ಕಸ್ತೂರಿ ರಂಗನ್ ವರದಿ ಜಾರಿ ಮಾಡಿದರೆ ಉಗ್ರ ಹೋರಾಟ: ಗೋಪಾಲ ಭಂಡಾರಿ

Update: 2018-09-20 15:20 GMT

ಹೆಬ್ರಿ, ಸೆ.20: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಕಸ್ತೂರಿರಂಗನ್ ವರದಿಯ ಅನುಷ್ಠಾನಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಬಿಜೆಪಿ, ಜನರ ಬದುಕಿನಲ್ಲಿ ಚೆಲ್ಲಾಟವಾಡುತ್ತಿದೆ. ಕಳೆದ 4 ವರ್ಷದಿಂದ ಕರ್ನಾಟಕ ಸರಕಾರ ವರದಿ ನೀಡಿಲ್ಲ ಎಂದು ಸುಳ್ಳು ಹೇಳಿಕೊಂಡೇ ಬರುತ್ತಿದ್ದಾರೆ. ಜನತೆಗೆ ತಪ್ಪು ಮಾಹಿತಿ ನೀಡಿ ವರದಿಯನ್ನು ಅನುಷ್ಠಾನ ಮಾಡಿದರೆ ಉಗ್ರ ಹೋರಾಟ ನಡೆಸುವುದಾಗಿ ಕಾರ್ಕಳದ ಮಾಜಿ ಶಾಸಕ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಚ್. ಗೋಪಾಲ ಭಂಡಾರಿ ಎಚ್ಚರಿಸಿದ್ದಾರೆ.

ಹೆಬ್ರಿ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಕರೆದ ಸುದ್ಧಿಗೋಷ್ಠಿಯಲ್ಲಿ ಅವರು ಮಾತನಾಡುತಿದ್ದರು. 2013ರಲ್ಲಿ ಅಂದಿನ ಯುಪಿಎ ಸರಕಾರಕ್ಕೆ ಕಸ್ತೂರಿ ರಂಗನ್ ವರದಿಯನ್ನು ಹಸ್ತಾಂತರಿಸಿದಾಗ, ಅಂದಿನ ಅರಣ್ಯ ಪರಿಸರ ಸಚಿವ ಎಂ. ವೀರಪ್ಪಮೊಯ್ಲಿ ಅದನ್ನು ಅಧ್ಯಯನ ಮಾಡಿ ವರದಿ ವ್ಯಾಪ್ತಿಯ ರಾಜ್ಯಗಳ ಅಭಿಪ್ರಾಯವನ್ನು ಸಂಗ್ರಹಿಸಲು ಆದೇಶ ನೀಡಿದ್ದರು. ಅದರ ಪ್ರಕಾರವೇ ಕೇರಳ ರಾಜ್ಯ ಸರಕಾರ ಜನಾಭಿಪ್ರಾಯ ಸಂಗ್ರಹಿಸಿ ವರದಿ ನೀಡಿತ್ತು. ಅದನ್ನು ಕೇಂದ್ರ ಸರಕಾರ ಒಪ್ಪಿಕೊಂಡಿತ್ತು ಎಂದವರು ವಿವರಿಸಿದರು.

ಆಗ ಸಿದ್ದರಾಮಯ್ಯ ಸರಕಾರ ಕಸ್ತೂರಿರಂಗನ್ ವರದಿಯ ಅಧ್ಯಯನಕ್ಕೆ ಸಂಪುಟ ಉಪಸಮಿತಿ ಮತ್ತು ಸರಕಾರದ ತಜ್ಞರ ಸಮಿತಿ ರಚಿಸಿ, ಗ್ರಾಮಗ್ರಾಮಗಳಿಗೆ ಜಿಲ್ಲಾಧಿಕಾರಿ ಜೊತೆ ಜಿಲ್ಲಾ ಉಸ್ತುವಾರಿ ಸಚಿವರು ಜನಾಭಿಪ್ರಾಯ ಸಂಗ್ರಹಿಸಿ ಜನರ ಅಭಿಪ್ರಾಯವನ್ನೇ ವರದಿಯಾಗಿ ಪರಿವರ್ತಿಸಿ ಸೂಕ್ಷ್ಮ ಪ್ರದೇಶ, ಅತೀ ಸೂಕ್ಷ್ಮ ಪ್ರದೇಶ, 10 ಕಿಮಿ ಗಡಿ ವ್ಯಾಪ್ತಿ ಸಹಿತ ಎಲ್ಲಾ ನಿರ್ಬಂಧವನ್ನು ತೆಗದು ಕಸ್ತೂರಿರಂಗನ್ ವರದಿಯನ್ನು ಈಗಿರುವ ಮೀಸಲು ಅರಣ್ಯ ಪ್ರದೇಶಕ್ಕೆ ಸೀಮಿತಗೊಳಿಸುವಂತೆ ಮನವಿ ಸಲ್ಲಿಸಲಾಗಿತ್ತು ಎಂದು ಭಂಡಾರಿ ತಿಳಿಸಿದರು.

