ಉಡುಪಿ ಮಠದ ‘ಲಕ್ಷ್ಮೀಶ’ ಸಾಕಾನೆ ಮತ್ತಿಗೋಡಿನಲ್ಲಿ ಸಾವು

Update: 2018-09-21 17:22 GMT

ಉಡುಪಿ, ಸೆ.21: ಸುಮಾರು 16 ವರ್ಷಗಳ ಹಿಂದೆ ಉಡುಪಿಯಲ್ಲಿ ಮದವೇರಿ ದಾಂಧಲೆ ನಡೆಸಿ ಇಡೀ ನಗರವನ್ನು ಬೆಚ್ಚಿಬೀಳಿಸಿದ್ದ ಶಿರೂರು ಮಠದ ‘ಲಕ್ಷ್ಮೀಶ’ ಸಾಕಾನೆ, ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಮತ್ತಿಗೋಡು ಸಾಕಾನೆ ಶಿಬಿರದ ಕಲ್ಲಳ್ಳ ವಲಯದಲ್ಲಿ ಎರಡು ದಿನಗಳ ಹಿಂದೆ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.

1993ರಲ್ಲಿ ಶಿರೂರು ಶ್ರೀಲಕ್ಷ್ಮೀವರ ತೀರ್ಥ ಸ್ವಾಮೀಜಿಯ ಮನವಿಯಂತೆ ಅವರ ಪರ್ಯಾಯ ಅವಧಿಯಲ್ಲಿ ಆಗಿನ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ಶಿವಮೊಗ್ಗ ಸಕ್ರೆಬೈಲಿನಲ್ಲಿದ್ದ ಲಕ್ಷ್ಮೀಶನನ್ನು ಮಠಕ್ಕೆ ನೀಡಿದ್ದರು. 2002ರಲ್ಲಿ ಮಾವುತನ ಕಿರುಕುಳದಿಂದ ಸಿಟ್ಟಿಗೆದ್ದ ಲಕ್ಷ್ಮೀಶ ಇಡೀ ಉಡುಪಿ ನಗರದಲ್ಲಿ ಎರಡು ದಿನಗಳ ಕಾಲ ದಾಂಧಲೆ ಎಬ್ಬಿಸಿ, ಹಲವು ವಾಹನಗಳನ್ನು ಜಖಂಗೊಳಿಸಿತ್ತು. ಕೊನೆಗೆ ಅರವಳಿಕೆ ಮದ್ದನ್ನು ಶೂಟ್ ಮಾಡುವ ಮೂಲಕ ಲಕ್ಷ್ಮೀಶನ ಪ್ರಜ್ಞೆತಪ್ಪಿಸಿ ನಿಯಂತ್ರಣಕ್ಕೆ ತರಲಾಗಿತ್ತು.

ಬಳಿಕ ಹಿರಿಯಡ್ಕದಲ್ಲಿರುವ ಶಿರೂರು ಮೂಲ ಮಠಕ್ಕೆ ಕೊಂಡೊಯ್ದು ಸೂಕ್ತ ಚಿಕಿತ್ಸೆ ನೀಡಲಾಯಿತು. ಗುಣಮುಖನಾದ ಲಕ್ಷ್ಮೀಶನನ್ನು ಶಿರೂರು ಸ್ವಾಮೀಜಿಯ ಸೂಚನೆಯಂತೆ ಉಪ್ಪಿನಂಗಡಿಯ ಕರುಣಾಕರ ಪೂಜಾರಿ ಸಾಕಿದರು. ಮರ ಸಾಗಾಟ, ದೇವಸ್ಥಾನ, ಶುಭ ಕಾರ್ಯಕ್ರಮಗಳಿಗೆ ಲಕ್ಷ್ಮೀಶನನ್ನು ಕಳುಹಿಸಲಾಗುತ್ತಿತ್ತು. 2012ರ ಶಿರೂರು ಸ್ವಾಮೀಜಿಯ ಪರ್ಯಾಯ ಅವಧಿಯಲ್ಲಿ ಮತ್ತೆ ಲಕ್ಷ್ಮೀಶನನ್ನು ಉಡುಪಿ ಮಠಕ್ಕೆ ತಂದು ಒಂದು ವಾರ ಕಾಲ ಇರಿಸಿ, ಮತ್ತೆ ಉಪ್ಪಿನಂಗಡಿಗೆ ಕೊಂಡೊಯ್ಯಲಾಗಿತ್ತು.

