ಡಿಎಆರ್ ಸಿಬ್ಬಂದಿಗಳಿಗೆ ಹೆಚ್ಚುವರಿ ವೇತನ ಭಡ್ತಿ: ಎಸ್ಪಿ ನಿಂಬರ್ಗಿ

Update: 2018-09-22 14:22 GMT

ಉಡುಪಿ, ಸೆ. 22: ಉಡುಪಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯಲ್ಲಿ 10 ವರ್ಷ ಕರ್ತವ್ಯ ಪೂರೈಸಿದ ಸಿಬ್ಬಂದಿಗಳಿಗೆ ಹೆಚ್ಚುವರಿ ವೇತನ ಭಡ್ತಿ ಮಂಜೂರು ಮಾಡಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ್ ಬ.ನಿಂಬರ್ಗಿ ತಿಳಿಸಿದ್ದಾರೆ.

ಉಡುಪಿ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಘಟಕ 2008ರ ತಂಡದ ಸಿಬ್ಬಂದಿಗಳ ದಶಮಾನೋತ್ಸವ ಸಂಭ್ರಮದ ಅಂಗವಾಗಿ ಮಣಿಪಾಲ ಕೆಎಂಸಿ ಆಸ್ಪತ್ರೆಯ ಸಹಯೋಗದೊಂದಿಗೆ ಶನಿವಾರ ಉಡುಪಿ ಜಗನ್ನಾಥ ಸಭಾಭವನ ದಲ್ಲಿ ಆಯೋಜಿಸಲಾದ ನೇತ್ರದಾನ ಹಾಗೂ ಅಂಗಾಂಗ ದಾನದ ಕುರಿತು ಅರಿವು ಮತ್ತು ವಿಶೇಷ ಚೇತನ ಶಾಲೆ ಮತ್ತು ಅನಾಥಾಶ್ರಮಗಳಿಗೆ ಸಹಾಯ ಧನ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ನೇತ್ರದಾನ ಮತ್ತು ಅಂಗಾಂಗ ದಾನಗಳಿಂದ ಇನ್ನೊಬ್ಬರ ಜೀವ ಉಳಿಸಲು ಸಾಧ್ಯವಾಗುತ್ತವೆ. ವಿಜ್ಞಾನ ಎಷ್ಟೆ ಮುಂದುವರೆದರೂ ಕೂಡ ಅಂಗಾಂಗಗಳನ್ನು ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲ. ಆದುದರಿಂದ ಪ್ರತಿಯೊಬ್ಬರು ಅಂಗಾಂಗ ದಾನ ಮಾಡಲು ಮುಂದೆ ಬಬೇಕು ಎಂದು ಅವರು ಹೇಳಿದರು.

ನೇತ್ರದಾನ ಹಾಗೂ ಅಂಗಾಂಗ ದಾನದ ಕುರಿತು ಮಾಹಿತಿ ನೀಡಿದ ಮಣಿಪಾಲ ಕೆಎಂಸಿ ಪ್ರೊಫೆಸರ್ ಡಾ.ವಿನೋದ್ ನಾಯಕ್, ದೇಶದಲ್ಲಿ ವರ್ಷಕ್ಕೆ 60-65 ಲಕ್ಷ ಮಂದಿಗೆ ಅಂಗಾಂಗದ ಅವಶ್ಯಕತೆ ಇದ್ದು, ಆದರೆ ಸದ್ಯ 25,000 ಅಂಗಾಂಗಗಳು ಮಾತ್ರ ಪೂರೈಕೆಯಾಗುತ್ತಿವೆ. ಪ್ರತಿವರ್ಷ ಸುಮಾರು ಮೂರು ಲಕ್ಷ ಮಂದಿ ಅಪಘಾತದಿಂದ ಮೆದುಳು ನಿಷ್ಕ್ರೀಯಕ್ಕೆ ಒಳಗಾಗುತ್ತಿದ್ದಾರೆ. ಆದರೆ ಇವರು ಹಾಗೂ ಇವರ ಕುಟುಂಬದಲ್ಲಿರುವ ಅರಿವಿನ ಕೊರತೆಯಿಂದ ಅಂಗಾಂಗ ದಾನ ಮಾಡುತ್ತಿಲ್ಲ ಎಂದರು.

ಧಾರ್ಮಿಕ ಮೂಢನಂಬಿಕೆಯಿಂದ ಹೆಚ್ಚಿನವರು ಅಂಗಾಂಗ ದಾನ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಆದರೆ ಯಾವುದೇ ಧರ್ಮ ಅಥವಾ ಧರ್ಮಗುರು ಗಳು ಅಂಗಾಂಗ ದಾನ ಮಾಡಬಾರದೆಂದು ಎಲ್ಲೂ ಹೇಳಿಲ್ಲ. ಒಬ್ಬರು ಮರಣದ ನಂತರ ತಮ್ಮ ಎಂಟು ಅಂಗಾಂಗಗಳನ್ನು ದಾನ ಮಾಡಬಹುದಾಗಿದೆ ಎಂದು ಅವರು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ, ಉಡುಪಿ ಡಿವೈಎಸ್ಪಿ ಕುಮಾರಸ್ವಾಮಿ, ಕಾರ್ಕಳ ಡಿವೈಎಸ್ಪಿ ಬೆಳ್ಳಿಯಪ್ಪ, ಕುಂದಾ ಪುರ ಡಿವೈಎಸ್ಪಿ ಬಿ.ಪಿ.ದಿನೇಶ್, ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಆರ್‌ಪಿಐ ಆರ್.ರಾಘವೇಂದ್ರ, ಉಡುಪಿ ಡಿಪಿಓ ಸಹಾಯಕ ಆಡಳಿತಾಧಿಕಾರಿ ಜಗದೀಶ್ ಸಾಲಿಮಠ, ಬಡಗಬೆಟ್ಟು ಸೊಸೈಟಿಯ ಪ್ರಧಾನ ವ್ಯವಸ್ಥಾಪಕ ಜಯ ಕರ ಶೆಟ್ಟಿ ಇಂದ್ರಾಳಿ ಉಪಸ್ಥಿತರಿದ್ದರು.

ರವಿಪ್ರಕಾಶ್ ಪೂಜಾರಿ ಸ್ವಾಗತಿಸಿದರು. ಮಹದೇವ ಎಂ.ಬಿಲ್ಲವ ವಂದಿಸಿ ದರು. ಮನಮೋಹ ರಾವ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News