ಮಂಗಳೂರು: ಕುಡಿದು ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಅಮಾನತು

Update: 2018-09-19 18:25 GMT

ಮಂಗಳೂರು, ಸೆ.19: ನಗರದ ಲಾಲ್‌ಬಾಗ್‌ನಲ್ಲಿ ಅಮಲು ಪದಾರ್ಥ ಸೇವಿಸಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂಚಾರ ಪೂರ್ವ ಪೊಲೀಸ್ ಠಾಣೆಯ ಪೊಲೀಸ್ ಕಾನ್ಸ್‌ಟೇಬಲ್ ಅಶೋಕ್ ಗೌಡ ಎಂಬವರನ್ನು ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್ ಅಮಾನತುಗೊಳಿಸಿದ್ದಾರೆ.

ಬುಧವಾರ ಲಾಲ್‌ಭಾಗ್ ವೃತ್ತದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭ ಅಮಲು ಪದಾರ್ಥ ಸೇವಿಸಿ ತೂರಾಡುತ್ತಾ ವಾಹನಗಳನ್ನು ತಳ್ಳುತ್ತಿದ್ದ ದೃಶ್ಯವಿರುವ ವೀಡಿಯೋ ವೈರಲ್ ಆಗಿತ್ತು. ವಾಹನ ಢಿಕ್ಕಿಯಾಗಿ ಅಪಾಯ ಸಂಭವಿಸುವ ಸಾಧ್ಯತೆಯನ್ನು ಮನಗಂಡ ಸಾರ್ವಜನಿಕರು ಅಶೋಕ್ ಗೌಡರನ್ನು ಬದಿಯಲ್ಲಿ ಕುಳ್ಳಿರಿಸಿ, ಉಪಚರಿಸಿದ್ದರು. ಅಲ್ಲದೆ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಅದನ್ನು ಹರಿಯಬಿಟ್ಟಿದ್ದರು. ಈ ವೀಡಿಯೋ ವೈರಲ್ ಆದ ತಕ್ಷಣ ಪೊಲೀಸ್ ಆಯುಕ್ತರು ಅಶೋಕ್ ಗೌಡರನ್ನು ಅಮಾನತುಗೊಳಿಸಿದ್ದಾರೆ.

ಸಮವಸ್ತ್ರ ಧರಿಸಿ ಕರ್ತವ್ಯ ನಿರ್ವಹಿಸುವಾಗ ಅಮಲು ಪದಾರ್ಥ ಸೇವಿಸಿರುವುದು ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್ ತಿಳಿಸಿದ್ದಾರೆ.

ಕೌನ್ಸಿಲಿಂಗ್‌ಗೆ ಸಲಹೆ: ಅಮಲು ಪದಾರ್ಥ ಸೇವನೆ ಮಾಡಿ ಕರ್ತವ್ಯ ನಿರ್ವಹಿಸಿದ ಕಾರಣಕ್ಕೆ ತಕ್ಷಣ ಅಮಾನತು ಮಾಡುವುದು ಸರಿಯಲ್ಲ. ಅವರಿಗೆ ಯಾವುದಾದರೂ ಸಮಸ್ಯೆ ಇರಬಹುದು. ಹಾಗಾಗಿ ಅಮಾನತು ಆದೇಶ ಹಿಂಪಡೆದು ಸೂಕ್ತ ಕೌನ್ಸಿಲಿಂಗ್ ವ್ಯವಸ್ಥೆ ಕಲ್ಪಿಸಬೇಕು ಎಂಬ ಆಗ್ರಹ ಸಾರ್ವಜನಿಕರಿಂದ ವ್ಯಕ್ತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News