ನಾಳೆ ಸಂಜೆ ಆಗಸದಲ್ಲಿ ಅತ್ಯಂತ ಪ್ರಕಾಶಮಾನ ‘ಶುಕ್ರಗ್ರಹ’

Update: 2018-09-20 15:09 GMT

ಉಡುಪಿ, ಸೆ.20: 18 ತಿಂಗಳಿಗೊಮ್ಮೆ ಪಶ್ಚಿಮ ಆಕಾಶದಲ್ಲಿ ಸಂಜೆ ಅತ್ಯಂತ ಪ್ರಕಾಶಮಾನವಾಗಿ ಹೊಳೆಯುವ ಶುಕ್ರಗ್ರಹ, ನಾಳೆ ಸಂಜೆ (ಸೆ.21) ತನ್ನೆಲ್ಲಾ ಪ್ರಭೆಯೊಂದಿಗೆ ಆಗಸದಲ್ಲಿ ಬೆಳಗಲಿದ್ದಾನೆ. ಸೂರ್ಯನ ಸುತ್ತ ತಿರುಗುತ್ತಿರುವ ಶುಕ್ರ, ಪ್ರತಿ 18 ತಿಂಗಳಿಗೊಮ್ಮೆ ಭೂಮಿಗೆ ಅತೀ ಸಮೀಪ ಬರುತ್ತದೆ. ನಾಳೆ ಸಂಜೆ ಈ ಕ್ಷಣ ಬರಲಿದೆ ಎಂದು ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಹಾಗೂ ನಗರದ ಹವ್ಯಾಸಿ ಖಗೋಳ ವೀಕ್ಷಕರ ಸಂಘದ ಸಂಚಾಲಕರಾದ ಡಾ.ಎ.ಪಿ.ಭಟ್ ತಿಳಿಸಿದ್ದಾರೆ.

ಕಳೆದ ಜ.9ರಿಂದ ಹೊಳೆವ ಶುಕ್ರಗ್ರಹ ಸಂಜೆಯ ಆಕಾಶದಲ್ಲಿ ಕಾಣಿಸಿಕೊಳ್ಳುತ್ತಿದೆ. ಇದು ನಾಳೆ ಹೆಚ್ಚಿನ ಪ್ರಕಾಶದೊಂದಿಗೆ ಹೊಳೆಯಲಿದೆ. ಅಕ್ಟೋಬರ್ ಮೊದಲ ವಾರದವರೆಗೆ ಸಂಜೆಯಾಕಾಶದಲ್ಲಿ ಕಂಡು ನಂತರ ಶುಕ್ರ ಗ್ರಹ ಕಣ್ಮರೆಯಾಗುತ್ತದೆ. ಮತ್ತೆ ನವೆಂಬರ್ ಮಧ್ಯ ಭಾಗದಲ್ಲಿ ಬೆಳಗಿನ ಜಾವ ಪೂರ್ವ ಆಕಾಶದಲ್ಲಿ ಶುಕ್ರ ಗೋಚರಿಸಲಿದ್ದಾನೆ ಎಂದವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸೂರ್ಯನಿಂದ ಶುಕ್ರಗ್ರಹ ಸುಮಾರು 11 ಕೋಟಿ ಕಿ.ಮೀ. ದೂರದಲ್ಲಿ ಸುತ್ತುತ್ತಿದೆ. ಅದೇ ರೀತಿ ಭೂಮಿ ಸೂರ್ಯನಿಂದ ಸುಮಾರು 15 ಕೋಟಿ ಕಿ. ಮೀ. ದೂರದಲ್ಲಿ ಸುತ್ತುತ್ತಿದೆ. ಆದರೆ ಈ ಭೂಮಿ ಮತ್ತು ಶುಕ್ರಗ್ರಹಗಳ ದೂರ ಯಾವಾಗಲೂ ಒಂದೇ ಸಮನಾಗಿರುವುದಿಲ್ಲ. 18 ತಿಂಗಳಿಗೊಮ್ಮೆ ಇವುಗಳ ನಡುವಿನ ಅಂತರ ಸುಮಾರು 4.5 ಕೋಟಿ ಕಿ.ಮೀ.ಗೆ ಇಳಿದು ಎರಡೂ ಗೃಹಗಳು ಅತ್ಯಂತ ಸನಿಹಕ್ಕೆ ಬರುತ್ತವೆ. ಆಗ ಶುಕ್ರ ದೊಡ್ಡದಾಗಿ ಕಾಣಿಸುತ್ತದೆ. ಹಾಗೆಯೇ 18 ತಿಂಗಳಿಗೊಮ್ಮೆ ಶುಕ್ರ, ಭೂಮಿಯಿಂದ ಅತೀ ದೂರದಲ್ಲಿ ಅಂದರೆ ಸುಮಾರು 26 ಕೋಟಿ ಕಿ.ಮೀ. ದೂರದಲ್ಲಿದ್ದು, ಆಗ ಅತಿ ಚಿಕ್ಕದಾಗಿ ಭೂಮಿಯ ಮೇಲೆ ಕಾಣಿಸಿಕೊಳ್ಳುತ್ತದೆ.
ಶುಕ್ರಗ್ರಹ ಹೊಳೆಯುವುದು ಅದರ ಸ್ವಂತ ಪ್ರಭೆಯಿಂದ ಅಲ್ಲ. ಸೂರ್ಯ ನಿಂದ ಬಿದ್ದ ಬೆಳಕು ಪ್ರತಿಫಲಿಸಿ ಹೊಳೆದಂತೆ ಕಾಣುವುದು. ಇನ್ನು ಭೂಮಿಗೆ ಸಮೀಪ ಬರುವಾಗ ಹೊಳೆಯುವ ಸಂಪೂರ್ಣ ಭಾಗ ಭೂಮಿಗೆ, ಕಾಣಿಸುವುದಿಲ್ಲವಾದ್ದರಿಂದ ಅಂಶಿಕವಾಗಿ ಶುಕ್ಲಪಕ್ಷದ ಚಂದ್ರನಂತೆ ದೂರದರ್ಶಕದಲ್ಲಿ ಕಾಣಿಸುತ್ತದೆ.

