ಕೊಲ್ಲೂರು ವಿದ್ಯಾರ್ಥಿ ಹಲ್ಲೆ ಪ್ರಕರಣ: ಆರೋಪಿಗಳಿಬ್ಬರು ಖುಲಾಸೆ

Update: 2018-09-21 16:55 GMT

ಕುಂದಾಪುರ, ಸೆ. 21: ಸುಮಾರು ಒಂಭತ್ತು ವರ್ಷಗಳ ಹಿಂದೆ ಎಂಜಿನಿಯರಿಂಗ್ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿ, ಕೊಲೆ ಬೆದರಿಕೆವೊಡ್ಡಿರುವ ಪ್ರಕರಣದ ಮೇಲ್ಮನವಿಯ ವಿಚಾರಣೆ ನಡೆಸಿದ ಕುಂದಾಪುರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಆರೋಪಿಗಳನ್ನು ದೋಷಮುಕ್ತಗೊಳಿಸಿ ಆದೇಶ ನೀಡಿದೆ.

ಕೊಲ್ಲೂರಿನ ನಿವಾಸಿಗಳಾದ ಚಂದ್ರಶೇಖರ ದೇವಾಡಿಗ ಹಾಗೂ ಕಿರಣ ಶೆಟ್ಟಿ ಖುಲಾಸೆಗೊಂಡ ಆರೋಪಿಗಳು. ಇವರು 2009ರ ಜ.25ರಂದು ಕೊಲ್ಲೂರಿಗೆ ವಿಹಾರಕ್ಕಾಗಿ ಸ್ನೇಹಿತರೊಂದಿಗೆ ಬೈಕಿನಲ್ಲಿ ಬಂದ ಎಂಜಿನಿಯರಿಂಗ್ ವಿದ್ಯಾರ್ಥಿ ಪ್ರಸನ್ನ ಎಂಬವರಿಗೆ ಕ್ಷುಲ್ಲಕ್ಕ ಕಾರಣಕ್ಕಾಗಿ ಹಲ್ಲೆ ಮಾಡಿ, ಕಿವಿಯ ತಮಟೆ ಒಡೆದು ಹಾಕಿದ್ದಲ್ಲದೆ, ಕೊಲೆ ಬೆದರಿಕೆಯೊಡ್ಡಿದ್ದಾರೆ ಎಂದು ಕೊಲ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಬಗ್ಗೆ ವಿಚಾರಣೆ ನಡೆಸಿದ್ದ ಕುಂದಾಪುರ ಜೆಎಂಎಫ್‌ಸಿ ನ್ಯಾಯಾಲಯವು ಆರೋಪಿಗಳಿಬ್ಬರಿಗೆ ಕಿವಿಗೆ ಹಾನಿ ಮಾಡಿದ್ದಕ್ಕೆ ಮೂರು ವರ್ಷ ಹಾಗೂ ಕೊಲೆ ಬೆದರಿಕೆಗೆ ಎರಡು ವರ್ಷಗಳ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ಆರೋಪಿಗಳು ಇದರ ವಿರುದ್ಧ ಕುಂದಾಪುರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶ ಪ್ರಕಾಶ್ ಖಂಡೇರಿ ಆರೋಪಿಗಳ ಮೇಲಿನ ಶಿಕ್ಷೆ ರದ್ದುಗೊಳಿಸಿ ತೀರ್ಪು ನೀಡಿದರು. ಆರೋಪಿಗಳ ಪರ ಕುಂದಾಪುರದ ರವಿಕಿರಣ ಮುರ್ಡೇಶ್ವರ ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News