ಮುಗ್ದ ದಲಿತರಿಂದ ಹಣ ಪಡೆದು ಡಿಸಿ ಮನ್ನಾ ಭೂಮಿ ಹಂಚಿಕೆ-ಆರೋಪ

Update: 2018-09-19 17:50 GMT

ಪುತ್ತೂರು, ಸೆ. 19: ಡಿಸಿ ಮನ್ನಾ ಭೂಮಿ ಹಂಚಿಕೆ ವಿಚಾರದಲ್ಲಿ ಮುಗ್ದ ಬಡ ದಲಿತ ಕುಟುಂಬಗಳಿಂದ ಹಣ ಪಡೆದು ಅವರಿಗೆ ಅನ್ಯಾಯ ಎಸಗಲಾಗುತ್ತಿದೆ. ಡಿಸಿ ಮನ್ನಾ ಭೂಮಿ ಹಂಚಿಕೆ ವಿಚಾರದಲ್ಲಿ ದಲಿತರನ್ನು ದಲಿತರ ವಿರುದ್ಧ ಎತ್ತಿಕಟ್ಟುವ ಕೆಲಸ ನಡೆಯುತ್ತಿದೆ. ಕಂದಾಯ ಅಧಿಕಾರಿಗಳು ದಲಿತರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಡಿಸಿ ಮನ್ನಾ ಭೂಮಿಯನ್ನು ಆಯಾ ಗ್ರಾಮಸ್ಥರಾದ ಪರಿಶಿಷ್ಟ ಜಾತಿ ಮತ್ತು ಪಂಗಡದ ಬಡ ಕುಟುಂಬಗಳಿಗೆ ಹಂಚಿಕೆ ಮಾಡಬೇಕು ಎಂದು ದಲಿತ್ ಸೇವಾ ಸಮಿತಿಯ ಜಿಲ್ಲಾಧ್ಯಕ್ಷ ಸೇಸಪ್ಪ ಬೆದ್ರಕಾಡ್ ಆಗ್ರಹಿಸಿದರು.

ಅವರು ಆರ್ಯಾಪು ಗ್ರಾಮದ ಡಿಸಿ ಮನ್ನಾ ಭೂಮಿಯನ್ನು ಗ್ರಾಮದ ಪರಿಶಿಷ್ಟ ಜಾತಿ ಮತ್ತು ಪಂಡದವರಿಗೆ ನೀಡುವ ವಿಚಾರದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ದಲಿತ್ ಸೇವಾ ಸಮಿತಿ ಪುತ್ತೂರು ತಾಲೂಕು ಶಾಖೆಯ ನೇತೃತ್ವದಲ್ಲಿ ಬುಧವಾರ ಪುತ್ತೂರಿನ ಮಿನಿವಿಧಾನಸೌಧದ ಎದುರು ನಡೆದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು. 

ಅಮಾಯಕ ಮುಗ್ಧ ಬಡ ದಲಿತರಿಂದ ಹಣ ಪಡೆದುಕೊಂಡು ಡಿಸಿ ಮನ್ನಾ ಭೂಮಿ ಹಂಚಲು ಹೊರಟಿರುವ ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಗಿರಿಧರ್ ನಾಯ್ಕ್ ಗೂಂಡಾಗಿರಿ ಪ್ರವೃತ್ತಿಗೆ ಇಳಿದಿದ್ದು, ಅವರು ನಡೆಸುತ್ತಿರುವ ಅವ್ಯವಹಾರಕ್ಕೆ ಕಂದಾಯ ಅಧಿಕಾರಿಗಳು ಸಹಕಾರ ನೀಡುತ್ತಿ ದ್ದಾರೆ. ಬೇರೆ ವರ್ಗದವರನ್ನು ಸೇರಿಸಿಕೊಂಡು ಛೂ ಬಿಡುವ ಮೂಲಕ ದಲಿತರನ್ನು ದಲಿತರ ವಿರುದ್ದ ಎತ್ತಿಕಟ್ಟುತ್ತಿರುವ ಅವರಿಂದಾಗಿ ದಲಿತ ಸಂಘಟನೆ ಯೊಳಗೆ ಸಂಘರ್ಷ ನಡೆದು ರಕ್ತಪಾತವಾಗಲಿದ್ದು, ಇದಕ್ಕೆ ಕಂದಾಯ ಅಧಿಕಾರಿಗಳು ಮತ್ತು ಪೊಲೀಸ್ ಇಲಾಖೆಯೇ ಹೊಣೆಯಾಗಿದೆ ಎಚ್ಚರಿಸಿದರು. 

