ಮಂಗಳೂರು: ವಿದೇಶದಿಂದ ಅಕ್ರಮ ಚಿನ್ನ ಸಾಗಾಟ; ಆರೋಪಿಯ ಸೆರೆ

Update: 2018-09-21 17:17 GMT

►ಮೊಬೈಲ್ ಪೌಚ್‌ನಲ್ಲಿದ್ದ 47 ಲಕ್ಷ ರೂ. ಮೌಲ್ಯದ ಚಿನ್ನ ವಶಕ್ಕೆ

ಮಂಗಳೂರು, ಸೆ.21: ವಿದೇಶದಿಂದ ಅಕ್ರಮ ಚಿನ್ನ ಸಾಗಾಟ ಮಾಡುತ್ತಿದ್ದ ಆರೋಪದಲ್ಲಿ ಓರ್ವನನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಅಧಿಕಾರಿಗಳು ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುರುವಾರ ಸಂಜೆ ಬಂಧಿಸಿದ್ದಾರೆ. ಕಳ್ಳ ಸಾಗಾಟಕ್ಕೆ ಸಹಕರಿಸಿದ ಆರೋಪದಲ್ಲಿ ವಿಮಾನ ನಿಲ್ದಾಣದ ಸಿಬ್ಬಂದಿಯೋರ್ವನನ್ನೂ ಬಂಧಿಸಲಾಗಿದೆ.

ಕಾಸರಗೋಡು ಮುಳ್ಳೇರಿಯಾದ ನಿಝಾರ್ ಖಾದರ್(32) ಬಂಧಿತ ಆರೋಪಿ. ಈತನಿಂದ 47 ಲಕ್ಷ ರೂ. ಮೌಲ್ಯದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.
ಗುರುವಾರ ಸಂಜೆ 6:15ರ ವೇಳೆಗೆ ದುಬೈನಿಂದ ಸ್ಪೈಸ್‌ಜೆಟ್ ವಿಮಾನದಲ್ಲಿ ಚಿನ್ನ ಸಾಗಾಟ ನಡೆಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಆಧಾರದಲ್ಲಿ ಈ ಕಾರ್ಯಾಚರಣೆ ನಡೆದಿದೆ. ಆರೋಪಿ ನಿಝಾರ್ ಖಾದರ್‌ನನ್ನು ತಪಾಸಣೆಗೆ ಒಳಪಡಿಸಿದಾಗ ಆತನ ಬ್ಯಾಗ್‌ನಲ್ಲಿ ಮೊಬೈಲ್ ಪೌಚ್‌ವೊಂದರೊಳಗೆ 1,515.270 ಗ್ರಾಂ ತೂಕದ 12 ಚಿನ್ನದ ಗಟ್ಟಿಗಳು ಹಾಗೂ ಒಂದು ಚಿನ್ನದ ಶೀಟ್ ಪತ್ತೆಯಾಗಿದೆ. ಚಿನ್ನ ಹೊರಗೆ ಕಾಣದಂತೆ ಟೇಪ್‌ನಲ್ಲಿ ಅವುಗಳನ್ನು ಸುತ್ತಿಡಲಾಗಿತ್ತು ಎಂದು ಡಿಆರ್‌ಐ ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿಯನ್ನು ವಿಚಾರಣೆಗೊಳಪಡಿಸಿದಾಗ ವಿಮಾನ ನಿಲ್ದಾಣದ ಸಿಬ್ಬಂದಿಯೇ ಚಿನ್ನ ಕಳ್ಳ ಸಾಗಾಟದಲ್ಲಿ ಸಹಕರಿಸಿರುವುದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಆ ಸಿಬ್ಬಂದಿಯನು ಬಂಧಿಸಲಾಗಿದ್ದು, ಆತನ ಮನೆಯಿಂದ 25 ಲಕ್ಷ ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ತನಿಖೆ ಮುಂದುವರಿದಿದೆ ಎಂದು ಡಿಆರ್‌ಐ ಸಹಾಯಕ ನಿರ್ದೇಶಕ ಶ್ರೇಯಸ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News