ಮಂಗಳೂರು ತಾಪಂ ಇಒ ವಿರುದ್ಧ ಕ್ರಮಕ್ಕೆ ಆಗ್ರಹ

Update: 2018-09-18 17:05 GMT

ಮಂಗಳೂರು, ಸೆ.18: ಗ್ರಾಪಂಗಳ ಬಜೆಟ್ ಅನುಮೋದನೆ ನೀಡಲು ಸರಕಾರ ಮತ್ತು ಹಣಕಾಸು ಇಲಾಖೆಗೆ ಲಂಚ ನೀಡಬೇಕು ಎಂದು ಪಿಡಿಒಗಳಿಗೆ ಒತ್ತಾಯಿಸಿದ ಮಂಗಳೂರು ತಾಪಂ ಇಒ ಸದಾನಂದ ವಿರುದ್ಧ ಕ್ರಮ ಕೈಗೊಳ್ಳಬೇಕು. ಈ ವಿಚಾರದ ಬಗ್ಗೆ ತಂಡ ರಚಿಸಿ ಸೂಕ್ತ ತನಿಖೆ ನಡೆಸಬೇಕು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಮತ್ತು ಶಾಸಕ ಡಾ. ವೈ. ಭರತ್ ಶೆಟ್ಟಿ ಒತ್ತಾಯಿಸಿದ್ದಾರೆ.

ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಮಂಗಳವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸದ ನಳಿನ್, ರಾಜ್ಯದ ಸಮ್ಮಿಶ್ರ ಸರಕಾರದ ನಿಯಂತ್ರಣ ಸಿಎಂ ಕುಮಾರಸ್ವಾಮಿ ಮತ್ತು ಡಿಸಿಎಂ ಡಾ.ಜಿ. ಪರಮೇಶ್ವರ್ ಬಳಿ ಇಲ್ಲ. ಬದಲಾಗಿ ಅಧಿಕಾರಿಗಳ ನಿಯಂತ್ರಣದಲ್ಲಿದೆ. ಗ್ರಾಪಂ ಬಜೆಟ್ ಅನುಮೋದನೆಗೆ ಹಣಕಾಸು ಇಲಾಖೆಗೆ ಲಂಚ ನೀಡಬೇಕು ಎಂದು ಅಧಿಕಾರಿಗಳೇ ಹೇಳುತ್ತಿದ್ದಾರೆ. ಹಣಕಾಸು ಇಲಾಖೆ ಸಿಎಂ ಕುಮಾರಸ್ವಾಮಿ ಕೈಯಲ್ಲಿದೆ. ರಾಜ್ಯ ಸಮ್ಮಿಶ್ರ ಸರಕಾರದಲ್ಲಿ ಮುಖ್ಯಮಂತ್ರಿಯಿಂದ ಹಿಡಿದು ಗ್ರಾಪಂವರೆಗೆ ಭ್ರಷ್ಟಾಚಾರ ನಡೆಯುತ್ತಿದೆ ಎಂಬುದಕ್ಕೆ ಅಧಿಕಾರಿಯ ಈ ಹೇಳಿಕೆ ಸಾಕ್ಷಿಯಾಗಿದೆ. ಹಾಗಾಗಿ ಸೂಕ್ತ ತನಿಖೆಯಾಗಬೇಕು ಎಂದರು.

ಜಿಲ್ಲೆಯಲ್ಲಿ ಪಿಡಿಒಗಳು ಒತ್ತಡದಲ್ಲಿದ್ದಾರೆ. ಈಗಾಗಲೇ ಇಬ್ಬರು ಪಿಡಿಒಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದೀಗ ಪಿಡಿಒಗಳು ಲಂಚ ನೀಡಬೇಕು ಎಂದು ತಾಪಂ ಇಒ ಶಾಸಕ, ತಾಪಂ ಅಧ್ಯಕ್ಷರ ಸಮ್ಮುಖವೇ ಬಹಿರಂಗ ಹೇಳಿಕೆ ನೀಡಿದ್ದಾರೆ. ತಾಲೂಕು ಮಟ್ಟದ ಅಧಿಕಾರಿಯ ಈ ಹೇಳಿಕೆ ಸರಕಾರದ ನಡಾವಳಿಕೆ ಯನ್ನು ಬಹಿರಂಗಪಡಿಸಿದೆ. ತಾನು ಲಂಚ ಪಡೆದು ಮೇಲಿನ ಅಧಿಕಾರಿಗಳಿಗೆ ನೀಡುತ್ತೇನೆ ಎಂದು ಹೇಳಿರುವುದನ್ನು ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ಶಾಸಕ ಡಾ. ವೈ. ಭರತ್ ಶೆಟ್ಟಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ದ.ಕ.ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಸ್ಥಾಯಿ ಸಮಿತಿಯ ಅಧ್ಯಕ್ಷ ಜನಾರ್ದನ ಗೌಡ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News