ತಲಪಾಡಿ ಟೋಲ್ ಗೇಟ್ ಬಳಿ ಬೃಹತ್ ಪ್ರತಿಭಟನೆ

Update: 2018-09-20 17:28 GMT

ಉಳ್ಳಾಲ,ಸೆ.20: ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಯಲ್ಲಿ ಮೇಲ್ಛಾವಣಿಯಿಲ್ಲ, ಫ್ಲೈಓವರ್ ಇನ್ನೂ ಆಗಿಲ್ಲ. ಆರು ವರ್ಷಗಳಿಂದ  ನಾಲ್ಕು ಕುಂದಗಳನ್ನು ಮಾತ್ರ ಹಾಕಿ 1,2 ಕಿಮೀ ಮೇಲ್ಛಾವಣಿ ಮಾತ್ರ ಹಾಕಲಾಗಿದೆ. ರಾಷ್ಟ್ರೀಯ ಹೆದ್ದಾರಿಯ ರಸ್ತೆಗಳು ಅವ್ಯವಸ್ಥೆಯ ಗೂಡಾಗಿದೆ. ಆದರೂ ಟೋಲ್ ಸಂಗ್ರಹಿಸಲಾಗುತ್ತಿದೆ.  ಕಾನೂನುಬದ್ದವಾಗಿ ರಸ್ತೆ ವ್ಯವಸ್ಥೆಯನ್ನು ಸರಿಪಡಿಸಿದ ನಂತರವೇ  ಟೋಲ್ ಸಂಗ್ರಹಿಸಬೇಕಿದೆ. ತಲಪಾಡಿಯಿಂದ ಕುಂದಾಪುರದವೆರೆಗೆ ರಸ್ತೆ ವ್ಯವಸ್ಥೆಯೇ ಸರಿಯಿಲ್ಲ.  ರಸ್ತೆ ಅವ್ಯವಸ್ಥೆಯಿಂದ ಸಾವು ಅಥವಾ ಹಾನಿ ಸಂಭವಿಸಿದಲ್ಲಿ ರಸ್ತೆ ಗುತ್ತಿಗೆ ವಹಿಸಿಕೊಂಡ ಕಂಪೆನಿಯೇ ಜವಾಬ್ದಾರಿ ಎಂದು  ವಿಧಾನಪರಿಷತ್ ಮುಖ್ಯಸಚೇತಕ ಐವನ್ ಡಿಸೋಜ ಹೇಳಿದರು.

ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ವತಿಯಿಂದ ಅಸಮರ್ಪಕ, ಅವೈಜ್ಞಾನಿಕ ಕಾಮಗಾರಿ, ಸರ್ವಿಸ್ ರಸ್ತೆ ನಿರ್ಮಾಣ ಅಪಘಾತ ವಲಯಗಳಲ್ಲಿ ಸುರಕ್ಷತೆ ಹಾಗೂ ಸ್ಥಳೀಯ ನೋಂದಾಯಿತ ವಾಹನಗಳಿಗೆ ಸಂಪೂರ್ಣ ಸುಂಕ ವಿನಾಯತಿಗೆ ಆಗ್ರಹಿಸಿ ತಲಪಾಡಿ ಟೋಲ್ ಗೇಟ್ ಬಳಿ ಗುರುವಾರ ಆಯೋಜಿಸಲಾಗಿದ್ದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. 

