ್ತಾನದವರೆಗೆ  ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಯಿಂದ ಶಾಂತಿಯುತ ಪ್ರತಿಭಟನೆ ನಡೆಯಲಿದೆ ಎಂದರು.

ಸುದ್ಧಿಗೋಷ್ಠಿಯಲ್ಲಿ ಕ.ರ.ವೇ ಸ್ವಾಭಿಮಾನಿ ಬಣದ ಮಹಮ್ಮದ್ ಕುಕ್ಕುವಳ್ಳಿ, ಗಡಿನಾಡು ರಕ್ಷಣಾ ವೇದಿಕೆ ಉಪಾಧ್ಯಕ್ಷ ಅರುಣ್ ಭಂಡಾರಿ, ಹುಸೈನ್ ತಲಪಾಡಿ, ಸಂಚಾಲಕ ಶಬೀರ್ ತಲಪಾಡಿ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News