ಸೆ.21ರಂದು ಶುಕ್ರನ ಕೇವಲ ಶೇ.25ರಷ್ಟು ಹೊಳೆಯುವ (illuminated) ಭಾಗ ನಮಗೆ ಕಾಣಿಸಿದರೂ, ಭೂಮಿಗೆ ಅತೀ ಸಮೀಪ ಬರುತ್ತಿರುವುದರಿಂದ ದೊಡ್ಡದಾಗಿ ಕಾಣಿಸಿ, 18 ತಿಂಗಳಿನಲ್ಲೇ ಅತೀಹೆಚ್ಚಿನ ಪ್ರಕಾಶದಿಂದ ಕಂಗೊಳಿಸುತ್ತದೆ. ಈಗ ಶುಕ್ರನೊಂದಿಗೆ ಗುರುಗ್ರಹ, ಶನಿಗ್ರಹ ಹಾಗೂ ಮಂಗಳ ಸಹ ಚೆನ್ನಾಗಿ ಕಾಣುತ್ತಿವೆ. 2 ವರ್ಷಕ್ಕೊಮ್ಮೆ ಕೆಲತಿಂಗಳು ಭೂಮಿಗೆ ಸಮೀಪವಿರುವ ಮಂಗಳ ಈಗ ಭೂಮಿಗೆ ಸಮೀಪಿಸಿ ಹಿಂದಿರುಗುತ್ತಿದೆ. ಹೀಗಾಗಿ ಕೆಂಬಣ್ಣದಿಂದ ಸುಂದರವಾಗಿ ಹೊಳೆಯುತ್ತಿದೆ. 16 ವರ್ಷಗಳಲ್ಲಿ ಕೆಲವರ್ಷ ತನ್ನ ಬಳೆಗಳನ್ನು ಭೂಮಿಗೆ ತೋರಿಸುವ ಶನಿಗೃಹ ಈಗ, ಅತಿ ಸುಂದರವಾಗಿ ಕಾಣಿಸುತ್ತಿದೆ. 2024ರಲ್ಲಿ ಶನಿಯ ಬಳೆಗಳು ನಮಗೆ ಕಾಣಿಸುವುದೇ ಇಲ್ಲ ಎಂದು ಡಾ.ಎ.ಪಿ.ಭಟ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News