ಎ.24ರಂದು ಸಂಪುಟದ ಅನುಮೋದನೆ ಪಡೆದು, 25ರಂದು ಸಮಗ್ರ ವರದಿಯನ್ನು ಅರಣ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮದನ್ ಗೋಪಾಲ್ 2015ರ ಸೆ.1ರಂದು ಹಾಗೂ ಅರಣ್ಯ ಸಚಿವ ರಮಾನಾಥ ರೈ ಪತ್ಯೇಕವಾಗಿ ಮೂರು ಬಾರಿ ವರದಿ ನೀಡಿದ್ದಾರೆ. ಆದರೂ ಕೇಂದ್ರ ಸರಕಾರ ವರದಿಯನ್ನೇ ನೀಡಿಲ್ಲ ಎಂದು ಸುಳ್ಳು ಹೇಳಿ ಜನರ ಬದುಕಿನಲ್ಲಿ ಚೆಲ್ಲಾಟ ವಾಡುತ್ತಿದೆ ಎಂದು ಗೋಪಾಲ ಭಂಡಾರಿ ಆರೋಪಿಸಿದರು.

ಸಂಸದೆ ಮಾತಾಡುತ್ತಿಲ್ಲ: ನಮಗೆ ಓಟು ಕೊಡಿ ಕಸ್ತೂರಿರಂಗನ್ ವರದಿಯನ್ನು ಅನುಷ್ಠಾನ ಮಾಡಲು ಬಿಡುವುದಿಲ್ಲ ಎಂದು ಚುನಾವಣೆಗೆ ಮುನ್ನ ಸಂಸದೆ ಶೋಭ ಕರಂದ್ಲಾಜೆ ಹೇಳಿದ್ದಾರೆ. ಈಗ ಯಡಿಯೂರಪ್ಪ, ಶೋಭಾ ಕರಂದ್ಲಾಜೆ, ನಳಿನ್ ಕುಮಾರ್ ಕಟೀಲ್ ಆ ವಿಚಾರವನ್ನೇ ಮಾತನಾಡುತ್ತಿಲ್ಲ. ಸಂಸತ್ತಿನಲ್ಲಿ ಕಸ್ತೂರಿರಂಗನ್ ವರದಿಯ ಬಗ್ಗೆ ಚಕಾರ ಎತ್ತುತ್ತಿಲ್ಲ. ಕೇಂದ್ರದ ಅರಣ್ಯ ಸಚಿವ ಪ್ರಕಾಶ್ ಜಾವಡೇಕರ್ 40 ಕಡೆಗಳಲ್ಲಿ ಹುಲಿ ಯೋಜನೆಯನ್ನು ಜಾರಿ ಮಾಡಿಬಿಟ್ಟರು. ಆದರೆ ಒಬ್ಬರೂ ತುಟಿ ಬಿಚ್ಚಿಲ್ಲ ಎಂದು ಗೋಪಾಲ ಭಂಡಾರಿ ಟೀಕಿಸಿದರು.

ಸುದ್ಧಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನೀರೆ ಕೃಷ್ಣ ಶೆಟ್ಟಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಜಾತ ಲಕ್ಷ್ಮಣ್, ಜಿಪಂ ಮಾಜಿ ಸದಸ್ಯ ಮಂಜುನಾಥ ಪೂಜಾರಿ, ಮುದ್ರಾಡಿ ಗ್ರಾಪಂ ಅಧ್ಯಕ್ಷೆ ಶಶಿಕಲಾ ಡಿ.ಪೂಜಾರಿ, ಭೋಜ ಪೂಜಾರಿ, ಸುಂದರ ಶೆಟ್ಟಿಗಾರ್, ನರೇಂದ್ರ ನಾಯಕ್ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News