ಅನ್ನಭಾಗ್ಯ ಅಕ್ಕಿಯ ಅಕ್ರಮ ದಾಸ್ತಾನು ಪ್ರಕರಣ : ಆರೋಪಿ ನಿರೀಕ್ಷಣಾ ಜಾಮೀನು ಅರ್ಜಿ ವಜಾ

Update: 2018-09-20 18:09 GMT

ಕುಂದಾಪುರ, ಸೆ.20: ಕೋಟ ಮಣೂರಿನ ವಿಜಯ ರೈಸ್‌ಮಿಲ್‌ನಲ್ಲಿ ಅನ್ನಭಾಗ್ಯ ಯೋಜನೆ ಅಕ್ಕಿಯ ಅಕ್ರಮ ದಾಸ್ತಾನು ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಉಮಾನಾಥ ಪೈ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕುಂದಾಪುರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಇಂದು ತಿರಸ್ಕರಿಸಿ ಆದೇಶ ನೀಡಿದೆ.

ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಸೂಚನೆಯಂತೆ ಕುಂದಾಪುರ ಸಹಾಯಕ ಆಯುಕ್ತ ಟಿ.ಭೂಬಾಲನ್, ಆಹಾರ ವಿಭಾಗದ ಉಪ ನಿರ್ದೇಶಕ ಎಂ.ಆರ್.ಭಟ್, ಉಡುಪಿ ತಾಲೂಕು ಆಹಾರ ನಿರೀಕ್ಷಕಿ ಪಾರ್ವತಿ ಸೆ.10ರಂದು ಮಣೂರಿನ ವಿಜಯ ರೈಸ್‌ಮಿಲ್‌ಗೆ ಜಂಟಿ ದಾಳಿ ನಡೆಸಿ ಅಕ್ರಮ ವಾಗಿ ದಾಸ್ತಾನು ಇರಿಸಿದ್ದ 54.49 ಕ್ವಿಂಟಾಲ್ ಅನ್ನಭಾಗ್ಯ ಯೋಜನೆಯ ಅಕ್ಕಿ, 44 ಪ್ಯಾಕೆಟ್ ಕ್ಷೀರ ಭಾಗ್ಯದ ಹಾಲಿನ ಪುಡಿಯನ್ನು ವಶಪಡಿಸಿಕೊಂಡಿದ್ದರು. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯದ ನ್ಯಾಯಾಧೀಶ ಪ್ರಕಾಶ್ ಖಂಡೇರಿ ಜಾಮೀನು ತಿರಸ್ಕರಿಸಿದ್ದಾರೆ. ಪ್ರಾಸಿಕ್ಯೂಶನ್ ಪರ ಜಿಲ್ಲಾ ಸರಕಾರಿ ಅಭಿಯೋಜಕ ಪ್ರಕಾಶ್‌ಚಂದ್ರ ಶೆಟ್ಟಿ ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News