2013ರಲ್ಲಿ ಪುತ್ತೂರಿನಲ್ಲಿ ಮೇವು ತಿನ್ನಿಸಲು ಲಾರಿಯಲ್ಲಿ ಕರೆದುಕೊಂಡು ಹೋಗುತ್ತಿದ್ದ ವೇಳೆ ಲಕ್ಷ್ಮೀಶ ಚಾಲಕನ ಮೇಲೆ ದಾಳಿ ನಡೆಸಿತ್ತು. ಬಳಿಕ ಅರಿವಳಿಕೆ ಮದ್ದಿನ ಮೂಲಕ ಪ್ರಜ್ಞೆ ತಪ್ಪಿಸಲಾಯಿತು. ಈ ಸಂದರ್ಭ ಕೇರಳದ ಮಾವುತನ ಹಿಂಸೆಗೆ ಸಿಟ್ಟಿಗೆದ್ದ ಲಕ್ಷ್ಮೀಶ ಆತನ ಮೇಲೆ ದಾಳಿ ನಡೆಸಿ ಬಲಿ ತೆಗೆದುಕೊಂಡಿತು. ಲಕ್ಷ್ಮೀಶ ಶಿವರಾಜ್ ಕುಮಾರ್ ಅಭಿನಯದ ಮಾದೇಶ ಸಿನೆಮಾದಲ್ಲೂ ನಟನೆ ಮಾಡಿತ್ತು.

ಲಕ್ಷ್ಮೀಶನ ಪುಂಡಾಟ ತಾಳಲಾರದೆ ಐದು ವರ್ಷಗಳ ಹಿಂದೆ ಅಂದರೆ 2013ರಲ್ಲಿ ಮತ್ತಿಗೋಡು ಶಿಬಿರಕ್ಕೆ ಒಪ್ಪಿಸಿ ಅಲ್ಲಿಯೇ ಆಶ್ರಯ ನೀಡಲಾಯಿತು. 20 ದಿನಗಳ ಹಿಂದೆ ಮೇಯಲು ಬಿಟ್ಟಿದ್ದ ವೇಳೆ ನಾಪತ್ತೆಯಾಗಿದ್ದ ಲಕ್ಷ್ಮೀಶ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮದವೇರಿದ್ದ ಲಕ್ಷ್ಮೀಶ ಕಾಡಾನೆಗಳ ಹಿಂಡಿನಲ್ಲಿ ಸೇರಿಕೊಂಡು ಗುದ್ದಾಡಿ ಗಾಯ ಮಾಡಿಕೊಂಡಿತ್ತೆನ್ನಲಾಗಿದೆ. ಇದರಿಂದ ಅಸ್ವಸ್ಥಗೊಂಡ ಲಕ್ಷ್ಮೀಶ ಎರಡು ದಿನಗಳ ಹಿಂದೆ ಮೃತಪಟ್ಟಿತ್ತೆಂದು ತಿಳಿದು ಬಂದಿದೆ. ಮರಣೋತ್ತರ ಪರೀಕ್ಷೆಯ ನಂತರವೇ ಸಾವಿಗೆ ನಿಖರ ಕಾರಣ ತಿಳಿದುಬರಬೇಕಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

2002ರಲ್ಲಿ ಉಡುಪಿಯಲ್ಲಿ ನಡೆದ ದಾಂಧಲೆಯ ಬಳಿಕ ಲಕ್ಷ್ಮೀಶ ಆನೆಯನ್ನು ನಾನೇ ಸಾಕಿದ್ದೇನೆ. 9-10ವರ್ಷಗಳ ನನ್ನ ಬಳಿ ಇದ್ದ ಆನೆಯನ್ನು 2013ರಲ್ಲಿ ಮತ್ತಿಗೋಡು ಶಿಬಿರಕ್ಕೆ ಒಪ್ಪಿಸಲಾಗಿತ್ತು. ಅಲ್ಲಿಯವರೆಗೆ ಆ ಆನೆ ಶಿರೂರು ಮಠದ ಹೆಸರಿನಲ್ಲೇ ಇತ್ತು. 33ವರ್ಷಗಳ ಕಾಲ ನಾನು ಒಟ್ಟು ಮೂರು ಆನೆಗಳನ್ನು ಸಾಕಿದ್ದೇನೆ. ಆದರೆ ಲಕ್ಷ್ಮೀಶನಂತಹ ಗುಣ ಇರುವ ಆನೆ ಮತ್ತೊಂದಿಲ್ಲ. ಮಾವುತರ ತಪ್ಪಿನಿಂದ ಲಕ್ಷ್ಮೀಶ ಕೆಲವು ಬಾರಿ ಪುಂಡಾಟಿಕೆ ನಡೆಸಿದೆ.
-ಕರುಣಾಕರ ಪೂಜಾರಿ, ಉಪ್ಪಿನಂಗಡಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News