ಐರೋಪ್ಯ ಒಕ್ಕೂಟೇತರ ಉದ್ಯೋಗಿಗಳ ನೇಮಕಾತಿ ಮಿತಿ ರದ್ದುಪಡಿಸಿ: ಬ್ರಿಟನ್‌ನ ವಲಸೆ ಸಲಹಾ ಸಮಿತಿ ಶಿಫಾರಸು

Update: 2018-09-19 15:06 GMT

ಲಂಡನ್, ಸೆ. 19: ಭಾರತ ಮತ್ತು ಐರೋಪ್ಯ ಒಕ್ಕೂಟೇತರ ದೇಶಗಳ ನಾಗರಿಕರನ್ನು ಉದ್ಯೋಗಕ್ಕೆ ನೇಮಿಸಿಕೊಳ್ಳುವಾಗ ಅನ್ವಯಿಸುವ ವಾರ್ಷಿಕ ಮಿತಿಯನ್ನು ‘ಬ್ರೆಕ್ಸಿಟ್’ ಬಳಿಕ ರದ್ದುಪಡಿಸುವಂತೆ ಬ್ರಿಟನ್‌ನ ವಲಸೆ ಸಲಹಾ ಸಮಿತಿ (ಎಂಎಸಿ) ಮಂಗಳವಾರ ಶಿಫಾರಸು ಮಾಡಿದೆ.

ಪ್ರಸಕ್ತ ಈ ನೇಮಕಾತಿ ಮಿತಿ 20,700 ಆಗಿದೆ. ಅದೇ ವೇಳೆ, ಉದ್ಯೋಗ ನೇಮಕಾತಿಯಲ್ಲಿ ಐರೋಪ್ಯ ಒಕ್ಕೂಟದ ನಾಗರಿಕರಿಗೆ ಹೆಚ್ಚಿನ ಆದ್ಯತೆಯನ್ನು ನೀಡಬಾರದು ಎಂಬುದಾಗಿಯೂ ಅದು ಹೇಳಿದೆ.

‘‘ಐರೋಪ್ಯ ಒಕ್ಕೂಟದ ನಾಗರಿಕರಿಗೆ ಆದ್ಯತೆ ನೀಡದಿರುವ ವ್ಯವಸ್ಥೆಯೊಂದನ್ನು ನಾವು ಜಾರಿಗೆ ತರಬೇಕು’’ ಎಂದು ಸಮಿತಿಯು ತನ್ನ ಬಹು ನಿರೀಕ್ಷಿತ ವರದಿಯಲ್ಲಿ ಹೇಳಿದೆ. ವಲಸೆ ಸಲಹಾ ಸಮಿತಿ ಮಾಡುವ ಶಿಫಾರಸುಗಳನ್ನು ಸರಕಾರವು ಸಾಮಾನ್ಯವಾಗಿ ಅಂಗೀಕರಿಸುತ್ತದೆ.

2000ದ ದಶಕದ ಆರಂಭದಲ್ಲಿ ಕಾಣಿಸಿಕೊಂಡ ಅನಿಯಂತ್ರಿತ ವಲಸೆ ಹಾಗೂ ಬ್ರಿಟನ್‌ನ ಸಾರ್ವಜನಿಕ ಸೇವೆಗಳು ಮತ್ತು ಇತರ ಕ್ಷೇತ್ರಗಳ ಮೇಲೆ ಅದು ಹೇರಿದ ಒತ್ತಡವು, 2016ರ ‘ಬ್ರೆಕ್ಸಿಟ್’ ಜನಮತಗಣನೆಯಲ್ಲಿ, ಬ್ರಿಟನ್ ಐರೋಪ್ಯ ಒಕ್ಕೂಟದಿಂದ ಹೊರಬರಬೇಕು ಎಂಬುದರ ಪರವಾಗಿ ಜನರು ಮತಹಾಕಲು ಪ್ರಮುಖ ಕಾರಣವಾಗಿತ್ತು.

ಐರೋಪ್ಯ ಒಕ್ಕೂಟೇತರ ದೇಶದ ಜನರ ಉದ್ಯೋಗ ನೇಮಕಾತಿ ಮೇಲಿನ ಮಿತಿಯನ್ನು ಹೆಚ್ಚಿಸಬೇಕು ಮತ್ತು ‘ಟಯರ್ 2’ ಉದ್ಯೋಗ ವೀಸಾಕ್ಕೆ ಕಡಿಮೆ ನಿರ್ಬಂಧಗಳನ್ನು ವಿಧಿಸಬೇಕು ಎನ್ನುವುದು ಸಮಿತಿಯ ವರದಿಯ ಪ್ರಮುಖ ಶಿಫಾರಸುಗಳಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News