ಪುತ್ತೂರು: ಸರ್ಕಾರಿ ನೌಕರರ ಸಮುದಾಯ ಭವನ ಪ್ರಥಮ ಹಂತದ ಕಾಮಗಾರಿ ಉದ್ಘಾಟನೆ

Update: 2018-09-21 11:51 GMT

ಪುತ್ತೂರು,ಸೆ.21: ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣದಲ್ಲಿ ಸರ್ಕಾರಿ ನೌಕರರ ಪಾತ್ರ ಮಹತ್ತರವಾಗಿದ್ದು, ಭ್ರಷ್ಟಾಚಾರ ಮುಕ್ತ ಭಾರತ ನಿರ್ಮಾಣ ಕಾರ್ಯಕ್ಕೆ ಕೈಜೋಡಿಸುವ ಮೂಲಕ ಸಮಾಜದ ಕಟ್ಟ ಕಡೆಯ ಜನರ ಅಭಿವೃದ್ಧಿಗಾಗಿ ಸರ್ಕಾರಿ ನೌಕರರು ಕಾರ್ಯೋನ್ಮುಖರಾಗಬೇಕು ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು. 

ಅವರು ಶುಕ್ರವಾರ ಪುತ್ತೂರಿನಲ್ಲಿ ನೂತನವಾಗಿ ನಿರ್ಮಾಣಗೊಂಡ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಮುದಾಯ ಭವನದ ಪ್ರಥಮ ಹಂತದ ಕಾಮಗಾರಿಯನ್ನು ಉದ್ಘಾಟಿಸಿ ಬಳಿಕ ಇಲ್ಲಿನ ಬ್ರಹ್ಮಶ್ರೀ ನಾರಾಯಣಗುರು ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. 

ಜನಸೇವೆ ಎಂಬುದು ಕೇವಲ ಸರ್ಕಾರಿ ನೌಕರರ ಜವಾಬ್ದಾರಿ ಮಾತ್ರವಲ್ಲ. ಸಾರ್ವಜನಿಕರೂ ಇದಕ್ಕೆ ಸಹಭಾಗಿತ್ವ ನೀಡಬೇಕು ಎಂದ ಅವರು ನೌಕರರ ಸಂಘವು ಬಲಯುತ ಸಂಘಟನೆಯಾಗಿ ರೂಪುಗೊಳ್ಳುವುದರೊಂದಿಗೆ ಸಮಾಜಕ್ಕೆ ನೆಮ್ಮದಿ ನೀಡುವ ಕೆಲಸ ಮಾಡಬೇಕು. ನೌಕರರು ಜನಪ್ರತಿನಿಧಿಗಳು, ರಾಜಕಾರಣಿಗಳ ಹಿಂದೆ ಬೀಳದೆ ರಾಜಕೀಯ ರಹಿತವಾಗಿ ಸ್ವಾಭಿಮಾನದಿಂದ ಕೆಲಸ ಮಾಡಬೇಕು. ಇಂತಹ ಕೆಲಸ ಪುತ್ತೂರಿನಿಂದಲೇ ಆರಂಭಗೊಳ್ಳಲಿ ಎಂದರು. 

ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ್ ಪೂಜಾರಿ ಮಾತನಾಡಿ, ಸರ್ಕಾರಿ ನೌಕರಿ ಸಿಕ್ಕಿತು ಎಂದಾದರೆ ಸಾಕು ನೆಮ್ಮದಿ ಎಂದುಕೊಳ್ಳುವ ಕಾಲ ಇತ್ತು. ಆದರೆ ಈಗ ಸರ್ಕಾರಿ ನೌಕರಿ ಭದ್ರತೆಯಾಗಿ ಉಳಿದಿಲ್ಲ. ಸರ್ಕಾರಿ ನೌಕರಿಯಲ್ಲೂ ಈ ಸಮಸ್ಯೆಗಳ ಸರಮಾಲೆಯೇ ಇದೆ. ಗುತ್ತಿಗೆ ಆಧಾರದಲ್ಲಿ ದುಡಿಯುವ ಸಾವಿರಾರು ಸರಕಾರಿ ನೌಕರರು ಇಂದು ಸರಿಯಾದ ಸಂಬಳವಿಲ್ಲ. ನೂರಾರು ಗ್ರಾಮಸಹಾಯಕರು ಕನಿಷ್ಟ ಕೂಲಿಗಿಂತಲೂ ಕಡಿಮೆ ಸಂಬಳಕ್ಕೆ ದುಡಿಯುತ್ತಿದ್ದಾರೆ.