ಮುಗ್ಧ ದಲಿತರನ್ನು ಬಳಸಿಕೊಂಡು ಕಂದಾಯ ಇಲಾಖೆಯ ಅಧಿಕಾರಿಗಳ ಬೆಂಬಲದಿಂದ ಸ್ಥಳೀಯ ದಲಿತರು ನಿರ್ಮಿಸಿರುವ ಗುಡಿಸಲುಗಳನ್ನು ತೆರವು ಮಾಡುತ್ತಿರುವ ಗಿರಿಧರ್ ನಾಯ್ಕ ಅವರು ಪುತ್ತೂರಿನ ಉಪವಿಭಾಗಾಧಿಕಾರಿಯೇ ಅಥವಾ ತಹಶೀಲ್ದಾರನೇ, ಡಿಸಿ ಮನ್ನಾ ಭೂಮಿಯನ್ನು ಸರ್ವೆ ಮಾಡಿ ನಕ್ಷೆ ಮಾಡಿಕೊಡಲು ಅವರು ಯಾರು ಎಂದು ಪ್ರಶ್ನಿಸಿದ ಅವರು ನಿಮಗೆ ಈ ಕೆಲಸವನ್ನು ಮಾಡಲಾಗದಿದ್ದರೆ ಗಿರಿಧರ್ ನಾಯ್ಕ ಅವರಿಗೆ ಕಂದಾಯ ಅಧಿಕಾರಿಗಳು ಕುರ್ಚಿ ಬಿಟ್ಟುಕೊಟ್ಟು ಹೋಗಿ ಎಂದು ಹೇಳಿದರು. 

ಆರ್ಯಾಪು ಗ್ರಾಮದಲ್ಲಿನ ಡಿಸಿ ಮನ್ನಾ ಭೂಮಿಯಲ್ಲಿ ಸ್ಥಳೀಯರು ನಿರ್ಮಿಸಿದ್ದ ಗುಡಿಸಲುಗಳನ್ನು ತೆರವುಗೊಳಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ. ಈ ಭೂಮಿಯನ್ನು ಗ್ರಾಮದ ಹೊರಗಿನ ಇತರರಿಗೆ ನೀಡಲು ನಾವು ಪ್ರಾಣ ಹೋದರೂ ಅವಕಾಶ ಕೊಡುವುದಿಲ್ಲ. 15 ದಿವಸದೊಳಗೆ ಕಂದಾಯ ಇಲಾಖೆಯ ಅಧಿಕಾರಿಗಳು ಸರ್ವೆ ಮಾಡಿ ಕ್ರಮಕೈಗೊಳ್ಳದಿದ್ದರೆ ನಾವೂ ಅಲ್ಲಿ ಟೆಂಟ್‍ಗಳನ್ನು ನಿರ್ಮಿಸುತ್ತೇವೆ ಎಂದು ಎಚ್ಚರಿಸಿದರು.

ದಲಿತ್ ಸೇವಾ ಸಮಿತಿಯ ಪುತ್ತೂರು ತಾಲೂಕು ಶಾಖೆಯ ಗೌರವಾಧ್ಯಕ್ಷ ಮೋಹನ್ ನಾಯ್ಕ್ ಅವರು ಮಾತನಾಡಿ, ಗಂಡ-ಹೆಂಡತಿ, ಅಣ್ಣ-ತಮ್ಮಂದಿರುವ , ಕುಟುಂಬದೊಳಗೆ ಘರ್ಷಣೆ ಎಬ್ಬಿಸಿ ಹಣ ಮಾಡುವ ದಂಧೆಯ ಮೂಲಕ ಹೊಟ್ಟೆ ತುಂಬಿಸುವ ಗಿರಿಧರ್ ನಾಯ್ಕ್ ಅವರ ಬಗ್ಗೆ ಎಚ್ಚರ ವಹಿಸಬೇಕಾಗಿದೆ ಎಂದರು. 

