ಉಡುಪಿ: ಪ್ರವಾಸೋದ್ಯಮದ ಅಭಿವೃದ್ಧಿಗೆ ಬೋಟ್ ಹೌಸ್ ಮೆರುಗು

Update: 2018-09-20 07:36 GMT

ಉಡುಪಿ, ಸೆ.19: ದೇಶದ ಪ್ರವಾಸೋದ್ಯಮ ಭೂಪಟದಲ್ಲಿ ಉಡುಪಿ ಜಿಲ್ಲೆಗೊಂದು ಮಹತ್ವದ ಸ್ಥಾನವನ್ನು ದೊರಕಿಸಿಕೊಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿರುವ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಹಾಗೂ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಅನಿತಾ ಬಿ.ಆರ್. ಬೋಟ್ ಹೌಸ್ ನ್ನು ಜಿಲ್ಲೆಯ ನದಿಗಳ ಹಿನ್ನೀರಿನಲ್ಲಿ ಜನಪ್ರಿಯಗೊಳಿಸಲು ಮುಂದಾಗಿದ್ದಾರೆ.

ಉಡುಪಿಯಲ್ಲಿ ಜಲ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಿ ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಕೇರಳ ಮಾದರಿಯ ಬೋಟ್‌ಹೌಸ್ ಕರ್ನಾಟಕಕ್ಕೂ ಲಗ್ಗೆ ಇಟ್ಟಿದೆ. ಇವುಗಳನ್ನು ಉಡುಪಿಯಲ್ಲೂ ಪ್ರವಾಸೋದ್ಯಮದ ಅಭಿವೃದ್ದಿಗೆ ಪೂರಕವಾಗಿ ಬಳಸಿಕೊಳ್ಳುವ ಪ್ರಯತ್ನ ಕೆಲ ವರ್ಷಗಳ ಹಿಂದೆ ನಡೆದಿತ್ತು. ಆದರೆ ಆಗ ಅದು ಉಡುಪಿಗೆ ಅಷ್ಟೊಂದು ಪರಿಚಿತವಾಗಿರದ ಕಾರಣ ಹೆಚ್ಚಿನ ಸಫಲತೆ ಸಿಕ್ಕಿರಲಿಲ್ಲ.

ಆದರೆ ಒಂದೆರಡು ವರ್ಷಗಳ ಹಿಂದೆ ಇಂತಹ ಪ್ರಯತ್ನ ಮತ್ತೆ ನಡೆದಿದ್ದು, ಇದೀಗ ಜಿಲ್ಲೆಯಲ್ಲಿ 5 ಬೋಟ್ ಹೌಸ್‌ಗಳು ಕಾರ್ಯಾಚರಿಸುತ್ತಿವೆ. 1 ಬೋಟ್ ಹೌಸ್ ನಿರ್ಮಾಣ ಹಂತದಲ್ಲಿದ್ದರೆ, ಇನ್ನೆರಡು ಅರ್ಜಿಗಳು ಪರಿಶೀಲನಾ ಹಂತದಲ್ಲಿವೆ. ಈಗಿರುವ ಬೋಟ್ ಹೌಸ್‌ಗಳು ಸಾಕಷ್ಟು ಪ್ರವಾಸಿ ಗರನ್ನು ಸೆಳೆಯುತಿದ್ದು, ಒಂದೆರಡು ವರ್ಷಗಳಲ್ಲಿ ಉಡುಪಿ ಬೋಟ್ ಹೌಸ್‌ಗಳು ಕೇರಳದಷ್ಟೇ ಜನಪ್ರಿಯತೆ ಪಡೆಯುವ ಸಾಧ್ಯತೆ ಇದೆ ಎಂದು ಅನಿತಾ ತಿಳಿಸಿದರು.

ಉಡುಪಿಯಲ್ಲಿ ಕೇರಳಕ್ಕಿಂತಲೂ ಸೊಗಸಾದ, ಶುದ್ಧವಾದ ಹಿನ್ನೀರಿದೆ. ಸದ್ಯಕ್ಕಂತೂ ಮಲ್ಪೆ ಸಮೀಪದ ಹೂಡೆಯ ಕೋಡಿಬೇಂಗ್ರೆ ಪ್ರದೇಶ ಬೋಟ್‌ಹೌಸ್‌ಗೆ ನೆಚ್ಚಿನ ತಾಣವಾಗಿದೆ. ಇಲ್ಲಿ ಈಗಾಗಲೇ ನಾಲ್ಕು ಬೋಟ್ ಹೌಸ್‌ಗಳಿವೆ. ಇನ್ನೊಂದು ಬೋಟ್‌ಹೌಸ್ ಕುಂದಾಪುರದ ಪಂಚಗಂಗಾವಳಿ ಹಾಗೂ ಮರವಂತೆಯ ಸೌಪರ್ಣಿಕ ನದಿಯಲ್ಲಿ ಕಾರ್ಯಾಚರಿಸುತ್ತಿವೆ ಎಂದರು.

