ಹೆಜಮಾಡಿ ಬಂದರಿಗೆ ಕೇಂದ್ರದ 13.50 ಕೋಟಿ ರೂ. ಬಿಡುಗಡೆಯಾಗಿದೆ: ಲಾಲಾಜಿ ಮೆಂಡನ್

Update: 2018-09-18 15:20 GMT

ಪಡುಬಿದ್ರೆ, ಸೆ. 18: ಹೆಜಮಾಡಿಯಲ್ಲಿ ಸರ್ವಋತು ಬಂದರು ನಿರ್ಮಾಣಕ್ಕೆ ಕೇಂದ್ರ ಸರ್ಕಾರವು ಅನುಮೋದನಾ ಪತ್ರ ಬಿಡುಗಡೆ ಮಾಡಿದ್ದು, ರಾಜ್ಯ ಸರ್ಕಾರ ಇನ್ನೂ ಟೇಕ್‍ಆಫ್ ಆಗಬೇಕಿದ್ದು, ರಾಜ್ಯ ಸರ್ಕಾರದ ಅನುದಾನ ಬಿಡುಗಡೆಯಾಗಬೇಕಿದೆ ಎಂದು ಕಾಪು ಶಾಸಕ ಲಾಲಾಜಿ ಮೆಂಡನ್ ಹೇಳಿದರು.

ಮಂಗಳವಾರ ಪಡುಬಿದ್ರಿ ಶ್ರೀ ನಾರಾಯಣ ಗುರು ಸಭಾಗೃಹದಲ್ಲಿ ಬಡೆದ ಪಡುಬಿದ್ರಿ ಗ್ರಾಮ ಪಂಚಾಯಿತಿ ಗ್ರಾಮಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಹೆಜಮಾಡಿ ಬಂದರು ನಿರ್ಮಾಣಕ್ಕೆ ಸುಮಾರು 140 ಕೋಟಿ ರೂ. ವೆಚ್ಚದಲ್ಲಿ ಕೇಂದ್ರ ಮತ್ತು ರಾಜ್ಯಗಳ ಸಮಾನ ಪಾಲುದಾರಿಕೆಯಲ್ಲಿ ಅನುಷ್ಠಾನವಾಗಲಿದೆ. ಇದಕ್ಕೆ ಕೇಂದ್ರ ಸರ್ಕಾರವು 13.50ಕೋಟಿ ರೂ. ಗಳನ್ನು ಹಾಗೂ ಯೋಜನೆಯ ಅನುಮೋದನಾ ಪತ್ರವನ್ನು ಬಿಡುಗಡೆ ಮಾಡಿದೆ. ಸರ್ಕಾರದ ಪಾಲು 13.50ಕೋಟಿ ರೂ. ಬಿಡುಗಡೆಯಾಗಬೇಕಿದೆ ಎಂದರು.

ಸುಮಾರು 50 ಎಕ್ರೆ ಸ್ಥಳವನ್ನು ವಾಪಾಸು ಪಡೆದುಕೊಳ್ಳಲು ರಾಜ್ಯ ಸಚಿವ ಸಂಪುಟದ ಡಿ ನೋಟಿಫಿಕೇಶನ್ ನಿರ್ಧಾರಕ್ಕಾಗಿ ಗ್ರಾಮಸಭೆಯಲ್ಲಿ ಶಾಸಕರ ಸಮ್ಮಖದಲ್ಲೇ ಠರಾವು ಮಂಡಿಸಲಾಯಿತು. ಜಿಲ್ಲಾಧಿಕಾರಿಗಳ ಬಳಿ ತಾನೂ ಸಹಿತವಾಗಿ ಪಡುಬಿದ್ರಿಯ ಜನತೆಯನ್ನು ಒಯ್ಯೋಣ. ಸರಕಾರದ ಮೇಲೆ ತಾನೂ ಒತ್ತಡವನ್ನು ಹೇರುವುದಾಗಿ ಶಾಸಕ ಲಾಲಾಜಿ ಹೇಳಿದರು.

