ಸಂಖ್ಯೆಗಿಂತ ಗುಣಮಟ್ಟದ ಚಲನಚಿತ್ರ ನಿರ್ಮಾಣಕ್ಕೆ ಆದ್ಯತೆ ನೀಡಿ: ನಾಗತಿಹಳ್ಳಿ ಚಂದ್ರಶೇಖರ್

Update: 2018-09-21 17:27 GMT

ಮಂಗಳೂರು, ಸೆ.21: ಪ್ರಾದೇಶಿಕ ಭಾಷೆಗಳಲ್ಲಿ ಚಲನಚಿತ್ರಗಳು ಮೂಡಿಬರುತ್ತಿರುವುದು ಉತ್ತಮ ಬೆಳವಣಿಗೆಯಾದರೂ ಕೂಡಾ ಸಂಖ್ಯೆಯೇ ಮುಖ್ಯವಾಗಬಾರದು. ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡಿ ಚಲನಚಿತ್ರ ನಿರ್ಮಾಣಕ್ಕೆ ಆದ್ಯತೆ ನೀಡಬೇಕು. ಆ ಮೂಲಕ ಪ್ರಾದೇಶಿಕ ಭಾಷೆಯ ಸೊಗಡನ್ನು ಜಗತ್ತಿಗೆ ಪರಿಚಯಿಸಲು ಸಾಧ್ಯವಿದೆ ಎಂದು ಕರ್ನಾಟಕ ಚಲನಚಿತ್ರ ಅಕಾಡಮಿಯ ಅಧ್ಯಕ್ಷ, ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅಭಿಪ್ರಾಯಪಟ್ಟರು.

ಕರ್ನಾಟಕ ಚಲನಚಿತ್ರ ಅಕಾಡಮಿ ಮತ್ತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಸಂತ ಅಲೋಶಿಯಸ್ ಕಾಲೇಜಿನ ಕನ್ನಡ ವಿಭಾಗದ ಆಶ್ರಯದಲ್ಲಿ ಕಾಲೇಜಿನ ಎಲ್‌ಸಿಆರ್‌ಐ ಸಭಾಂಗಣದಲ್ಲಿ ಶುಕ್ರವಾರ ಪ್ರಾದೇಶಿಕ ಭಾಷಾ ಚಲನಚಿತ್ರೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಜಗತ್ತಿನ ಬಹುತೇಕ ಎಲ್ಲಾ ಭಾಷೆಗಳೂ ಪ್ರಾದೇಶಿಕವೇ ಆಗಿದೆ. ಕೆಲವು ಭಾಷೆಗಳ ವಿಸ್ತಾರ ಕಡಿಮೆಯಿದ್ದರೆ, ಇನ್ನು ಕೆಲವು ಭಾಷೆಗಳ ವಿಸ್ತಾರ ಹೆಚ್ಚಿದೆ. ಭಾರತವು ಹಾಲಿವುಡ್‌ಗಿಂತ ಹೆಚ್ಚು ಚಲನಚಿತ್ರವನ್ನು ಉತ್ಪಾದಿಸುತ್ತದೆ. ಆ ಮೂಲಕ ಒಂದು ಭಾಷೆಯ ಸೌಂದರ್ಯ, ಸೊಗಡು, ಸಂಸ್ಕೃತಿ, ಹೊಸತನವನ್ನು ಅನ್ವೇಷಣೆ ಮಾಡಲು ಸಾಧ್ಯವಾಗಲಿದೆ. ಪ್ರಾದೇಶಿಕತೆಯನ್ನು ಮೀರಿ ಅಥವಾ ಹಿಮ್ಮೆಟ್ಟಿಸಿ ಸಿನೆಮಾ ಮಾಡಲು ಹೊರಟರೆ ಅದು ಹುಸಿತನವಾಗಬಹುದು ಎಂದು ನಾಗತಿಹಳ್ಳಿ ಚಂದ್ರಶೇಖರ್ ಹೇಳಿದರು.