ಅವ್ಯವಸ್ಥೆಯ ಗೂಡಾಗಿರುವ ಕುಂದಾಪುರ-ತಲಪಾಡಿ  ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾನೂನು ವಿರುದ್ಧವಾಗಿ ಟೋಲ್ ಸಂಗ್ರಹಿಸುತ್ತಿರುವುದು ಜನಸಾಮಾನ್ಯರಿಗೆ ಗುತ್ತಿಗೆ ಕಂಪೆನಿ ನಡೆಸುತ್ತಿರುವ ಅನ್ಯಾಯವಾಗಿದೆ. ಸರಿಯಾದ ಕ್ರಮವನ್ನು ಅನುಸರಿಸದೇ ಇದ್ದಲ್ಲಿ  ಕಂಪೆನಿ ವಿರುದ್ಧವೇ ಪ್ರಕರಣ ದಾಖಲಿಸಲಾಗುವುದು ಅನ್ನುವ ಉಡುಪಿ ಜಿಲ್ಲಾಧಿಕಾರಿಗಳ ಹೇಳಿಕೆ ಅಭಿನಂದನೀಯ. ಇದು ಜಿಲ್ಲೆಯಲ್ಲಿಯೂ ಜಾರಿಯಾಗಬೇಕಿದೆ. ಜನರಿಂದಲೇ ಅಸ್ತಿತ್ವಕ್ಕೆ ಬಂದಿರುವ ಸರಕಾರದ ಮಾತು ಕೇಳದ ಜನರ ವಿರುದ್ಧವೇ  ಕಂಪೆನಿ ಕಾರ್ಯಾಚರಿಸುತ್ತಿರುವುದರಲ್ಲಿ ಅರ್ಥವಿಲ್ಲ ಅಂದ ಅವರು ಶೀಘ್ರವೇ  ಗುತ್ತಿಗೆ ವಹಿಸಿಕೊಂಡಿರುವ ಕಂಪೆನಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಹಾಗೂ ಜನರ ಬೇಡಿಕೆಗಳಿಗೆ ಸ್ಪಂಧಿಸಿ ಮತ್ತೆ ಪ್ರತಿಭಟನೆಗೆ ಅವಕಾಶ ಮಾಡದಂತೆ ನೋಡಬೇಕಿದೆ ಎಂದು ಆಗ್ರಹಿಸಿದರು. 

ಕಂಪೆನಿಯ ಕುಮ್ಮಕ್ಕಿನಿಂದ ಕನ್ನಡಿಗರ ಮೇಲೆ ದೌರ್ಜನ್ಯಗಳು ಮುಂದುವರಿದಲ್ಲಿ ಅದಕ್ಕೆ ತಕ್ಕುದಾದ ರೀತಿಯಲ್ಲಿ ಪ್ರತಿಭಟಿಸಿ ಅವರಿಗೆ ಬುದ್ಧಿ ಕಲಿಸುತ್ತೇವೆ. ಇದೀಗ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಲಾಗಿದೆ.  ಸೆ.30 ರ ನಂತರ ಸ್ಥಳೀಯರಿಗೆ ಸುಂಕ ವಸೂಲಾತಿ ಕಡ್ಡಾಯ ಮಾಡಿದಲ್ಲಿ ಉಗ್ರವಾಗಿ ಹೋರಾಡಿ ರಾ.ಹೆ.ಯನ್ನು ಬಂದ್ ನಡೆಸಿ ನಾಲ್ಕು ಟೋಲ್ ಗೇಟ್ ಸಮಿತಿಯವರು ಒಟ್ಟಾಗಿ, ಎಲ್ಲಾ ರಾಜಕೀಯ ಪಕ್ಷಗಳನ್ನು ಜತೆಗೂಡಿಸಿ, ಸ್ಥಳೀಯರನ್ನು ಒಗ್ಗೂಡಿಸಿ  ತಲಪಾಡಿಯಿಂದ ಸಾಸ್ತಾನದವರೆಗೆ ರಸ್ತೆ ಬಂದ್ ನಡೆಸಿ ಪ್ರತಿಭಟನೆ ಮಾಡುತ್ತೇವೆ. ರಾ.ಹೆ ಕಾಮಗಾರಿಯನ್ನು ತ್ವರಿತಗೊಳಿಸದೇ ಇದ್ದಲ್ಲಿ ಟೋಲ್ ಗೇಟನ್ನು ಸಂಪೂರ್ಣವಾಗಿ ನಿಲ್ಲಿಸುತ್ತೇವೆ ಎಂದು ಗಡಿನಾಡು ರಕ್ಷಣಾ ವೇದಿಕೆ ಅಧ್ಯಕ್ಷ ಸಿದ್ದೀಖ್ ತಲಪಾಡಿ ಹೇಳಿದ್ದಾರೆ.
 
