ಯುಪಿಸಿಎಲ್ ಯೋಜನೆ ವಿಸ್ತರಣೆಗೆ ಸಹಕಾರ: ಸಚಿವ ಆರ್.ಶಂಕರ್

Update: 2018-09-21 13:56 GMT

ಪಡುಬಿದ್ರೆ, ಸೆ.21: ಎಲ್ಲೂರು ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಅದಾನಿ ಯುಪಿಸಿಎಲ್ ಸ್ಥಾವರಕ್ಕೆ ರಾಜ್ಯ ಅರಣ್ಯ ಮತ್ತು ಪರಿಸರ ಸಚಿವ ಆರ್.ಶಂಕರ್, ಅರಣ್ಯ ಮತ್ತು ಪರಿಸರ ಇಲಾಖೆ ನಿಯೋಗದೊಂದಿಗೆ ಗುರುವಾರ ಭೇಟಿ ನೀಡಿದರು.

ನಿಯೋಗವನ್ನು ಬರಮಾಡಿಕೊಂಡ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ, ಸ್ಥಾವರದ ಕಾರ್ಯವೈಖರಿ ಬಗ್ಗೆ ವಿವರಿಸಿದರು. ನಂತರ ಸ್ಥಾವರದ ಎಲ್ಲಾ ಘಟಕಗಳಿಗೆ ಸಚಿವರು ನಿಯೋಗದೊಂದಿಗೆ ತೆರಳಿ ಆಯಾ ಘಟಕಗಳ ಕಾರ್ಯಾಚರಣೆ ಬಗ್ಗೆ ಮಾಹಿತಿ ಪಡೆದರು.

ನಂತರ ಮಾತನಾಡಿದ ಸಚಿವರು, ಯುಪಿಸಿಎಲ್ ಯೋಜನೆ ವಿಸ್ತರಣೆಯು ಸ್ಥಳೀಯರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗವಕಾಶ ದೊರಕಿಸುವುದಲ್ಲದೆ ಕೈಗಾರಿಕಾ ಕ್ಷೇತ್ರ ಬೆಳೆಯಲು ಸಹಕಾರಿಯಾಗುತ್ತದೆ. ಅದೇ ರೀತಿ ರಾಜ್ಯದ ವಿದ್ಯುತ್ ಬೇಡಿಕೆಯನ್ನು ಈಡೇರಿಸಿ ವಿದ್ಯುತ್ ಕೊರತೆಯನ್ನು ನೀಗಿಸಲು ಅನುಕೂಲಕರವಾಗುತ್ತದೆ ಎಂದು ತಿಳಿಸಿದರು.

ಯೋಜನೆ ವಿಸ್ತರಣೆಗೆ ನಮ್ಮ ಸಹಕಾರ ಇದ್ದು, ವಿಸ್ತರಣೆಯ ವಿದ್ಯುತ್ ಖರೀದಿ ಒಪ್ಪಂದದ ಪ್ರಸ್ತಾಪವು ಸರಕಾರದ ಮಟ್ಟದಲ್ಲಿದೆ. ಸಂಪುಟ ಅನುಮೋದನೆಗೆ ನಾನು ಸಹಕರಿಸುತ್ತೇನೆ ಎಂದು ಸಚಿವರು ಭರವಸೆ ನೀಡಿದರು. ರಾಜ್ಯದಲ್ಲಿ ಕೈಗಾರಿಕ ಉದ್ಯಮಿಗಳು ಹಾಗೂ ಹೂಡಿಕೆದಾರರು ಬಂಡವಾಳ ಹೂಡಿಕೆಗೆ ಹಿಂಜರಿಯುತ್ತಿರುವುದನ್ನು ತಡೆಯಲು ಸರಕಾರ ಹೂಡಿಕೆದಾರರಿಗೆ ಎಲ್ಲಾ ರೀತಿಯ ಸಹಕಾರ ಒದಗಿಸಿಕೊಡಲು ಬದ್ಧವಾಗಿದೆ ಎಂದರು.

ನಿಯೋಗದಲ್ಲಿ ಮಂಗಳೂರು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್ ನಟಲ್‌ಕರ್, ಕುಂದಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಲೋಹಿತ್, ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿಗಳಾದ ರಾಜಶೇಖರ ಪುರಾಣಿಕ್, ಲಕ್ಷ್ಮೀಕಾಂತ್, ವಲಯ ಅರಣ್ಯಾಧಿಕಾರಿ ಕ್ಲಿರ್ಡ್ ಲೋಬೊ, ಉಪವಲಯ ಅರಣ್ಯಾಧಿಕಾರಿನಾಗೇಶ್ ಬಿಲ್ಲವ ಉಪಸ್ಥಿತರಿದ್ದರು.

ಬೆಳಪು ಗ್ರಾಪಂ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಕೆಪಿಸಿಸಿ ಅಲ್ಪಸಂಖ್ಯಾತ ಮೋರ್ಚಾದ ಉಪಾಧ್ಯಕ್ಷ ಗುಲಾಂ ಹೆಜಮಾಡಿ, ಪಲಿಮಾರು ಗ್ರಾಪಂ ಅಧ್ಯಕ್ಷ ಜಿತೇಂದ್ರ ಫುಟ್ರಾಡೋ ಸಚಿವರೊಂದಿಗೆ ಇದ್ದರು. ಬಳಿಕ ಸಚಿವರು ಸ್ಥಾವರದ ವಠಾರದಲ್ಲಿ ಸಸಿ ನೆಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News