ಅ.2 : ಹೊಸದಿಲ್ಲಿಯಲ್ಲಿ ಪಟ್ಲ ವಿಶ್ವ ಯಕ್ಷ ಸಂಭ್ರಮ

Update: 2018-09-21 15:57 GMT

ಮಂಗಳೂರು, ಸೆ.21:ಯಕ್ಷ ಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ಇದರ ನವದೆಹಲಿ ಘಟಕದಿಂದ ಅಕ್ಟೋಬರ್2ರಂದು ಪಟ್ಲ ವಿಶ್ವ ಯಕ್ಷ ಸಂಭ್ರಮ ದೆಹಲಿ ಕರ್ನಾಟಕ ಸಂಘದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಹೊಸ ದಿಲ್ಲಿ ಘಟಕದ ಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಸಮಾರಂಭವನ್ನು ಮಾಜಿ ಕೇಂದ್ರ ಸಚಿವ, ಸಂಸದ ಎಂ.ವೀರಪ್ಪ ಮೊಯ್ಲಿ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು 'ದಿ ವೀಕ್' ಪತ್ರಿಕೆಯ ಸ್ಥಾನೀಯ ಸಂಪಾದಕ ಕೆ.ಎಸ್.ಸಚ್ಚಿದಾನಂದಮೂರ್ತಿ ವಹಿಸಲಿದ್ದಾರೆ. ಸಂಜೆ ನಡೆಯುವ ಸಂಭ್ರಮ ಸಮಾರಂಭದಲ್ಲಿ ಸಾಹಿತಿ ನಾಟಕಕಾರ ಎಚ್.ಎಸ್.ಶಿವ ಪ್ರಕಾಶ್ ಅಧ್ಯಕ್ಷತೆ ವಹಿಸಲಿದ್ದಾರೆ. ದೆಹಲಿ ಸರಕಾರದ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ದೆಹಲಿಯ ಆರ್.ಕೆ ಪುರಂನ ಶಾಸಕರಾದ ಪ್ರಮೀಲ ಠೋಕಸ್‌ಮತ್ತು ಸರಕಾರದ ಜಿಎಸ್‌ಟಿ ಕಮೀಶನರ್ ಎಚ್.ರಾಜೇಶ್ ಪ್ರಸಾದ್,ಬಂಟ್ಸ್ ಕಲ್ಚರಲ್ ಅಸೋಶಿಯೇಶನ್ ಅಧ್ಯಕ್ಷ ಸುರೇಶ್ ಶೆಟ್ಟಿ,ದೆಹಲಿ ಬಿಲ್ಲವ ಎಸೊಸಿಯೇಶನ್‌ನ ಉಪಾಧ್ಯಕ್ಷ ಪ್ರಭಾಕರ ಬಂಗೇರ, ದೆಹಲಿ ಕನ್ನಡ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸರವು ಕೃಷ್ಣ ಭಟ್ ಹಾಗೂ ದೆಹಲಿ ಕರ್ನಾಟಕ ಸಂಘದ ಪ್ರಧಾನ ಕಾರ್ಯದರ್ಶಿ ನಾಗರಾಜ್ ಮೊದಲಾದವರು ಪಾಲ್ಗೊಳ್ಳಲಿದ್ದಾರೆ ಎಂದು ವಸಂತ ಶೆಟ್ಟಿ ತಿಳಿಸಿದ್ದಾರೆ.