ತಲಪಾಡಿ ನಾಗರಿಕ ಹೋರಾಟ ಸಮಿತಿ ಅಧ್ಯಕ್ಷ ವಿನಯ ನಾಯ್ಕ್ ಮಾತನಾಡಿ 90 ಕಿ.ಮೀ ಅಂತರದಲ್ಲಿ ಐದು ಟೋಲ್ ದಾಟಬೇಕಿದೆ. ಇದೊಂದು ಬಹಳಷ್ಟು ತೊಂದರೆಗೊಳಗಾಗುವ ಸ್ಥಿತಿ. ಕಾನೂನನ್ನು ಗಾಳಿಗೆ ತೂರಿ, ಜನರ ಸಮಸ್ಯೆಗೆ ಸ್ಪಂಧಿಸದ ಅಧಿಕಾರಿಗಳು ಎಲ್ಲರ ಕೋಪಕ್ಕೆ ಬಲಿಯಾಗಬೇಕಿದೆ. ಮಂಗಳವಾರದ ತೊಕ್ಕೊಟ್ಟು ಅಪಘಾತದಲ್ಲಿ ಯುವಕನೋರ್ವನ ಜೀವ ಬಲಿಯಾಗಿದೆ. ಈ ಅನ್ಯಾಯದ ವಿರುದ್ಧ ಇಡೀ ರಾಜ್ಯದ ಜನ ಒಗ್ಗಟ್ಟಾಗಿ ಹೋರಾಡಬೇಕಾದ ಅನಿವಾರ್ಯತೆ ಎದುರಾಗಬಹುದು ಎಂದರು. 

ಮಂಜೇಶ್ವರ ಜಿಲ್ಲಾ ಪಂಚಾಯತ್ ಸದಸ್ಯ ಹರ್ಷದ್ ವರ್ಕಾಡಿ,  ತಾ.ಪಂ ಸದಸ್ಯ ಸಿದ್ದೀಖ್ ಕೊಳಂಗೆರೆ, ಗಣೇಶ್ ಶೆಟ್ಟಿ ತಲಪಾಡಿ, ಟಿ.ಎಸ್.ಇಸ್ಮಾಯಿಲ್, ಇಸ್ಮಾಯಿಲ್, ಅರುಣ್ ಭಂಡಾರಿ, ಬಿ.ಯಸ್. ಇಸ್ಮಾಯಿಲ್, ಸಲಾಂ ಉಚ್ಚಿಲ,  ಇಬ್ರಾಹಿಂ ಕೆ.ಸಿ.ರೋಡ್,  ತಲಪಾಡಿ ಗ್ರಾ.ಪಂ ಸದಸ್ಯ  ವಿನಯ ಕುಮಾರ್ ಶೆಟ್ಟಿ, ಹುಸೈನ್ ತಲಪಾಡಿ, ಶಾಫಿ ಕಿನ್ಯಾ ಉಪಸ್ಥಿತರಿದ್ದರು. 

ತಲಪಾಡಿ ಟೋಲ್ ಎದುರುಗಡೆ ನಡೆದ ಪ್ರತಿಭಟನೆಗೆ  ಉಳ್ಳಾಲ ಪೊಲೀಸರು ಹಾಗೂ ಕೆಎಸ್ ಆರ್ ಪಿ ಪೊಲೀಸ್ ಪಡೆ ಬಿಗಿಬಂದೋಬಸ್ತ್ ಆಯೋಜಿಸಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News