ದಲಿತ್ ಸೇವಾ ಸಮಿತಿಯ ಕಡಬ ಶಾಖೆಯ ಸಂಘಟನಾ ಕಾರ್ಯದರ್ಶಿ ಅಣ್ಣಿ ಏಳ್ತಿಮಾರ್, ಮರಾಠಿ ಸಂಘದ ತಾಲೂಕು ಅಧ್ಯಕ್ಷ ಸುಂದರ ನಾಯ್ಕ, ದಲಿತ್ ಸೇವಾ ಸಮಿತಿಯ ಪುತ್ತೂರು ತಾಲ್ಲೂಕು ಶಾಖೆಯ ಅಧ್ಯಕ್ಷ ರಾಜು ಹೊಸ್ಮಠ, ಪುತ್ತೂರು ಮರಾಠಿ ಸಂಘದ ಕಾರ್ಯದರ್ಶಿ ರಾಮಚಂದ್ರ ನಾಯ್ಕ್, ಮರಾಠಿ ಸಂಘದ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ಮೋಹಿನಿ ನಾಯ್ಕ, ದಲಿತ್ ಸೇವಾ ಸಮಿತಿಯ ಮುಖಂಡ ಸೋಮಪ್ಪ ನಾಯ್ಕ್, ಮರಾಠಿ ಸಂಘದ ಮುಖಂಡ ಕೃಷ್ಣ ನಾಯ್ಕ್ ಅವರು ಮಾತನಾಡಿ ದಲಿತರನ್ನು ಧಮನಿಸುವ ಕೆಲಸ ಮುಂದುವರಿದರೆ ಹೋರಾಟ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ದಲಿತ್ ಸೇವಾ ಸಮಿತಿಯ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಧನಂಜಯ ನಾಯ್ಕ್, ನಿವೃತ್ತ ಡಿ.ಎಸ್. ಯು.ಕೆ. ನಾಯ್ಕ್, ತಾಲೂಕು ಸಂಚಾಲಕ ಕೃಷ್ಣ ನಾಯ್ಕ, ತಾಲ್ಲೂಕು ಮಹಿಳಾ ಘಟಕದ ಸಂಚಾಲಕಿ ಸುಶೀಲ ಕುಕ್ಕಾಡಿ, ತಾಲೂಕು ಉಪಾಧ್ಯಕ್ಷ ಮನೋಹರ್ ಕೋಡಿಜಾಲು, ಅನುಸೂಯ ಸಂಪ್ಯ ಮತ್ತಿತರರು ಉಪಸ್ಥಿತರಿದ್ದರು.

ಮನವಿ ಸ್ವೀಕರಿಸಲು ಬಾರದ ಅಧಿಕಾರಿಗಳು: ಮಿನಿ ವಿಧಾನ ಸೌಧಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ

ದಲಿತ್ ಸೇವಾ ಸಮಿತಿಯ ಪ್ರತಿಭಟನೆ 10.30ಕ್ಕೆ ಮಿನಿವಿಧಾನಸೌಧದ ಎದುರು ಪ್ರತಿಭಟನೆ ಆರಂಭಗೊಂಡಿದ್ದರೂ ಪುತ್ತೂರು ಉಪವಿಭಾಗಾಧಿಕಾರಿ ಯಾಗಲೀ, ತಹಶೀಲ್ದಾರರಾಗಲೀ ಅಪರಾಹ್ನ 2 ಗಂಟೆಯ ತನಕ ಮನವಿ ಸ್ವೀಕರಿಸಲು ಮುಂದಾಗದಿರುವುದರಿಂದ ಆಕ್ರೋಶಿತಗೊಂಡ ಪ್ರತಿಭಟನಾ ಕಾರರು ಮಿನಿವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ಮುಂದುವರಿಸಿದರು. 

ಕೊಳ್ತಿಗೆಯಲ್ಲಿನ ಕಾರ್ಯಕ್ರಮ ಮುಗಿಸಿಕೊಂಡು ಬಂದಿದ್ದ ತಹಶೀಲ್ದಾರ್ ಅನಂತಶಂಕರ್ ಅವರು ಮನವಿ ಸ್ವೀಕರಿಸಿ, ಆರ್ಯಾಪು ಗ್ರಾಮದ ಡಿಸಿ ಮನ್ನಾ ಭೂಮಿ ವಿಚಾರದಲ್ಲಿ ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆಯ ವತಿಯಿಂದ ಜಂಟಿ ಸರ್ವೆ ನಡೆಸಿ 15 ದಿವಸದೊಳಗೆ ಸ್ಪಷ್ಟ ವರದಿ ನೀಡುವುದಾಗಿ ತಿಳಿಸಿದರು. ಡಿಸಿ ಮನ್ನಾ ಭೂಮಿ ವಿಚಾರದಲ್ಲಿ ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಗಿರಿಧರ್ ನಾಯ್ಕ್ ಅಕ್ರಮ ಎಸಗಿರುವ ಕುರಿತು ಲಿಖಿತವಾಗಿ ದೂರು ನೀಡಿದಲ್ಲಿ ಪರಿಶೀಲಿಸಿ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು. ಬಳಿಕ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News