ಶಿಕ್ಷಕರ ಸಮಸ್ಯೆ ಪರಿಹರಿಸಲು ಸಿ.ಎಂ. ಜೊತೆ ಸಮಾಲೋಚನಾ ಸಭೆ: ಎಲ್. ಭೋಜೇಗೌಡ

Update: 2018-09-19 17:37 GMT

ಮಂಗಳೂರು, ಸೆ.19: ಶಿಕ್ಷಕರ ಸಮಸ್ಯೆ ಪರಿಹಾರಕ್ಕೆ ಮುಖ್ಯ ಮಂತ್ರಿಯೊಂದಿಗೆ ಸೆ.27 ಅಥವಾ 28ರಂದು ಸಮಾಲೋಚನೆ ನಡೆಸಲು ನಿಗದಿಯಾಗಿದೆ ಈ ಸಂದರ್ಭದಲ್ಲಿ ಶಿಕ್ಷಕ ವೃಂದದ ಸಮಸ್ಯೆಗೆ ಕಾರಣವಾಗಿರುವ ಹಲವಾರು ಸಮಸ್ಯೆಗಳ ಬಗ್ಗೆ ಚರ್ಚಿಸಲಾಗುವುದು ಎಂದು ಕರ್ನಾಟಕ ಸರಕಾರದ ವಿಧಾನ ಪರಿಷತ್ ಸದಸ್ಯ ಎಲ್.ಭೋಜೇ ಗೌಡ ತಿಳಿಸಿದ್ದಾರೆ.

ನಗರದ ಮಿಲಾಗ್ರಿಸ್ ಪದವಿ ಪೂರ್ವಕಾಲೇಜು ಸಭಾಂಗಣದಲ್ಲಿಂದು ದಕ್ಷಿಣ ಕನ್ನಡ ಜಿಲ್ಲಾ ಪ್ರೌಢ ಶಾಲಾ ಮುಖ್ಯೊಪಾಧ್ಯಾಯರ ಹಾಗೂ ಪದವಿ ಪೂರ್ವ ಕಾಲೇಜುಗಳ ಪ್ರಚಾರ್ಯರ ಸಂಘದ ವತಿಯಿಂದ ಹಮ್ಮಿಕೊಂಡ ಶೈಕಣಿಕ ಸಮಾವೇಶ ವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.ಶಿಕ್ಷಣ ಇಲಾಖೆಯಲ್ಲಿ ಕೆಲವೊಂದು ತೀರ್ಮಾನಗಳು ಸಮರ್ಪಕವಾಗಿಲ್ಲದೆ ಇರುವುದರಿಂದ ಐಎಎಸ್ ಅಧಿಕಾರಿಗಳು ತೆಗೆದುಕೊಂಡ ತೀರ್ಮಾನದ ಪ್ರಕಾರ ನಡೆದುಕೊಂಡು ಬಂದಿದೆ. ಈ ರೀತಿಯ ಕೆಲವೊಂದು ಅವೈಜ್ಞಾನಿಕ ತೀರ್ಮಾನಗಳು ಕೆಲವು ಗೊಂದಲಗಳಿಗೆ ಕಾರಣವಾಗಿದೆ. ಇವುಗಳನ್ನು ಸರಿಪಡಿಸಿ ಕೊಳ್ಳಬೇಕಾ ಗಿದೆ. ಪರಿಣಾಮವಾಗಿ ಶಿಕ್ಷಕರು ಒತ್ತಡದಲ್ಲಿ ಕಾರ್ಯನಿರ್ವಹಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಗುಣ ಮಟ್ಟದ ಶಿಕ್ಷಣ ನೀಡಬೇಕಾದರೆ ಶಿಕ್ಷಕರು ಒತ್ತಡ ಮುಕ್ತರಾಗಿ ಕಾರ್ಯನಿರ್ವಹಿಸಬೇಕಾಗಿದೆ ಎಂದು ಭೋಜೇಗೌಡ ತಿಳಿಸಿದ್ದಾರೆ.

ಸಂಘಟನೆಯ ಅಧ್ಯಕ್ಷ ಡಾ.ಇಸ್ಮಾಯಿಲ್ ಎನ್ ಮಾತನಾಡುತ್ತಾ, ಸರಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ಸಂಬಂಧಿಸಿದಂತೆ ತಾರತಮ್ಯ ನೀತಿಯನ್ನು ಮಾಡಲಾಗುತ್ತಿದೆ.ಹೊಸ ವೇತನ ಆಯೋಗದ ಶಿಫಾರಸು ಜಾರಿಯಾಗಿದ್ದರೂ ಆರು ತಿಂಗಳಾದರೂ ಅನುದಾನಿತ ಶಾಲೆಗಳಲ್ಲಿ ಈ ನೀತಿ ಇನ್ನೂ ಜಾರಿಯಾಗಿಲ್ಲ. ಈ ಬಗ್ಗೆ ಸರಕಾರ ಗಮನಹರಿಸಬೇಕಾಗಿದೆ ಎಂದರು.

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ವಂ.ವಲೇರಿಯನ್ ಡಿ ಸೋಜರವರು ಮಾತನಾಡುತ್ತಾ,ದೇಶದ ಭವಿಷ್ಯವನ್ನು ರೂಪಿಸುವ ಶಿಕ್ಷಕರು ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣವನ್ನು ನೀಡುವುದರ ಜೊತೆಗೆ ಅವರನ್ನು ಉತ್ತಮ ನಾಗರಿಕರನ್ನಾಗಿ ರೂಪಿಸಲು ಶ್ರಮಿಸಬೇಕಾಗಿದೆ ಎಂದರು.

ಸಮಾರಂಭದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ವೈ ಶಿವ ರಾಮಯ್ಯ,ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಪ್ರೊ. ನಾಗರಾಜಪ್ಪ, ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಎ.ಖಾದರ್ ಶಾ, ಕರ್ನಾಟಕ ರಾಜ್ಯ ಪ್ರೌಢಶಾಲಾ ಮೂಖ್ಯೋಪಾಧ್ಯಾಯರ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರೇ ಗೌಡ, ಮಿಲಾಗ್ರೀಸ್‌ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಜಾನ್ ಫಾಯಸ್ ಹಾಗೂ ಸಂಘದ ಪದಾಧಿಕಾರಿಗಳಾದ ಮಹೇಶ್ ಶೆಟ್ಟಿ, ಉಮೇಶ್ ಅಲೋಶಿಯಸ್ ಡಿಸೋಜ ಮೊದಲಾದರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News