ಜಗತ್ತಿನ 59 ಶೇ. ಉಗ್ರ ದಾಳಿಗಳು ನಡೆದದ್ದು ಏಶ್ಯದ 5 ದೇಶಗಳಲ್ಲಿ

Update: 2018-09-20 16:41 GMT

ವಾಶಿಂಗ್ಟನ್, ಸೆ. 20: 2017ರಲ್ಲಿ ಪ್ರಪಂಚದಾದ್ಯಂತ ನಡೆದ ಎಲ್ಲ ಭಯೋತ್ಪಾದಕ ದಾಳಿಗಳ ಸುಮಾರು 59 ಶೇಕಡ, ಭಾರತ ಮತ್ತು ಪಾಕಿಸ್ತಾನ ಸೇರಿದಂತೆ ಏಶ್ಯದ ಐದು ದೇಶಗಳಲ್ಲಿ ಸಂಭವಿಸಿದೆ ಎಂದು ಅಮೆರಿಕದ ವರದಿಯೊಂದು ಗುರುವಾರ ತಿಳಿಸಿದೆ.

ನಿರಂತರ ಬಾಂಬ್ ದಾಳಿಗಳು ಸಂಭವಿಸುವ ಇತರ ಮೂರು ದೇಶಗಳೆಂದರೆ- ಅಫ್ಘಾನಿಸ್ತಾನ ಇರಾಕ್ ಮತ್ತು ಫಿಲಿಪ್ಪೀನ್ಸ್.

ಕಳೆದ ವರ್ಷ ಜಗತ್ತಿನಾದ್ಯಂತ ನಡೆದ ಭಯೋತ್ಪಾದಕ ದಾಳಿಗಳ ಸಂಖ್ಯೆಯಲ್ಲಿ 23 ಶೇಕಡ ಕಡಿತವಾಗಿದೆ. ಅದೇ ವೇಳೆ, ಭಯೋತ್ಪಾದಕ ದಾಳಿಗಳಿಂದ ನಡೆದ ಒಟ್ಟು ಸಾವಿನ ಪ್ರಮಾಣದಲ್ಲೂ 27 ಶೇಕಡ ಕಡಿತವಾಗಿದೆ ಎಂದು ವರದಿ ತಿಳಿಸಿದೆ.

 ಭಯೋತ್ಪಾದಕ ಹಿಂಸಾಚಾರದಲ್ಲಿ ಆಗಿರುವ ಕಡಿತಕ್ಕೆ ಪ್ರಧಾನ ಕಾರಣ ಇರಾಕ್‌ನಲ್ಲಿ ಬಾಂಬ್ ದಾಳಿಗಳು ಕಡಿಮೆಯಾಗಿರುವುದು ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ಭಯೋತ್ಪಾದನೆ ನಿಗ್ರಹ ಸಮನ್ವಯಕಾರ ನಥನ್ ಸೇಲ್ಸ್ ಗುರುವಾರ ಪತ್ರಕರ್ತರೊಂದಿಗೆ ನಡೆಸಿದ ಕಾನ್ಫರೆನ್ಸ್ ಕರೆಯ ಮೂಲಕ ಹೇಳಿದರು.

ಅದೇ ವೇಳೆ, ಭಯೋತ್ಪಾದಕ ದಾಳಿಗಳಲ್ಲಿ ಸಂಭವಿಸಿದ ಸಾವುಗಳ 70 ಶೇಕಡ 5 ದೇಶಗಳಲ್ಲಿ ಸಂಭವಿಸಿದೆ. ಅವುಗಳೆಂದರೆ- ಅಫ್ಘಾನಿಸ್ತಾನ, ಇರಾಕ್, ನೈಜೀರಿಯ, ಸೊಮಾಲಿಯ ಮತ್ತು ಸಿರಿಯ.

ಉಗ್ರ ಗುಂಪುಗಳ ವಿರುದ್ಧ ಪಾಕ್ ಕ್ರಮವಿಲ್ಲ

ಪಾಕಿಸ್ತಾನದಲ್ಲಿ ನೆಲೆಯೂರಿ ವಿದೇಶಗಳಲ್ಲಿ ಭಯೋತ್ಪಾದಕ ದಾಳಿಗಳನ್ನು ನಡೆಸುವ ಭಯೋತ್ಪಾದಕ ಗುಂಪುಗಳ ವಿರುದ್ಧ ಪಾಕಿಸ್ತಾನ ಈಗಲೂ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ವರದಿ ಹೇಳಿದೆ.

ಹಕ್ಕಾನಿ ನೆಟ್‌ವರ್ಕ್, ಅಫ್ಘಾನ್ ತಾಲಿಬಾನ್ ಲಷ್ಕರೆ ತಯ್ಯಬ ಮತ್ತು ಜೈಶೆ ಮುಹಮ್ಮದ್ ಮುಂತಾದ ಭಯೋತ್ಪಾದಕ ಸಂಘಟನೆಗಳು ಈಗಲೂ ಪಾಕಿಸ್ತಾನದಲ್ಲಿ ಭದ್ರ ನೆಲೆಗಳನ್ನು ಹೊಂದಿವೆ ಎಂದು ವರದಿ ಆರೋಪಿಸಿದೆ.

ಲಷ್ಕರೆ ತಯ್ಯಬ ಮತ್ತು ಅದರೊಂದಿಗೆ ನಂಟು ಹೊಂದಿರುವ ಭಯೋತ್ಪಾದಕ ಗುಂಪುಗಳ ಹಣಕಾಸು ಮೂಲವನ್ನು ಪರಿಶೀಲಿಸಲು ಹಾಗೂ ದೇಶದ ಹಣಕಾಸು ಸೇವೆಗಳನ್ನು ಪಡೆಯುವುದನ್ನು ನಿಲ್ಲಿಸಲು ಪಾಕಿಸ್ತಾನಕ್ಕೆ ಇನ್ನೂ ಸಾಧ್ಯವಾಗಿಲ್ಲ ಎಂದು ಟ್ರಂಪ್ ಆಡಳಿತದ ಎರಡನೇ ‘ಉಗ್ರ’ ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News