ಸಮಾರಂಭದ ಅಂಗವಾಗಿ ಯಕ್ಷಗಾನ ತಾಳ ಮದ್ದಳೆ, ಬಯಲಾಟ ಪ್ರದರ್ಶನ ವಿರುತ್ತದೆ. ಮಾಜಿ ಸಚಿವರಾದ ವೀರಪ್ಪ ಮೊಯ್ಲಿಯವರು ತಾಳಮದ್ದಲೆಯಲ್ಲಿ ಕಲಾವಿದರಾಗಿ ಭಾಗವಹಿಸಲಿದ್ದಾರೆ. ಯಕ್ಷ ಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ದೇಶ ವಿದೇಶದ 30 ಘಟಕಗಳ 50ಕ್ಕೂ ಅಧಿಕ ಪ್ರತಿನಿಧಿಗಳು ಈ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಖ್ಯಾತ ಕಲಾವಿದರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಯಕ್ಷಧ್ರುವ ಪಟ್ಲ ಫೌಂಡೇಶನ್ 30 ತಿಂಗಳಲ್ಲಿ ಸುಮಾರು ಮೂರು ಕೋಟಿಗೂ ಅಧಿಕ ಮೊತ್ತದ ಸೇವಾ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಈಗಾಗಲೆ ಇಬ್ಬರು ಅಶಕ್ತ ಕಲಾವಿದರಿಗೆ ಎರಡು ಮನೆಗಳನ್ನು ನಿರ್ಮಿಸಿ ಹಸ್ತಾಂತರ ಮಾಡಿದೆ. 73 ಅಶಕ್ತ ಕಲಾವಿದರಿಗೆ ತಲಾ 50ಸಾವಿರ ರೂ. ಗೌರವಧನ ವಿತರಣೆ ಮಾಡಿದೆ. ಸುಮಾರು ಮಂದಿ ಕಲಾವಿದರಿಗೆ ಅಪಘಾತ ಚಿಕಿತ್ಸಾ ವೆಚ್ಚವಾಗಿ ರೂ.3ಲಕ್ಷ ಹಾಗೂ ಆಕಸ್ಮಿಕ ಜೀವ ವಹಾನಿಯಾದ ಕುಟುಂಬಕ್ಕೆ ಎಂಟು ಲಕ್ಷ ವಿಮಾ ಯೋಜನೆ ಜಾರಿ ಮಾಡಲಾಗಿದೆ. 15 ಜನ ಅಶಕ್ತ ಕಲಾವಿದರಿಗೆ ತಲಾ 25 ಸಾವಿರ ಚಿಕಿತ್ಸಾ ವೆಚ್ಚ ವಿತರಣೆ, ಅಪಘಾತ, ಅನಾರೋಗ್ಯದಿಂದ ವಿಧಿವಶರಾದ ಎರಡು  ಕಲಾವಿದರ ಕುಟುಂಬಗಳಿಗೆ ತಲಾ 50 ಸಾವಿರ ಪರಿಹಾರ ವಿತರಣೆ ಮಾಡಲಾಗಿದೆ. 12 ಜನ ಅಶಕ್ತ ಕಲಾವಿದರಿಗೆ ಗೃಹ ನಿರ್ಮಾಣಕ್ಕೆ ಸಹಾಯಧನ ವಿತರಣೆ, ಗರಿಷ್ಠ ಅಂಕಗಳಿಸಿದ ಕಲಾವಿದರ ಮಕ್ಕಳಿಗೆ ವಿದ್ಯಾರ್ಥಿ ವೇತನ ಹಾಗೂ ಪ್ರತಿಭಾ ಪುರಸ್ಕಾರ ಇಬ್ಬರು ಕಲಾವಿದರಿಗೆ ತಲಾ ಒಂದು ಲಕ್ಷ ನಗದಿನೊಂದಿಗೆ ಪಟ್ಲ ಪ್ರಶಸ್ತಿ ಪ್ರದಾನ ಮಾಡಲಾಗಿದೆ.  200 ಮಂದಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಯಕ್ಷಗಾನ ತರಗತಿಗಳನ್ನು ನಡೆಸಲಾಗುತ್ತದೆ ಎಂದು ವಸಂತ ಶೆಟ್ಟಿ ತಿಳಿಸಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಪಟ್ಲ ಸತೀಶ್ ಶೆಟ್ಟಿ, ಪುರುಷೋತ್ತಮ ಭಂಡಾರಿ ಅಡ್ಯಾರ್, ಸುದೇಶ್ ಕುಮಾರ್ ರೈ, ಜಗನ್ನಾಥ ಶೆಟ್ಟಿ ಬಾಳ, ರವಿಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News