ಎನ್‍ಪಿಎಸ್  ಪಿಂಚಣಿ ಯೋಜನೆಯಿಂದ ಸರ್ಕಾರಿ ನೌಕರ ತನ್ನ ಕುಟುಂಬಕ್ಕೆ ನಿಗದಿತ ಪೆನ್‍ಷನ್ ಬರುತ್ತದೆ ಎಂದು ಹೇಳುವ ಧೈರ್ಯದಲ್ಲಿಲ್ಲ. ಹಳೆಯ ಪಿಂಚಣಿ ವ್ಯವಸ್ಥೆಯನ್ನು ಜಾರಿಗೊಳಿಸಬೇಕು ಎಂಬ ನಮ್ಮ ವಾದಕ್ಕೆ ಸರಕಾರಗಳು ಮಾನ್ಯತೆ ನೀಡುತ್ತಿಲ್ಲ. ನೌಕರರು ಸಮಾಜ ಸೊತ್ತು ಎಂಬುವುದು ನಿಜವಾದರೂ ಅವರಿಗೊಂದು ಬದುಕು ಕಟ್ಟಿಕೊಳ್ಳುವ ವ್ಯವಸ್ಥೆಯ ಅಗತ್ಯವೂ ಇದೆ. ಇದಕ್ಕೆ ಶಕ್ತಿಯುತವಾದ ಸಂಘಟನೆ ಬೇಕು ಎಂದು ಹೇಳಿದರು. 

ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ನೂತನ ಶಾಸಕರಾದ ಸಂಜೀವ ಮಠಂದೂರು ಹಾಗೂ ವಿಧನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. 

ತಾ.ಪಂ. ಅಧ್ಯಕ್ಷೆ ಭವಾನಿ ಚಿದಾನಂದ್, ಸಹಾಯಕ ಕಮೀಷನರ್ ಕೃಷ್ಣಮೂರ್ತಿ ಹೆಚ್.ಕೆ, ಪುತ್ತೂರು ಧರ್ಮಪ್ರಾಂತ್ಯ ಧರ್ಮಾಧ್ಯಕ್ಷ ವಂ. ಗೀವರ್ಗೀಸ್ ಮಾರ್ ಮಕಾರಿಯೋಸ್, ಮಾಯ್ದೇ ದೇವುಸ್ ಚರ್ಚ್‍ನ ಧರ್ಮಗುರು ರೆ. ಆಲ್ಫ್ರೆಡ್ ಜೆ ಪಿಂಟೋ, ರಾಜ್ಯ ನೌಕರರ ಸಂಘದ ಜಿಲ್ಲಾಧ್ಯಕ್ಷ ಪ್ರಕಾಶ್ ನಾಯಕ್, ನಗರಸಭಾ ಸದಸ್ಯ ಭಾಮಿ ಅಶೋಕ್ ಶೆಣೈ, ಮಾಜಿ ನಗರಸಭಾ ಸದಸ್ಯ ರಾಜೇಶ್ ಬನ್ನೂರು, ಕ್ಯಾಂಪ್ಕೋ ನಿರ್ದೇಶಕ ತಿಮ್ಮಪ್ಪ ಶೆಟ್ಟಿ, ನೌಕರರ ಸಂಘದ ರಾಜ್ಯ ಕಾರ್ಯದರ್ಶಿ ಮಾಲತೇಶ್ ಅಣ್ಣಿಗೇರಿ, ನೌಕರರ ಸಂಘದ ಗೌರವ ಅಧ್ಯಕ್ಷ ಕೆ. ಅಬೂಬಕ್ಕರ್, ಕಾರ್ಯದರ್ಶಿ ರಾಮಚಂದ್ರ, ಕೋಶಾಧಿಕಾರಿ ನಾಗೇಶ್, ಉಪಾಧ್ಯಕ್ಷರಾದ ಕೃಷ್ಣಪ್ರಸಾದ್ ಭಂಡಾರಿ, ಮಹಾಲಿಂಗ ನಾಯ್ಕ್, ಕಟ್ಟಡ ಸಮಿತಿ ಪ್ರಧಾನ ಕಾರ್ಯದರ್ಶಿ ಬಿ. ನಾಗೇಂದ್ರ, ಕೋಶಾಧಿಕಾರಿ ಸುರೇಶ್ ಪಿ ಮತ್ತಿತರರು ಉಪಸ್ಥಿತರಿದ್ದರು. 

ಅಧ್ಯಕ್ಷತೆ ವಹಿಸಿದ್ದ ನೌಕರರ ಸಂಘದ ಅಧ್ಯಕ್ಷ ಮೌರೀಸ್ ಮಸ್ಕರೇನಸ್ ಸ್ವಾಗತಿಸಿದರು. ಸಂಘದ ರಾಜ್ಯ ಪರಿಷತ್ ಸದಸ್ಯ ಕೆ. ಕೃಷ್ಣಪ್ಪ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಟ್ಟಡ ಸಮಿತಿ ಸಂಚಾಲಕ ಎಂ. ಮಾಮಚ್ಚನ್ ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News