ಮರೆಗುಳಿತನ ರೋಗದ ಬಗ್ಗೆ ಅರಿವು, ಜಾಗೃತಿ ಅಗತ್ಯ : ಡಾ.ಪಿ.ವಿ.ಭಂಡಾರಿ

Update: 2018-09-21 15:06 GMT

ಉಡುಪಿ, ಸೆ.21: ಮರೆಗುಳಿತನ ಎಂಬುದು ಸಂಪೂರ್ಣವಾಗಿ ಗುಣವಾಗದ ಕಾಯಿಲೆಯಾಗಿದ್ದು, ಇದನ್ನು ಪ್ರಾರಂಭಿಕ ಹಂತದಲ್ಲೇ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ನೀಡಿ ಕಾಯಿಲೆಯನ್ನು ನಿಯಂತ್ರಣದಲ್ಲಿರಿಸಿಕೊಳ್ಳಬಹುದಾಗಿದೆ. ಇದಕ್ಕಾಗಿ ಜನರಲ್ಲಿ ಅರಿವು ಮೂಡಿಸಿ ಜಾಗೃತಗೊಳಿಸುವುದು ಅತಿ ಅಗತ್ಯ ಎಂದು ದೊಡ್ಡಣಗುಡ್ಡೆ ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆಯ ನಿರ್ದೇಶಕ ಹಾಗೂ ಖ್ಯಾತ ಮನೋರೋಗ ತಜ್ಞ ಡಾ.ಪಿ.ವಿ.ಭಂಡಾರಿ ಹೇಳಿದ್ದಾರೆ.

ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆ ಹಾಗೂ ಉಡುಪಿಯ ಹಿರಿಯ ನಾಗರಿಕರ ವೇದಿಕೆಯ ವತಿಯಿಂದ ಬಾಳಿಗಾ ಆಸ್ಪತ್ರೆಯ ಕಮಲ್ ಎ.ಬಾಲಿಗಾ ಸಭಾಂಗಣದಲ್ಲಿ ಶುಕ್ರವಾರ 'ವಿಶ್ವ ಮರೆಗುಳಿತನ ದಿನ'ದ ಅಂಗವಾಗಿ ಹಮ್ಮಿಕೊಳ್ಳ ಲಾದ ಮಾಹಿತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ಸಾಮಾನ್ಯವಾಗಿ 50 ವರ್ಷಗಳ ನಂತರ, ಹಿರಿಯ ನಾಗರಿಕರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಮರೆಗುಳಿತನ ರೋಗ ಅಥವಾ ಅಲ್ಜಮೈರ್ಸ್‌ ಕಾಯಿಲೆಯ ಸೂಚನೆಗಳು ಕಂಡು ಬಂದ ತಕ್ಷಣ ತಜ್ಞ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಬೇಕು ಎಂದರು.

ಅಲ್ಜಮೈರ್ಸ್‌ ಕಾಯಿಲೆ ವಿಟಮಿನ್ಸ್ ಬಿ12 ಕೊರತೆಯಿಂದ ಬರುವ ಸಾಧ್ಯತೆ ಇದೆ ಎಂದು ಗೊತ್ತಾಗಿದೆ. ಡಿಮಿನ್ಶಿಯಾ ಮತ್ತು ಅಲ್ಜಮೈರ್ಸ್‌ ಕಾಯಿಲೆ ಒಂದೇ ಅಲ್ಲ. ಅದು ಬೇರೆ ಬೇರೆ. ಡಿಮಿನ್ಷಿಯಾದ ಅನೇಕ ಕಾರಣಗಳಲ್ಲಿ ಅಲ್ಜಮೈರ್ಸ್‌ ಸಹ ಒಂದಾಗಿದೆ ಎಂದವರು ನುಡಿದರು.

ಕಾರ್ಯಕ್ರಮವನ್ನು ಉಡುಪಿ ಹಿರಿಯ ನಾಗರಿಕ ಸಂಸ್ಥೆಯ ಅಧ್ಯಕ್ಷ ಸಿ.ಎಸ್. ರಾವ್ ಅವರು ಉದ್ಘಾಟಿಸಿದರು. ಉಪಾಧ್ಯಕ್ಷ ವಿಶ್ವನಾಥ ಹೆಗ್ಡೆ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಆಸ್ಪತ್ರೆಯ ಮನೋರೋಗ ತಜ್ಞ ಡಾ.ವಿರೂಪಾಕ್ಷ ದೇವರಮನೆ, ನೇತ್ರತಜ್ಞೆ ಡಾ.ಲಾವಣ್ಯ ಜಿ.ರಾವ್, ಡಾ.ಕೆ.ಎಸ್.ಲತಾ ಅವರು ಉಪಸ್ಥಿತರಿದ್ದರು.
ಉಪನ್ಯಾಸ:ಉದ್ಘಾಟನಾ ಕಾರ್ಯಕ್ರಮದ ಬಳಿಕ ಡಾ.ಪಿ.ವಿ.ಭಂಡಾರಿ ಅವರು 'ಮರೆಗುಳಿ ಕಾಯಿಲೆಯಲ್ಲಿ ಕಂಡುಬರುವ ಲಕ್ಷಣಗಳು' ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು. ಮರೆಗುಳಿತನ ಕಾಯಿಲೆಯ 10 ಆರಂಭಿಕ ಲಕ್ಷಣಗಳನ್ನು ವಿವರಿಸಿದ ಅವರು, ಮನೆಯಲ್ಲಿರುವ ಹಿರಿಯ ನಾಗರಿಕರ ಕೆಲವು ನಡೆ-ನುಡಿಗಳು ಈ ರೋಗದ ಲಕ್ಷಣ ಎಂಬುದನ್ನು ಅರಿಯದೇ ಅವರ ಮಕ್ಕಳು, ಸಂಬಂಧಿಕರು ಇಂಥವರ ಬಗ್ಗೆ ಕಟುವಾಗಿ ವರ್ತಿಸುತ್ತಾರೆ. ಇದು ಸರಿಯಲ್ಲ. ಈ ಬಗ್ಗೆ ಜನಸಾಮ್ಯಾರಿಗೆ ಅರಿವು ಬೇಕಾಗಿದೆ ಎಂದರು.

