ಸರ್ಜಿಕಲ್ ದಾಳಿಯ ವರ್ಷಾಚರಣೆ ಹಿಂದೆ ದೇಶಭಕ್ತಿಯಿದೆ,ರಾಜಕೀಯವಲ್ಲ: ಪ್ರಕಾಶ್ ಜಾವಡೇಕರ್

Update: 2018-09-21 13:54 GMT

ಹೊಸದಿಲ್ಲಿ,ಸೆ.21: ಸರ್ಜಿಕಲ್ ದಾಳಿಯ ದ್ವಿತೀಯ ವಾರ್ಷಿಕ ದಿನವನ್ನು ಆಚರಿಸುವಂತೆ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ(ಯುಜಿಸಿ)ವು ವಿವಿಗಳಿಗೆ ಸೂಚನೆ ನೀಡಿರುವ ಹಿಂದೆ ದೇಶಭಕ್ತಿಯಿದೆಯೇ ಹೊರತು ರಾಜಕೀಯವಲ್ಲ ಮತ್ತು ಆಚರಣೆಯು ಶಿಕ್ಷಣ ಸಂಸ್ಥೆಗಳಿಗೆ ಕಡ್ಡಾಯವಲ್ಲ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್ ಅವರು ಶುಕ್ರವಾರ ಇಲ್ಲಿ ಹೇಳಿದರು.

ಸರಕಾರವು ಸರ್ಜಿಕಲ್ ದಾಳಿಯನ್ನು ರಾಜಕೀಕರಿಸುತ್ತಿದೆ ಎಂಬ ಪ್ರತಿಪಕ್ಷ ನಾಯಕರ ಆರೋಪಗಳನ್ನು ‘ಸಂಪೂರ್ಣ ಹಾಸ್ಯಾಸ್ಪದ ಮತ್ತು ಸುಳ್ಳು’ ಎಂದು ಅವರು ತಿರಸ್ಕರಿಸಿದರು.

ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಜಾವಡೇಕರ್,ಆಡಳಿತ ಬಿಜೆಪಿಗೂ ಕಾಂಗ್ರೆಸ್‌ಗೂ ವ್ಯತ್ಯಾಸವಿದೆ. ಬಿಜೆಪಿಯು ಕಾರ್ಯಕ್ರಮವೊಂದನ್ನು ಅನುಸರಿಸುವಂತೆ ಶಿಕ್ಷಣ ಸಂಸ್ಥೆಗಳಿಗೆ ಕೇವಲ ಸಲಹೆಯನ್ನು ನೀಡಿದೆ,ಆದರೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ತನ್ನ ನಿರ್ಧಾರಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಮಾಡಿತ್ತು.ಸರ್ಜಿಕಲ್ ದಾಳಿಯ ಕುರಿತು ಶಿಕ್ಷಣಸಂಸ್ಥೆಗಳಿಗೆ ಸಲಹೆಯನ್ನು ನೀಡಲಾಗಿದೆಯೇ ಹೊರತು ನಿರ್ದೇಶವನ್ನಲ್ಲ ಎಂದು ತಿಳಿಸಿದರು.

ಇದರಲ್ಲಿ ರಾಜಕೀಯವೆಲ್ಲಿದೆ?ಇದು ರಾಜಕೀಯವಲ್ಲ,ಇದು ದೇಶಭಕ್ತಿ. ವಿದ್ಯಾರ್ಥಿಗಳಿಗೆ ಸರ್ಜಿಕಲ್ ದಾಳಿಗಳು,ಸೇನೆ ಮತ್ತು ಯೋಧರು ಮಾಡುವ ನಾಗರಿಕ ಕಾರ್ಯಗಳ ಬಗ್ಗೆ ತಿಳಿಸುವ ಅಗತ್ಯವಿದೆ ಎಂದ ಅವರು,ಸರ್ಜಿಕಲ್ ದಾಳಿಗಳ ದ್ವಿತೀಯ ವರ್ಷಾಚರಣೆಗಾಗಿ ವಿದ್ಯಾರ್ಥಿಗಳು ಮತ್ತು ಶಿಕ್ಷಣ ಸಂಸ್ಥೆಗಳಿಂದ ಸಲಹೆಗಳು ಬಂದಿದ್ದವು ಎಂದರು.

ಕಳೆದ ವರ್ಷವೇಕೆ ಸರ್ಜಿಕಲ್ ದಾಳಿ ದಿನವನ್ನು ಆಚರಿಸಲಾಗಿರಲಿಲ್ಲ ಎಂಬ ಪ್ರಶ್ನೆಗೆ ಅವರು,ಒಳ್ಳೆಯ ಸಲಹೆಯನ್ನು ಯಾವಾಗಲೂ ಕಾರ್ಯಗತಗೊಳಿಸಬಹುದು ಎಂದು ಉತ್ತರಿಸಿದರು.

ಸೆ.29ರಂದು ‘ಸರ್ಜಿಕಲ್ ದಾಳಿ ದಿನ’ವನ್ನಾಗಿ ಆಚರಿಸುವಂತೆ ಗುರುವಾರ ದೇಶಾದ್ಯಂತದ ಎಲ್ಲ ವಿವಿಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಯುಜಿಸಿ ನಿರ್ದೇಶ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News