 ಜಿಲ್ಲೆಯಲ್ಲಿ ಹೂಡೆ-ಕೋಡಿಬೇಂಗ್ರೆ ಪ್ರದೇಶ ಬೋಟ್ ಹೌಸ್ ಸಂಚಾರಕ್ಕೆ ಹೇಳಿ ಮಾಡಿಸಿದ ಪ್ರದೇಶದಂತಿದೆ. ಇಲ್ಲಿ ಸ್ವರ್ಣಾ ನದಿ, ಸೀತಾ ನದಿ ಹಾಗೂ ಎಣ್ಣೆಹೊಳೆ ಒಂದಾಗಿ ಅರಬಿಸಮುದ್ರ ಸೇರುವ ತ್ರಿವೇಣಿ ಸಂಗಮ ಅಥವಾ ಡೆಲ್ಟಾ ಬೀಚ್ ಪ್ರಕೃತಿ ಪ್ರಿಯರಿಗೆ ಹೇಳಿ ಮಾಡಿಸಿದ ಪ್ರದೇಶ. ಈ ಪ್ರದೇಶದ ಸುತ್ತಲೂ ಬೋಟ್ ಹೌಸ್‌ಯಾನ ಪ್ರವಾಸಿಗರಿಗೆ ವಿಶಿಷ್ಟ ಅನುಭವ ನೀಡಲಿದೆ.

ಹೂಡೆಯಲ್ಲಿ ಈಗ ನಾಲ್ಕು ಬೋಟ್‌ಹೌಸ್‌ಗಳಿವೆ. ಪ್ಯಾರಡೈಸ್ ಲಗೂನ್ ಖಾಸಗಿಯವರಿಗೆ ಸೇರಿದ್ದು, ತಿರುಮಲ ಕ್ರೂಸಸ್, ಪಾಂಚಜನ್ಯ ಹಾಗೂ ಪ್ರಣವ್ ಈಗ ಪ್ರವಾಸಿಗರಿಗೆ ಹಗಲು ಮತ್ತು ರಾತ್ರಿಯ ವೇಳೆ ನದಿಯಲ್ಲಿ ಸಂಚರಿಸುವ ಅಪರೂಪದ ಅನುಭವವನ್ನು ನೀಡುತ್ತಿವೆ ಎಂದವರು ಹೇಳಿದರು.

 ಈ ಬೋಟ್ ಹೌಸ್‌ಗಳು ಮಳೆಗಾಲದ 2-3 ತಿಂಗಳನ್ನು ಹೊರತು ಪಡಿಸಿ ಉಳಿದೆಲ್ಲಾ ತಿಂಗಳು ಪ್ರವಾಸಿಗರಿಗೆ ಲಭ್ಯವಿದೆ. ಬೋಟ್‌ಹೌಸ್‌ಗೆ ಪರವಾನಿಗೆ ನೀಡುವ ಮುನ್ನ ಸಾಕಷ್ಟು ಎಚ್ಚರಿಕೆಯನ್ನು ವಹಿಸಲಾಗುತ್ತದೆ. ಇವುಗಳ ಸ್ವಚ್ಛತೆ, ಪ್ರವಾಸಿಗರಿಗೆ ನೀಡುವ ಆಹಾರದ ಗುಣಮಟ್ಟ, ಪೌಷ್ಠಿಕತೆ, ಅವರಿಗೆ ನೀಡುವ ಸೇವೆಗೆ ಕಠಿಣ ನಿಬಂಧನೆಗಳಿವೆ. ಅಲ್ಲದೇ ಬೋಟ್‌ಹೌಸ್‌ನ ಸಿಬ್ಬಂದಿಗೆ ಖಾಸಗಿ ಕಂಪೆನಿಯೊಂದರಿಂದ ತರಬೇತಿ ನೀಡಲಾಗುತ್ತದೆ. ಇವುಗಳ ಪರಿಶೀಲನೆಯೂ ಆಗಾಗ ನಡೆಯುತ್ತದೆ ಎಂದು ಅನಿತಾ ತಿಳಿಸಿದರು. ಜಿಲ್ಲೆಯಲ್ಲಿ ಇನ್ನೂ ಕೆಲವು ಬೋಟ್‌ಹೌಸ್‌ಗಳ ಓಡಿಸಲು ಅವಕಾಶವಿದೆ. ಪ್ರಾಯಶ: ಕಾರ್ಯಾಚರಿಸು ತ್ತಿರುವ ಬೋಟ್‌ಹೌಸ್‌ಗಳು ಜನಪ್ರಿಯತೆ ಪಡೆದರೆ, ಇನ್ನಷ್ಟಕ್ಕೆ ಬೇಡಿಕೆ ಬರಬಹುದು ಎಂದು ಅನಿತಾ ನುಡಿದರು.

