ಸ್ವಸಹಾಯ ಸಂಘಗಳಿಗೆ ಸಾಲ ನೀಡಲು ಬ್ಯಾಂಕ್‌ಗಳ ಆಸಕ್ತಿ: ರಮೇಶ್

Update: 2018-09-20 14:25 GMT

ಉಡುಪಿ, ಸೆ.20: ಬ್ಯಾಂಕ್‌ಗಳಲ್ಲಿ ಪಡೆದ ಸಾಲವನ್ನು ಉದ್ಯಮಿಗಳಿಗಿಂತ ಸ್ವಸಹಾಯ ಸಂಘಗಳು ಸರಿಯಾಗಿ ಮರುಪಾವತಿ ಮಾಡುತ್ತಿದ್ದು, ಇದರಿಂದ ಹೆಚ್ಚಿನ ಬ್ಯಾಂಕ್‌ಗಳು ಸ್ವಸಹಾಯ ಸಂಘಗಳಿಗೆ ಸಾಲ ನೀಡಲು ಮುಂದೆ ಬರುತ್ತಿವೆ ಎಂದು ನರ್ಬಾಡ್ ಬ್ಯಾಂಕ್ ದ.ಕ. ಮತ್ತು ಉಡುಪಿ ಜಿಲ್ಲಾ ಸಹಾಯಕ ಮಹಾಪ್ರಬಂಧಕ ಎಸ್.ರಮೇಶ್ ಹೇಳಿದ್ದಾರೆ.

ಕರ್ನಾಟಕ ಕಿರು ಹಣಕಾಸು ಸಂಸ್ಥೆಗಳ ಒಕ್ಕೂಟದ ಆಶ್ರಯದಲ್ಲಿ ಗುರುವಾರ ಬ್ರಹ್ಮಗಿರಿ ಪ್ರಗತಿ ಸೌಧದಲ್ಲಿ ಆಯೋಜಿಸಲಾದ ಕಿರು ಹಣಕಾಸು ವ್ಯವಹಾರ ಮಾಡುತ್ತಿರುವ ಪಾಲುದಾರರಿಗೆ ಹಣಕಾಸು ನಿರ್ವಹಣೆಯ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಬ್ಯಾಂಕುಗಳು ಸಾಲ ನೀಡಿರುವುದರಲ್ಲಿ ಕರ್ನಾಟಕ ರಾಜ್ಯ ಇಡೀ ದೇಶದಲ್ಲೇ ಮುಂಚೂಣಿಯಲ್ಲಿದ್ದು, ಒಟ್ಟು 11,500ಕೋಟಿ ರೂ. ಸಾಲ ನೀಡಲಾಗಿದೆ. ಉಡುಪಿ ಜಿಲ್ಲೆಯ ಬ್ಯಾಂಕ್‌ಗಳಲ್ಲಿ ಶೇ.50ರಷ್ಟು ಸಾಲಗಳನ್ನು ಸ್ವಸಹಾಯ ಸಂಘಗಳು ಪಡೆದುಕೊಂಡಿವೆ ಎಂದು ಅವರು ತಿಳಿಸಿದರು.

ಒಕ್ಕೂಟದ ಲೋಕಪಾಲ ಬಿ.ಎಂ.ಪಾಮಡಿ ಮಾತನಾಡಿ, ರಾಜ್ಯದಲ್ಲಿ 28 ಹಾಗೂ ಉಡುಪಿ ಜಿಲ್ಲೆಯಲ್ಲಿ ಎಂಟು ಕಿರು ಹಣಕಾಸು ಸಂಸ್ಥೆಗಳಿವೆ. ಜಿಲ್ಲೆಯಲ್ಲಿ ಸುಮಾರು 1.43ಲಕ್ಷ ಮಂದಿ ಈ ಸಂಸ್ಥೆಗಳಲ್ಲಿ ಖಾತೆಗಳನ್ನು ಹೊಂದಿದ್ದಾರೆ. ಈಗಾಗಲೇ ಇವರು ಒಟ್ಟು 663ಕೋಟಿ ಸಾಲ ಪಡೆದುಕೊಂಡಿದ್ದು, ಕೇವಲ 17ಸಾವಿರ ರೂ. ಮಾತ್ರ ಮರುಪಾವತಿಗೆ ಬಾಕಿ ಇದೆ ಎಂದರು.

ಈ ಸಂದರ್ಭದಲ್ಲಿ ಗ್ರಾಹಕರ ಕುಂದು ಕೊರತೆಗಳ/ದೂರು ನಿವಾರಣಾ ಘಟಕವನ್ನು ಉದ್ಘಾಟಿಸಲಾಯಿತು. ಅಧ್ಯಕ್ಷತೆಯನ್ನು ಒಕ್ಕೂಟದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿ.ಎನ್.ಹೆಗಡೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉಡುಪಿ ಸಿಂಡಿಕೇಟ್ ಲೀಡ್ ಬ್ಯಾಂಕಿನ ಮುಖ್ಯ ಪ್ರಬಂಧಕ ರುದ್ರೇಶ್, ಲೀಡ್ ಬ್ಯಾಂಕಿನ ಗೋಪಾಲ್ ಉಪಸ್ಥಿತರಿದ್ದರು.

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಪುರುಷೋತ್ತಮ ಪಿ.ಕೆ. ಸ್ವಾಗತಿಸಿದರು. ರಮೇಶ್ ವಂದಿಸಿದರು. ಮಮತಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News