ಕನ್ನಡ ಭಾಷೆಯ ಉಳಿವಿಗಾಗಿ ಜಿ.ಎಲ್. ಆಚಾರ್ಯರ ಕೊಡುಗೆ ಅನನ್ಯ : ಎನ್. ಸುಬ್ರಹ್ಮಣ್ಯಂ ಕೊಳತ್ತಾಯ

Update: 2018-09-20 18:26 GMT

ಪುತ್ತೂರು,ಸೆ.20: ಪುತ್ತೂರಿನ ಅಮೂಲ್ಯರತ್ನವಾಗಿದ್ದ ಜಿ.ಎಲ್. ಆಚಾರ್ಯರವರು ಪುತ್ತೂರಿನ ಕನ್ನಡ ಸಾಹಿತ್ಯಿಕ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದ್ದರು. ಕೃಷಿಕರಾಗಿ, ಸ್ವರ್ಣೋಧ್ಯಮಿಯಾಗಿ ಕನ್ನಡ ಭಾಷೆಯ ಉಳಿವಿಗಾಗಿ ಅವರ ಕೊಡುಗೆ ಅನನ್ಯ ಎಂದು ಹಿರಿಯ ನ್ಯಾಯವಾದಿ ಎನ್. ಸುಬ್ರಹ್ಮಣ್ಯ ಕೊಳತ್ತಾಯ ಹೇಳಿದರು. 

ಅವರು ಗುರುವಾರ ಪುತ್ತೂರು ತಾಲೂಕು 18ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ದಿ. ಜಿ.ಎಲ್. ಆಚಾರ್ಯ ಸಂಸ್ಮರಣೆಯಲ್ಲಿ ಮಾತನಾಡಿದರು. ಸಮಾಜ ನಮಗೆ ನೀಡಿದ ಹಣವನ್ನು ಮರಳಿ ಸಮಾಜಕ್ಕೆ ನೀಡುತ್ತೇನೆ ಎಂದು ಹೇಳುತ್ತಿದ್ದ ಜಿ.ಎಲ್. ಆಚಾರ್ಯ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುವುದಲ್ಲದೆ ಸಾಹಿತ್ಯಿಕ ಚಟುವಟಿಕೆಗಳಿಗೆ ಆರ್ಥಿಕ ಸಹಕಾರವನ್ನು ನೀಡುವ ಮೂಲಕ ಕನ್ನಡಾಭಿಮಾನವನ್ನು ಸಂಪೂರ್ಣವಾಗಿ ಪಸರಿಸಿದವರು ಎಂದು ಹೇಳಿದರು.

ಜಿ.ಎಲ್. ಆಚಾರ್ಯ ಅವರು ಆಮಂತ್ರಣ ನೀಡಿದ ಯಾವುದೇ ಕಾರ್ಯಕ್ರಮಕ್ಕೂ ಹೋಗದೆ ಇದ್ದವರಲ್ಲ. ಎಲ್ಲಾ ಕಾರ್ಯಕ್ರಮಗಳಿಗೂ ತಪ್ಪದೇ ಹೋಗುತ್ತಿದ್ದರು. ಇದೇ ಅವರನ್ನು ಪುತ್ತೂರಿನಲ್ಲಿ ಇನ್ನಷ್ಟು ಎತ್ತರಕ್ಕೆ ಬೆಳೆಸಲು ಸಹಕಾರಿಯಾಯಿತು. ಸ್ನೇಹಜೀವಿಯಾಗಿದ್ದ ಅವರು ಪುತ್ತೂರಿನಲ್ಲಿ ಸಾಹಿತ್ಯ ಕೃಷಿ ಪೂರ್ಣಪ್ರಮಾಣದಲ್ಲಿ ಬೆಳೆಯಲು ಸಾಕಷ್ಟು ಹೆಚ್ಚು ಶ್ರಮಪಟ್ಟಿದ್ದಾರೆ ಎಂದು ಅವರ ಸಂಸ್ಮರಣೆ ಮಾಡಿದರು.

ವೇದಿಕೆಯಲ್ಲಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಎ. ಜಾನು ನಾಯ್ಕ್, ಸಮ್ಮೇಳನಾಧ್ಯಕ್ಷ ಪೀಟರ್ ವಿಲ್ಸನ್ ಪ್ರಭಾಕರ್, ಸ್ವಾಗತ ಸಮಿತಿ ಅಧ್ಯಕ್ಷ ಎ.ವಿ. ನಾರಾಯಣ, ಉಪಾಧ್ಯಕ್ಷ ಸ್ವರ್ಣೋಧ್ಯಮಿ ಹಾಗೂ ಜಿ.ಎಲ್. ಆಚಾರ್ಯ ಅವರ ಮಗ ಬಲರಾಮ ಆಚಾರ್ಯ ಉಪಸ್ಥಿತರಿದ್ದರು. ಪುತ್ತೂರು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲ ಝೇವಿಯರ್ ಡಿಸೋಜಾ ಸ್ವಾಗತಿಸಿ, ಸಂತ ಫಿಲೋಮಿನಾ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ವಿಜಯ ಕುಮಾರ್ ಮೊಳೆಯಾರ ಕಾರ್ಯಕ್ರಮ ನಿರೂಪಿಸಿದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News