ಕೊಳ್ನಾಡು : ಕಾರ್ಮಿಕನಿಗೆ ಹಲ್ಲೆ ನಡೆಸಿ, ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿದ ತಂಡ

Update: 2018-09-21 15:16 GMT

ಬಂಟ್ವಾಳ, ಸೆ. 21: ಕಾರ್ಮಿಕನೋರ್ವನ ಮೇಲೆ ದುಷ್ಕರ್ಮಿಗಳ ತಂಡ ಹಲ್ಲೆ ನಡೆಸಿ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿದ ಘಟನೆ ಗುರುವಾರ ರಾತ್ರಿ ಕೊಳ್ನಾಡು ಗ್ರಾಮದ ನಾರ್ಶ ಸಮೀಪ ನಡೆದಿದೆ.

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಮುತ್ತಲಗೆರೆ ನಿವಾಸಿ, ಕಾರ್ಮಿಕ ಭೀಮೇಶ್(48) ಹಲ್ಲೆಗೊಳಗಾದ ವ್ಯಕ್ತಿ.   

ಹಳೆಯ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಸಾಕ್ಷ್ಯ ಹೇಳಿದ ಕಾರಣಕ್ಕಾಗಿ ದುಷ್ಕರ್ಮಿಗಳ ತಂಡ ಆತನ ಕೊಲೆಗೆ ಯತ್ನಿಸಿತ್ತೆಂದು ಆಸ್ಪತ್ರೆಗೆ ದಾಖಲಾದ ಗಾಯಾಳು ತಿಳಿಸಿದ್ದಾರೆ. 

ವಿಟ್ಲ ಠಾಣಾ ವ್ಯಾಪ್ತಿಯ ಕೊಳ್ನಾಡು ಗ್ರಾಮ ನಾರ್ಶ ಉದ್ಯಮಿ ಸಿಂಗಾರಿ ಬೀಡಿ ಮಾಲಿಕ ಸುಲೈಮಾನ್ ಹಾಜಿಯವರ ತೋಟದ ಮನೆಯಲ್ಲಿದ್ದ ಕಾರ್ಮಿಕನ ಮೇಲೆ ತಂಡ ದಾಳಿ ನಡೆಸಿದೆ.

ಘಟನೆ: ಗುರುವಾರ ರಾತ್ರಿ 9.35ರ ಸುಮಾರಿಗೆ ನಾರ್ಶ ಕೆ.ಪಿ.ಬೈಲಿನಲ್ಲಿರುವ ತೋಟದ ಮನೆಯಲ್ಲಿ ತನ್ನ ಪತ್ನಿ ಕುಸುಮ ಜೊತೆ ಭೀಮೇಶ್ ಊಟ ಮಾಡುತ್ತಿದ್ದರು. ಈ ಸಂದರ್ಭ ಗೇಟಿನ ಬಳಿಯಿಂದ ಸ್ಥಳೀಯ ನಿವಾಸಿ ಅಬ್ದುಲ್ ಖಾದರ್ ಎಂಬಾತ ಭೀಮೇಶರನ್ನು ಗೇಟಿನ ಬಳಿ ಬರುವಂತೆ ಕರೆದಿದ್ದಾರೆ. ಸ್ಥಳಕ್ಕಾಗಮಿಸುತ್ತಿದ್ದಂತೆ 15ಕ್ಕೂ ಹೆಚ್ಚು ಯುವಕರಿದ್ದ ಗುಂಪು ಭೀಮೇಶ್ ಮೇಲೆ ಹಲ್ಲೆ ನಡೆಸಿತ್ತೆನ್ನಲಾಗಿದೆ. ಇದೇ ಕ್ಷಣ ಸ್ಥಳದಲ್ಲಿದ್ದ ಕಾಡು ಮುಸ್ತಫಾ, ಪುತ್ತು ಯಾನೆ ಅದ್ರಾಮ, ಕದ್ಕಾರ್ ಅಬ್ದುಲ್ ಕರೀಂ, ಕೆ.ಪಿ.ಬೈಲಿನ ಖಾದರ್ ಮತ್ತು ಇತರ ಹತ್ತಕ್ಕೂ ಹೆಚ್ಚು ಯುವಕರು ಭೀಮೇಶ್ ಮೇಲೆ ಮನಬಂದಂತೆ ಹಲ್ಲೆ ನಡೆಸಿ ಆತನ ತಲೆಗೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಲು ಯತ್ನಿಸಿತ್ತೆಂದು ಗಾಯಾಳು ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.

ಬೆಂಕಿ ಕಡ್ಡಿ ಗೀರುತ್ತಿದ್ದಂತೆ ಅಪಾಯವನ್ನರಿತ ಭೀಮೇಶ್ ದುಷ್ಕರ್ಮಿಗಳ ಗುಂಪಿನಿಂದ ಕತ್ತಲಲ್ಲಿ ತಪ್ಪಿಸಿ ಪ್ರಾಣ ರಕ್ಷಣೆಗಾಗಿ ದೂರಲ್ಲಿದ್ದ ಅಬ್ಬೋಳು ಎಂಬವರ ಮನೆಯೊಳಗೆ ಓಡಿ ಆಶ್ರಯ ಪಡೆದಿದ್ದಾರೆ. ಅಲ್ಲಿಗೂ ಮಾರಕಾಸ್ತ್ರಗಳೊಂದಿಗೆ ಬೆನ್ನಟ್ಟಿ ಬಂದ ತಂಡವನ್ನು ನೋಡಿದ ಭೀಮೇಶ್ ಸ್ಥಳೀಯರೊಬ್ಬರ ನೆರವಿನಿಂದ ತನ್ನ ಮಾಲಿಕ ಸಿಂಗಾರಿ ಸುಲೈಮಾನ್ ಮನೆ ತಲುಪಿ ವಿಚಾರವನ್ನೆಲ್ಲ ತಿಳಿಸಿದ್ದಾರೆ. ಬಳಿಕ ಮಾಲಿಕರ ಸೂಚನೆಯಂತೆ ವಿಟ್ಲ ಸಮುದಾಯ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ವಿಟ್ಲ ಪೊಲೀಸರಿಗೆ ದೂರು ನೀಡಲಾಗಿದೆ.

ವರ್ಷದ ಹಿಂದಷ್ಟೆ ನಾರ್ಶದಲ್ಲಿ ಸಿಂಗಾರಿ ಸುಲೈಮಾನ್ ಅವರಿಗೆ ಸೇರಿದ ಜಮೀನಿಗೆ ಹಾಕಲಾಗಿದ್ದ ಆವರಣ ಗೋಡೆಯನ್ನು ಇದೇ ದುಷ್ಕರ್ಮಿಗಳ ತಂಡ ಧ್ವಂಸಗೈದ ಕಾರಣ ಪ್ರಕರಣ ದಾಖಲಾಗಿದ್ದು, ಇದೀಗ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಇದಕ್ಕೆ ಭೀಮೇಶ್ ಪ್ರಮುಖ ಸಾಕ್ಷಿಯಾಗಿದ್ದ ಕಾರಣ ಇದೇ ವಿಚಾರವಾಗಿ ದುಷ್ಕರ್ಮಿಗಳ ತಂಡ ದ್ವೇಷ ತೀರಿಸಲು ಮುಂದಾಗಿತ್ತೆಂದು ತಿಳಿದು ಬಂದಿದೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಆಗಮಿಸಿದ್ದು, ತನಿಖೆ ಕೈಗೆತ್ತಿಕೊಂಡಿದ್ದಾರೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News