ಅಲ್ಪಕಾಲದ ಮರೆವು (ಆದರೆ ಹಳೆಯ ನೆನಪು ಮಾಸುವುದಿಲ್ಲ), ಸಂವಹನದಲ್ಲಿ ಕಾಣಿಸಿಕೊಳ್ಳುವ ಕಠಿಣತೆ, ಆಗಾಗ ಅವರಲ್ಲಿ ಕಾಣಿಸಿಕೊಳ್ಳುವ ಗೊಂದಲತೆ, ವಸ್ತುಗಳನ್ನು ಎಲ್ಲೆಲ್ಲೊ ಇಟ್ಟು ಮರೆಯುವುದು, ಶೀಘ್ರ ಕೋಪ ಅಥವಾ ಹಠಾತ್ತನೆ ಮೂಡ್ ಬದಲಾಗುವುದು, ಆಗಾಗ ಎಡವುದು, ಹಠಾತ್ತನೆ ಸ್ವಚ್ಛತೆ ಬಗ್ಗೆ ನಿರ್ಲಕ್ಷತನ, ಯಾವುದೇ ಕೆಲಸಕ್ಕೆ ಹಿಂಜರಿಕೆ ಇವೆಲ್ಲವೂ ಮರೆಗುಳಿತನದ ಆರಂಭಿಕ ಲಕ್ಷಣಗಳು ಎಂದರು.

ಕಾಯಿಲೆಗೆ ಕಾರಣಗಳಲ್ಲಿ ಅನಿಯಂತ್ರಿತ ಸಿಹಿಮೂತರ ರೋಗ, ರಕ್ತದೊತ್ತಡ ಕಾಯಿಲೆ, ಪಾರ್ಕಿನ್ಸನ್ ಡಿಮಿಶ್ಶಿಯಾ, ತಲೆಗೆ ಬಿದ್ದ ಏಟು, ಹೈಪರ್ ಥೈರಾಯ್ಡಿ, ವಿಟಮಿನ್ ಬಿ-12 ಕೊರತೆ, ಇಲೆಕ್ಟ್ರೋಲೈಟ್‌ನ ಏರಿಳಿತ ಹಾಗೂ ಎಚ್‌ಐವಿ ಸೋಂಕು ಸೇರಿವೆ ಎಂದರು.

ಮರೆಗುಳಿತನ ಕಾಯಿಲೆ ಬಡವ, ಶ್ರೀಮಂತ ಎಂಬ ಬೇಧವಿಲ್ಲದೇ ಯಾರನ್ನೂ ಬಾಧಿಸಬಹುದಾದ ಕಾಯಿಲೆ, ಅದನ್ನು ಸೂಕ್ತ ಸಮಯದಲ್ಲಿ ಪತ್ತೆ ಹಚ್ಚಿ ನಿಯಂತ್ರಣದಲ್ಲಿರಿಸಿಕೊಳ್ಳಬೇಕು ಎಂದು ಡಾ.ಭಂಡಾರಿ ವಿವರಿಸಿದರು.

ಬಳಿಕ ಡಾ.ವಿರೂಪಾಕ್ಷ ದೇವರಮನೆ ಅವರು 'ವೃದ್ಧಾಪ್ಯದಲ್ಲಿ ಕಂಡುಬರುವ ಇತರ ಮಾನಸಿಕ ಕಾಯಿಲೆಗಳು' ಹಾಗೂ ಡಾ.ಕೆ.ಎಸ್.ಲತಾ ಅವರು 'ಮರೆಗುಳಿತನ ಕಾಯಿಲೆಯನ್ನು ತಡೆಗಟ್ಟಬಹುದೇ' ಎಂಬ ಕುರಿತು ಉಪನ್ಯಾಸ ನೀಡಿದರು. ಅಲ್ಲದೇ ಮರೆಗುಳಿತನ ಕಾಯಿಲೆ ಪರೀಕ್ಷೆ ಹಾಗೂ ಹಿರಿಯ ನಾಗರಿಕರಿಗೆ ಉಚಿತ ನೇತ್ರ ತಪಾಸಣೆಯನ್ನು ಹಮ್ಮಿಕೊಳ್ಳಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News