ಕೇಂದ್ರ ಸರ್ಕಾರದ ಯೋಜನೆಯಾದ ಪಡುಬಿದ್ರಿ ಬೀಚನ್ನು ಬ್ಲೂ ಫ್ಲ್ಯಾಗ್ ಸರ್ಟಿಫಿಕೇಶನ್‍ಅಡಿ 8ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಗೊಳಿಸಲು ಅಂತಿಮ ರೂಪುರೇಷೆಗಳು ಸಿದ್ಧಗೊಂಡಿವೆ ಎಂದು ಪರಿಸರ ಅಥವಾ ಹಿಂದಿನ ಬೃಹತ್ ಯೋಜನೆಗಳಿಂದ ಸ್ಥಳೀಯ ಜನತೆ ಅನುಭವಿಸಿರುವ ಹಿನ್ನಡೆಗಳನ್ನು ಗಮನದಲ್ಲಿರಿಸಿಕೊಂಡು  ಸ್ಥಳೀಯರಿಗೆ ಯಾವುದೇ ತೊಂದರೆಗಳಾಗದಂತೆ ಈ ಯೋಜನೆಯನ್ನು ಮುಂದಿನ ದಿನಗಳಲ್ಲಿ ಅನುಷ್ಟಾನಿಸಲಾಗುವುದೆಂದು ಶಾಸಕ ಲಾಲಾಜಿ ಮೆಂಡನ್ ತಿಳಿಸಿದರು.

ಪಡುಬಿದ್ರೆ ಗ್ರಾಮಸಭೆಯಲ್ಲಿ ಮುಖ್ಯವಾಗಿ ಜಿಲ್ಲಾಡಳಿತವು ಸಂಸದರ ಅಥವಾ ಶಾಸಕರ ನಿಧಿಗಳಿಂದ ಅನುಷ್ಟಾನವಾಗಿರುವ ಯೋಜನೆಗಳ ಮಾಹಿತಿಯನ್ನು ಗ್ರಾಮ ಪಂಚಾಯತ್‍ಗಳಿಗೆ ತಿಳಿಸಬೇಕೆಂಬುದಕ್ಕಾಗಿ ಠಾರವನ್ನು ಮಂಡಿಸಲಾಯಿತು. 

ಗ್ರಾಮಸ್ಥ ರೋಹಿತಾಕ್ಷ ಸುವರ್ಣರು ತೋಟಗಾರಿಕಾ ಅಧಿಕಾರಿ ಶ್ವೇತಾ ಹಿರೇಮಠ್ ಅವರಲ್ಲಿ ತೆಂಗಿನ ಮರಗಳಿಗೆ ಮತ್ತು ಬಾಳೆ ಕೃಷಿಗೆ ಬಾಧಿಸುತ್ತಿರುವ ಕೊಳೆರೋಗ ಹಾಗೂ ಬಿಳಿ ತಲೆ ಕೀಟಬಾಧೆಗಳ ಕುರಿತು ಇಲಾಖೆಯು ಕಾಸರಗೋಡಿನ ಕೇಂದ್ರ ಸರಕಾರದ ತೆಂಗು ಅಭಿವೃದ್ಧಿ ನಿಗಮದ ಅಧಿಕಾರಿಗಳ ಸಹಾಯ ಪಡೆದು ಸೂಕ್ತ ಮಾಹಿತಿ ಶಿಬಿರವನ್ನು ಆಯೋಜಿಸಬೇಕೆಂದು ಆಗ್ರಹಿಸಿದರು.

ಪಡುಬಿದ್ರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ದಮಯಂತಿ ಅಮೀನ್ ಸಭಾಧ್ಯಕ್ಷತೆಯನ್ನು ವಹಿಸಿದ್ದರು. ಉಪಾಧ್ಯಕ್ಷ ವೈ. ಸುಕುಮಾರ್, ಜಿಲ್ಲಾ ಪಂಚಾಯಿತಿ ಸದಸ್ಯ ಶಶಿಕಾಂತ್ ಪಡುಬಿದ್ರಿ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ನೀತಾ ಗುರುರಾಜ್, ದಿನೇಶ್ ಕೋಟ್ಯಾನ್ ಉಪಸ್ಥಿತರಿದ್ದರು.

ಪಿಡಿಒ ಪಂಚಾಕ್ಷರೀ ಸ್ವಾಮಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ಲೆಕ್ಕ ಸಹಾಯಕಿ ರೂಪಲತಾ ವಾರ್ಡ್ ಸಭೆಗಳ ವರದಿ ಮಂಡಿಸಿದರು. ಗತ ಗ್ರಾಮಸಭೆಯ ವರದಿಯನ್ನು ಹಿಂದಿನ ವರ್ಷದ ಅಂಗಡಿ ಬಾಡಿಗೆ, ತೆರಿಗೆ ಬಾಕಿ ವಸೂಲಾತಿಯನ್ನು ಮಾಡಿಕೊಳ್ಳಬೇಕಾದ ಷರತ್ತುಗಳೊಂದಿಗೆ ಸಭೆಯಲ್ಲಿ ಗ್ರಾಮಸ್ಥರು ಅನುಮೋದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News