ಸೆ. 30ರಂದು ಬಿ.ಸಿ.ರೋಡ್‌ನಲ್ಲಿ ಸಂವಿಧಾನ ಆಂದೋಲನ

Update: 2018-09-22 14:41 GMT

ಮಂಗಳೂರು, ಸೆ.22: ಮಾನವ ಬಂಧುತ್ವ ವೇದಿಕೆ ಕರ್ನಾಟಕ-ಬಂಟ್ವಾಳ ತಾಲೂಕು ಸಮಿತಿ ಹಾಗೂ ಸಂವಿಧಾನ ಆಂದೋಲನ ಸ್ವಾಗತ ಸಮಿತಿ ಬಂಟ್ವಾಳ ಇದರ ಆಶ್ರಯದಲ್ಲಿ ಸೆ.30ರಂದು ಪೂರ್ವಾಹ್ನ 10 ಗಂಟೆಗೆ ಬಿ.ಸಿ.ರೋಡ್‌ನ ಗಾಣದಪಡ್ಪು ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದಲ್ಲಿ ‘ಸಂವಿಧಾನ ಆಂದೋಲನ ’ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ವೇದಿಕೆಯ ರಾಜ್ಯ ಸಂಚಾಲಕ ವಿಲ್ಫ್ರೆಡ್ ಡಿಸೋಜ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರಜಾಪ್ರಭುತ್ವದ ವೌಲ್ಯಗಳು ನಾಶವಾಗುತ್ತಿರುವ ಪ್ರಸಕ್ತ ಕಾಲಘಟ್ಟದಲ್ಲಿ ಸ್ವಾತಂತ್ರ್ಯ, ಸಮಾನತೆ, ಸಹೋದರತೆಯನ್ನೊಳಗೊಂಡ ಸಂವಿಧಾನದ ಆಶಯಗಳನ್ನು ಪುನರಪಿ ತಿಳಿದುಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. ಈ ನಿಟ್ಟಿನಲ್ಲಿ ಸಂವಿಧಾನ ಆಂದೋಲನ ಕಾರ್ಯಕ್ರಮ ನಡೆಸಲಾಗುತ್ತಿದೆ. ಕಾರ್ಯಕ್ರಮಕ್ಕಾಗಿ ಈಗಾಗಲೇ ಪೂರ್ವಭಾವಿ ಸಿದ್ಧತೆಗಳಾಗಿವೆ. ಸುಮಾರುಒಂದು ಸಾವಿರ ಮಂದಿ ಸೇರುವ ನಿರೀಕ್ಷೆಯಿದೆ ಎಂದವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಿಐಟಿಯು ರಾಜ್ಯ ಉಪಾಧ್ಯಕ್ಷ ಕೆ.ಪ್ರಕಾಶ್ ಅವರು ‘ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ಸ್ಥಿತಿ’ ವಿಷಯದ ಕುರಿತು ಮಾತನಾಡಲಿದ್ದಾರೆ. ನಿವೃತ್ತ ಪೊಲೀಸ್ ಉಪ ಆಯುಕ್ತ ಬಿ.ಕೆ.ಶಿವರಾಮ್ ‘ಜಾತಿ ವ್ಯವಸ್ಥೆಯ ಅಮಾನವೀಯತೆ ಮತ್ತು ಶ್ರೀ ನಾರಾಯಣ ಗುರುಗಳ ಹೋರಾಟ’, ಹೈಕೋರ್ಟ್ ನ್ಯಾಯವಾದಿ ಅನಂತ ನಾಯಕ್ ಅವರು ‘ಭಾರತದ ಸಂವಿಧಾನ ಮತ್ತು ಸಾಮಾಜಿಕ ನ್ಯಾಯ’ ವಿಷಯದಲ್ಲಿ ವಿಚಾರ ಮಂಡಿಸುವರು. ಲೇಖಕ ಡಾ.ಕೇಶವ ಧರಣಿ ಮತ್ತು ನ್ಯಾಯವಾದಿ ಕುಂಞ ಅಬ್ದುಲ್ಲಾ ಅವರು ವಿಚಾರ ಮಂಡನೆಗೆ ಪ್ರತಿಕ್ರಿಯೆ ನೀಡಲಿದ್ದಾರೆ.

ಚಿತ್ರ ನಿರ್ಮಾಪಕ ಡಾ.ರಾಜಶೇಖರ್ ಕೋಟ್ಯಾನ್, ಲೇಖಕಿ ಬಿ.ಎಂ.ರೋಹಿಣಿ, ಮಾನವ ಬಂದುತ್ವ ವೇದಿಕೆ ರಾಜ್ಯ ಸಂಚಾಲಕ ರವೀಂದ್ರ ನಾಯ್ಕರ್, ಮಾನವ ಬಂಧುತ್ವ ವೇದಿಕೆಯ ವಲಯ ಸಂಚಾಲಕ ಕೆ.ಎಸ್.ಸತೀಶ್ ಕುಮಾರ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ವೇದಿಕೆಯ ಬಂಟ್ವಾಳ ತಾಲೂಕು ಸಮಿತಿ ಅಧ್ಯಕ್ಷ ಗೋಪಾಲ ಅಂಚನ್, ಜಿಲ್ಲಾ ಸಮಿತಿ ಸದಸ್ಯ ಸುದಾನಂದ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News