ಪಣಂಬೂರು: ಲಾರಿ ಚಾಲಕನ ಕೊಲೆ ಪ್ರಕರಣದ ಆರೋಪಿಗೆ ಪೊಲೀಸ್ ಕಸ್ಟಡಿ

Update: 2018-09-18 16:58 GMT
ಅಸದುಲ್ಲಾ ಷರೀಫ್

ಮಂಗಳೂರು, ಸೆ.18: ಲಾರಿ ಚಾಲಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟ ಆರೋಪಿ ರಾಮನಗರ ಜಿಲ್ಲೆಯ ಅಸದುಲ್ಲಾ ಷರೀಫ್ (50)ನನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಈ ಪ್ರಕರಣದಲ್ಲಿ ಇನ್ನೂ ಕೆಲವು ಮಂದಿ ಭಾಗಿಯಾಗಿದ್ದಾರೆ ಎನ್ನಲಾಗಿದ್ದು, ಅವರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಆ. 28ರಂದು ಬೈಕಂಪಾಡಿಯ ರುಚಿ ಸೋಯ ಇಂಡಸ್ಟ್ರಿಯಿಂದ 7.50 ಲಕ್ಷ ರೂ. ಮೌಲ್ಯದ 1050 ಬಾಕ್ಸ್ ತಾಳೆಎಣ್ಣೆಯನ್ನು ಸುಗಮ ಕಂಪನಿಯ ಲಾರಿಯಲ್ಲಿ ಚಾಲಕ ಅನೀಲ್ ಕುಮಾರ್ ಬೆಂಗಳೂರಿಗೆ ಕೊಂಡೊಯ್ದಿದ್ದರು. ಆದರೆ ಈ ತಾಳೆ ಎಣ್ಣೆಯು ನಿಗದಿತ ಸ್ಥಳಕ್ಕೆ ತಲುಪದಿದ್ದಾಗ ಶಿವಗಣೇಶ್ ಟ್ರಾನ್ಸ್ ಪೋರ್ಟ್ ಮಾಲಕರು ಸೆ.30ರಂದು ಪಣಂಬೂರು ಠಾಣೆಗೆ ದೂರು ನೀಡಿದ್ದರು.

ಪಣಂಬೂರು ಇನ್‌ಸ್ಪೆಕ್ಟರ್ ರಫೀಕ್ ಕೆ.ಎಂ. ಮತ್ತು ಎಸ್ಸೈ ಉಮೇಶ್ ಕುಮಾರ್ ಎಂ.ಎನ್. ತನಿಖೆ ನಡೆಸಿದಾಗ ಮೂಲತಃ ರಾಮನಗರದ ಪ್ರಸ್ತುತ ಬೆಂಗಳೂರು ದಕ್ಷಿಣ ತಾಲೂಕಿನ ಕಂಬಿಪುರ ಗ್ರಾಮದಲ್ಲಿ ವಾಸವಾಗಿದ್ದ ಅಸದುಲ್ಲಾ ಷರೀಫ್(49) ಕೊಲೆಯಲ್ಲಿ ಭಾಗಿಯಾಗಿರುವುದು ತಿಳಿದು ಬಂತು. ಅದರಂತೆ ಅಸಾದುಲ್ಲಾನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಆತನು ತನ್ನ ಸಹಚರರೊಂದಿಗೆ ಸೇರಿಕೊಂಡು ಅನಿಲ್ ರನ್ನು ಕೊಲೆ ಮಾಡಿ ಶವವನ್ನು ರಾಮನಗರ ಜಿಲ್ಲೆಯ ಕುಂಬಳಗೋಡು ಎಂಬಲ್ಲಿ ಹೂತು ಹಾಕಿ ಲಾರಿಯಲ್ಲಿದ್ದ ಮಾಲನ್ನು ದೋಚಿರುವುದಾಗಿ ಬಾಯ್ಬಿಟ್ಟ ಎಂದು ಪೊಲೀಸರು ತಿಳಿಸಿದ್ದಾರೆ.

ಚಾಲಕ ಅನಿಲ್‌ಕುಮಾರ್‌ನ ಮೃತದೇಹವನ್ನು ಬೆಂಗಳೂರು ದಕ್ಷಿಣ ಉಪ-ವಿಭಾಗಾಧಿಕಾರಿ ಮೂಲಕ ಹೊರತೆಗೆದು ಶವ ಪರೀಕ್ಷೆ ನಡೆಸಿ ವಾರಸುದಾರರಿಗೆ ಹಸ್ತಾಂತರಿಸಲಾಗಿದ್ದು, ಆರೋಪಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ. ಅಲ್ಲದೆ, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ತನಿಖೆಗಾಗಿ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದ್ದು, ವಿಚಾರಣೆ ನಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News