ಕರಾವಳಿ ಕರ್ನಾಟಕದ ಅತಿದೊಡ್ಡ ಬೋಟ್‌ಹೌಸ್ ತಿರುಮಲ ಕ್ರೂಸ್

ಸ್ವರ್ಣಾ ನದಿಯ ಹಿನ್ನೀರಲ್ಲಿ ತೇಲುತ್ತಾ ಸಂಚರಿಸುವ ‘ತಿರುಮಲ ಕ್ರೂಸ್’ ಕರಾವಳಿ ಕರ್ನಾಟಕದ ಅತ್ಯಂತ ದೊಡ್ಡ ಬೋಟ್‌ಹೌಸ್ ಆಗಿದೆ ಎಂದು ಅದರ ಮಾಲಕ ನಾಗರಾಜ್ ಬಿ.ಕುಂದರ್ ಹೇಳುತ್ತಾರೆ. 120 ಅಡಿ ಉದ್ದ ಹಾಗೂ 20 ಅಡಿ ಅಗಲದ ಈ ಬೋಟ್‌ಹೌಸ್‌ಗೆ ವರ್ಷದ 12 ತಿಂಗಳು ಕೋಡಿಬೇಂಗ್ರೆ ಪ್ರದೇಶದಲ್ಲಿ ಸಂಚರಿಸಲು ಪರವಾನಿಗೆ ಇದೆ ಎನ್ನುತ್ತಾರವರು. ಸುಸಜ್ಜಿತವಾದ ಐದು ರೂಮನ್ನು ಹೊಂದಿರುವ ತಿರುಮಲ ಸುಮಾರು ಏಳು ಕಿ.ಮೀ. ವ್ಯಾಪ್ತಿಯಲ್ಲಿ ಬೆಂಗ್ರೆ ಅಳಿವೆ, ತ್ರಿವೇಣಿ ಸಂಗಮ, ಸಂಜೆಯ ಸೂರ್ಯಾಸ್ತದ ಸೌಂದರ್ಯವನ್ನು ಪ್ರವಾಸಿಗರಿಗೆ ತೋರಿಸುತ್ತದೆ ಎಂದು ಬೋಟ್‌ಹೌಸ್ ಮಾಲಕ ಕೃಷ್ಣ ಬಿ. ಕುಂದರ್ ನುಡಿದರು.

ಸಭಾಂಗಣ, 5 ಬೆಡ್ ರೂಮ್‌ಗಳನ್ನು ಹೊಂದಿರುವ ಈ ಬೋಟ್ ಹೌಸ್‌ನ್ನು ಬ್ರಹ್ಮಾವರ ಸಮೀಪದ ಹಾರಾಡಿಯಲ್ಲಿ ತಯಾರಿಸಲಾಗಿದೆ. ಮದುವೆ, ಹುಟ್ಟುಹಬ್ಬ ಪಾರ್ಟಿ, ಸಣ್ಣ ಪುಟ್ಟ ಸಭೆ, ಸಮಾರಂಭಕ್ಕೆ ಬೋಟ್‌ನಲ್ಲಿ ಅವಕಾಶವಿದೆ ಎಂದರು.

Writer - ಬಿ.ಬಿ.ಶೆಟ್ಟಿಗಾರ್

contributor

Editor - ಬಿ.ಬಿ.ಶೆಟ್ಟಿಗಾರ್

contributor

Similar News