ಯಾವುದೇ ಸಿನೆಮಾವನ್ನು ಕಡಿಮೆ ಬಂಡವಾಳದಲ್ಲಿ ಕಲಾತ್ಮಕವಾಗಿ ಜನರು ಮೆಚ್ಚುವಂತೆ ನಿರ್ಮಿಸಬೇಕು. ಗುಣಮಟ್ಟವಿಲ್ಲದೆ ಕೇವಲ ಸಂಖ್ಯೆ ಹೆಚ್ಚಿಸುವ ಸಲುವಾಗಿ ಚಿತ್ರ ನಿರ್ಮಿಸುತ್ತಾ ಹೋದರೆ ಅಪಾಯ ತಪ್ಪಿದ್ದಲ್ಲ. ಈ ನಿಟ್ಟಿನಲ್ಲಿ ಸಿನೆಮಾ ಉದ್ಯಮದಾರರು ಯೋಚಿಸಬೇಕಿದೆ. ಇಂತಹ ಆತಂಕಕಾರಿ ಬೆಳವಣಿಗೆಯನ್ನು ಆರಂಭದಲ್ಲೇ ನಿಯಂತ್ರಸದಿದ್ದರೆ ನೆಲದ ಸತ್ಯ ಅಥವಾ ಬದುಕನ್ನು ಬಿಂಬಿಸುವ ಚಿತ್ರ ನಿರ್ಮಿಸಲು ಸಾಧ್ಯವಿಲ್ಲ. ಮನೆಯ ಜಗಲಿಯಲ್ಲಿ ಕುಳಿತು ವಿಶ್ವವನ್ನು ನೋಡುವ ಪ್ರಯತ್ನ ಪ್ರಾದೇಶಿಕ ಚಲನಚಿತ್ರಗಳ ಮೂಲಕ ಆಗಬೇಕು. ಅದಕ್ಕಾಗಿ ಗುಣಮಟ್ಟಕ್ಕೆ ಆದ್ಯತೆ ನೀಡುವುದು ಅನಿವಾರ್ಯ ಎಂದು ನಾಗತಿಹಳ್ಳಿ ಚಂದ್ರಶೇಖರ್ ಪ್ರತಿಪಾದಿಸಿದರು.

ರಾಜ್ಯದ ವಿವಿಧ ಪ್ರದೇಶಗಳಲ್ಲಿ ಆಯಾ ನೆಲ, ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಚಲನಚಿತ್ರವನ್ನು ಪ್ರದರ್ಶಿಸುವ ಕೆಲಸವನ್ನು ಅಕಾಡಮಿ ಮಾಡಲಿದೆ. ಮೈಸೂರು ದಸರಾ ಸಂದರ್ಭ 24 ಚಲನಚಿತ್ರಗಳ ಪ್ರದರ್ಶನವನ್ನೂ ಅಕಾಡಮಿ ಹಮ್ಮಿಕೊಂಡಿದೆ ಎಂದು ನಾಗತಿಹಳ್ಳಿ ಚಂದ್ರಶೇಖರ್ ತಿಳಿಸಿದರು.

ಸಂತ ಅಲೋಶಿಯಸ್ ಕಾಲೇಜಿನ ಪ್ರಾಂಶುಪಾಲ ರೆ.ಡಾ.ಪ್ರವೀಣ್ ಮಾರ್ಟಿಸ್ ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕರಾದ ರಿಷಭ್ ಶೆಟ್ಟಿ ಹಾಗೂ ಶಿವಧ್ವಜ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು. ನಿರ್ದೇಶಕ ರಿಚರ್ಡ್ ಕ್ಯಾಸ್ಟಲಿನೋ, ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥೆ ಡಾ. ಸರಸ್ವತಿ ಕುಮಾರಿ ಉಪಸ್ಥಿತರಿದ್ದರು.

ಚಿತ್ರೋತ್ಸವದ ಸಂಚಾಲಕ ಡಾ.ನಾ.ದಾಮೋದರ ಶೆಟ್ಟಿ ಸ್ವಾಗತಿಸಿದರು. ಕಾಲೇಜಿನ ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ. ವಿಶ್ವನಾಥ ಬದಿಕಾನ ಕಾರ್ಯಕ್ರಮ ನಿರೂಪಿಸಿದರು.

ಶುಕ್ರವಾರದಿಂದ ಆರಂಭಗೊಂಡ ಚಲನಚಿತ್ರೋತ್ಸವದಲ್ಲಿ ಕನ್ನಡ, ತುಳು, ಕೊಂಕಣಿ, ಕೊಡವ, ಬಂಜಾರ, ಬ್ಯಾರಿ ಭಾಷೆಗಳ ಪ್ರಶಸ್ತಿ ಪುರಸ್ಕೃತ ಹಾಗೂ ಮೂರು ತುಳು ಜನಪ್ರಿಯ ಚಲನಚಿತ್ರಗಳು ರವಿವಾರದವರೆಗೆ ಪ್ರದರ್ಶಿಸಲ್ಪಡಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News