×
Ad

ಮಣಿಪಾಲ: ಮಾದಕ ವ್ಯಸನ ವಿರುದ್ದ ಸೆ.23ರಂದು ಜಾಗೃತಿ ಓಟ

Update: 2018-09-21 23:28 IST

ಉಡುಪಿ, ಆ.26: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ), ಮಣಿಪಾಲ ರನ್ನರ್ಸ್‌ ಕ್ಲಬ್, ಉಡುಪಿ ಜಿಲ್ಲಾ ಪೋಲಿಸ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಉಡುಪಿ ಪ್ರೆಸ್ ಕ್ಲಬ್ಗಳ ಸಹಯೋಗದೊಂದಿಗೆ ಮಾದಕ ವ್ಯಸನದ ವಿರುದ್ದ ಅರಿವು ಮೂಡಿಸಲು ಜಾಗೃತಿ ಓಟವನ್ನು ಸೆ.23 ರವಿವಾರ ಮಣಿಪಾಲದಲ್ಲಿ ಆಯೋಜಿಸಿದೆ.

ಮಣಿಪಾಲದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾಹೆಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್ ಈ ವಿಷಯ ತಿಳಿಸಿದರು. ರವಿವಾರ ಬೆಳಗ್ಗೆ 7:15ಕ್ಕೆ ಮಣಿಪಾಲ ವಿವಿ ಬಿಲ್ಡಿಂಗ್ ಎದುರು ಓಟಕ್ಕೆ ಚಾಲನೆ ನೀಡಲಾಗುವುದು. ಮಾಹೆಯ ವಿದ್ಯಾರ್ಥಿಗಳು ಸೇರಿದಂತೆ, ನಗರದ ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು 5 ಕಿ.ಮೀ. ದೂರದ ಈ ಓಟದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಮಾಜದ ಎದುರು ದೊಡ್ಡ ಸಮಸ್ಯೆಯಾಗಿ ನಿಂತಿರುವ ಮಾದಕ ದ್ರವ್ಯ ಸೇವನೆ ಕುರಿತು ಅರಿವು ಹಾಗೂ ಜಾಗೃತಿ ಮೂಡಿಸಲು ಈ ಓಟವನ್ನು ಆಯೋಜಿಸಲಾಗಿದೆ ಎಂದರು.

ಮಾದಕ ವ್ಯಸನದ ವಿರುದ್ಧ ಜಾಗೃತಿಯೊಂದಿಗೆ ವಿದ್ಯಾರ್ಥಿಗಳ ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯವನ್ನು ಕಾಯ್ದುಕೊಳ್ಳುವುದು ಈ ಓಟದ ಉದ್ದೇಶಗಳಲ್ಲಿ ಸೇರಿದೆ. ಆದುದರಿಂದ ಉಡುಪಿ, ಮಣಿಪಾಲಗಳ ವಿದ್ಯಾರ್ಥಿಗಳು, ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. ಇದರಲ್ಲಿ ಸುಮಾರು 2000 ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದರು.

ವಿವಿ ಬಿಲ್ಡಿಂಗ್ ಎದುರು ಪ್ರಾರಂಭಗೊಳ್ಳುವ ಓಟ, ಕೆಎಂಸಿ ಗ್ರೀನ್ಸ್‌ನಲ್ಲಿ ಮುಕ್ತಾಯಗೊಳ್ಳಲಿದೆ. ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಆಕರ್ಷಕ ಬಹುಮಾನಗಳನ್ನು ನೀಡಲಾಗುವುದು ಎಂದು ಜಾಗೃತಿ ಓಟದ ಸಂಚಾಲಕ ಡಾ.ವಿನೋದ್ ನಾಯಕ್ ನುಡಿದರು.

ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ಬಿ.ನಿಂಬರಗಿ ಮಾತನಾಡಿ, ದೈಹಿಕವಾಗಿ ಸದೃಢನಾದ ವ್ಯಕ್ತಿ ದುಶ್ಚಟಗಳಿಗೆ ಬಲಿಯಾಗುವುದು ಕಡಿಮೆ. ಮಾದಕ ವಸ್ತುಗಳ ಬಳಕೆ ಕಡಿಮೆಯಾದರೆ, ಅವುಗಳ ಮಾರಾಟವೂ ಕಡಿಮೆಯಾಗುತ್ತದೆ. ಹೀಗಾಗಿ ಇದರ ಸೇವನೆ ವಿರುದ್ಧ ಜಾಗೃತಿ ಮೂಡಿಸಲಾಗುತ್ತದೆ ಎಂದರು.

ಜಿಲ್ಲಾ ಪೊಲೀಸರು, ಜಿಲ್ಲಾ ಕಾರ್ಯನಿರತರ ಪತ್ರಕರ್ತರ ಸಂಘ ಹಾಗೂ ಪ್ರೆಸ್‌ಕ್ಲಬ್ ಉಡುಪಿಯ ಸಹಯೋಗದೊಂದಿಗೆ ಕಳೆದ ಎರಡು ತಿಂಗಳಿನಿಂದ ನಿರಂತರವಾಗಿ ಆಯೋಜಿಸುತ್ತಿರುವ ಈ ಅಭಿಯಾನದ ಸಮಾರೋಪ ಇದಾಗಿದ್ದು, ಮಣಿಪಾಲವನ್ನು ಮಾದಕ ವ್ಯಸನ ಮುಕ್ತಗೊಳಿಸುವ ಪ್ರಯತ್ನದಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಮಾಹೆಯ ಕುಲಪತಿ ಡಾ.ವಿನೋದ್ ಭಟ್, ಪ್ರೊ ವೈಸ್ ಚಾನ್ಸಲರ್ ಡಾ.ಪೂರ್ಣಿಮಾ ಬಾಳಿಗಾ ಉಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News