ಪುತ್ತೂರು: 10 ವರ್ಷದಿಂದ ವಿದ್ಯುತ್ ವಂಚಿತ ಮನೆಗೆ ಬೆಳಕು ನೀಡಿದ ಎಸ್‍ಡಿಪಿಐ

Update: 2018-09-22 14:44 GMT

ಪುತ್ತೂರು, ಸೆ. 22: ಪುತ್ತೂರು ನಗರಸಭಾ ವ್ಯಾಪ್ತಿಯಲ್ಲೇ ಇದ್ದರೂ ಕಳೆದ 10 ವರ್ಷಗಳಿಂದ ವಿದ್ಯುತ್ ಸೌಕರ್ಯದಿಂದ ವಂಚಿತವಾಗಿದ್ದ ಕುಟುಂಬ ವೊಂದಕ್ಕೆ ಸ್ಥಳೀಯ ನಗರಸಭಾ ನೂತನ ಸದಸ್ಯೆ ಫಾತಿಮತ್ ಝವುರ ಅವರ ನೇತೃತ್ವದಲ್ಲಿ ಎಸ್‍ಡಿಪಿಐ ಪಕ್ಷವು ಬೆಳಕು ನೀಡುವ ವ್ಯವಸ್ಥೆ ಮಾಡಿದೆ. 

ಬನ್ನೂರು 5ನೇ ವಾರ್ಡಿನಲ್ಲಿ ಬರುವ ಬನ್ನೂರು ಜನತಾ ಕಾಲನಿ ನಿವಾಸಿ ಶಶಿಕಾಂತ್ ಆಚಾರ್ಯ ಅವರ ಮನೆಗೆ ಮನೆ ನಂಬ್ರ ಇಲ್ಲದ ಕಾರಣಕ್ಕಾಗಿ ವಿದ್ಯುತ್ ಸಂಪರ್ಕ ಸಿಕ್ಕಿರಲಿಲ್ಲ. ಇದರಿಂದಾಗಿ ಅವರು ಎಣ್ಣೆ ದೀಪದ ಮೂಲಕವೇ ಕತ್ತಲನ್ನು ಕಳೆಯುತ್ತಿದ್ದರು. ಕಳೆದ ನಗರಸಭಾ ಚುನಾವಣೆಯ ವೇಳೆ ಮತಕೇಳಲು ಹೋಗಿದ್ದ ಎಸ್‍ಡಿಪಿಐ ಕಾರ್ಯಕರ್ತರ ಮುಂದೆಯೂ ಅವರು ವಿದ್ಯುತ್ ಸಮಸ್ಯೆಯನ್ನು ಹೇಳಿಕೊಂಡಿದ್ದರು. ಆ ವೇಳೆ ಎಸ್‍ಡಿಪಿಐ ಕಾರ್ಯಕರ್ತರು ಈ ವಾರ್ಡಿನಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಗೆಲುವು ಸಾಧಿಸಿದಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡುವ ಭರವಸೆ ನೀಡಿದ್ದರು.

ವಾರ್ಡಿನಲ್ಲಿ ಸಿಕ್ಕಿದ ಜಯದ ಹಿನ್ನಲೆಯಲ್ಲಿ ಇದೀಗ ಎಸ್‍ಡಿಪಿಐ ಕಾರ್ಯಕರ್ತರು ಅವರ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡುವ ಮೂಲಕ ನೀಡಿದ ಭರವಸೆ ಈಡೇರಿಸಿದ್ದಾರೆ.

ಶಶಿಕಾಂತ್ ಅವರ ಮನೆಗೆ ಎಸ್‍ಡಿಪಿಐ ಪಕ್ಷ ಕಲ್ಪಿಸಿಕೊಟ್ಟಿರುವ ಈ ವಿದ್ಯುತ್ ಸಂಪರ್ಕ ವ್ಯವಸ್ಥೆಯನ್ನು ಗೆಲುವು ಸಾಧಿಸಿರುವ ಎಸ್‍ಡಿಪಿಐ ಪಕ್ಷದ ನಗರಸಭಾ ಸದಸ್ಯೆ ಫಾತಿಮತ್ ಝವುರ ಅವರು ಶುಕ್ರವಾರ ಉದ್ಘಾಟಿಸಿದರು. ಸರ್ಕಾರದಿಂದ ಸಿಗುವ ಮೂಲ ಸೌಕರ್ಯಗಳನ್ನು ಬಡವರು,ಶೋಷಿತರು ಸೇರಿದಂತೆ ವಾರ್ಡಿನ ಎಲ್ಲಾ ವರ್ಗದ ಜನತೆಗೆ ಸಮಾನವಾಗಿ ಹಂಚುವ ಕೆಲಸ ಮಾಡುವುದಾಗಿ ಈ ಸಂದರ್ಭದಲ್ಲಿ ಅವರು ತಿಳಿಸಿದರು. 

ಎಸ್‍ಡಿಪಿಐ ಪುತ್ತೂರು ಕ್ಷೇತ್ರ ಸಮಿತಿಯ ಅಧ್ಯಕ್ಷ ಅಬೂಬಕ್ಕರ್ ಸಿದ್ದೀಕ್ ಅವರು ಮಾತನಾಡಿ ಬನ್ನೂರು 5ನೇ ವಾರ್ಡಿನಲ್ಲಿ ಎಸ್‍ಡಿಪಿಐ ಅಭ್ಯರ್ಥಿ ಗೆಲುವು ಸಾಧಿಸಿದ್ದು, ಈ ವಾರ್ಡಿನ ಮಂದಿಯ ಸಮಸ್ಯೆಗೆ ಸ್ಪಂದಿಸುವುದು ನಮ್ಮ ಕರ್ತವ್ಯ ಹಾಗೂ ಜವಾಬ್ದಾರಿ ಎಂದು ತಿಳಿದುಕೊಂಡು ಕಳೆದ 10 ವರ್ಷಗಳಿಂದ ವಿದ್ಯುತ್ ಸೌಲಭ್ಯದಿಂದ ವಂಚಿತರಾಗಿದ್ದ ಶಶಿಕಾಂತ್ ಅವರ ಮನೆಗೆ ಆ ವ್ಯವಸ್ಥೆಯನ್ನು ಪಕ್ಷದ ಕಾರ್ಯಕರ್ತರು ಸೇರಿಕೊಂಡು ಮಾಡಿಕೊಟ್ಟಿದ್ದೇವೆ. ಮುಂದೆ ಸರ್ಕಾರದ ಸವಲತ್ತುಗಳನ್ನು ವಾರ್ಡಿನ ಎಲ್ಲರಿಗೂ ತಲುಪಿಸುವ ಜತೆಗೆ ಕೆಲವೊಂದು ಕೆಲಸಗಳನ್ನು ನಾವೇ ಪಕ್ಷದ ವತಿಯಿಂದ ಮಾಡುವ ಮೂಲಕ ಈ ವಾರ್ಡನ್ನು ಮಾದರಿ ವಾರ್ಡನ್ನಾಗಿ ಮಾಡಲಿದ್ದೇವೆ ಎಂದರು. 

ಶಶಿಕಾಂತ್ ಅವರು ಮಾತನಾಡಿ ಚುನಾವಣೆ ವೇಳೆ ಮತ ಕೇಳಲು ಬಂದಿದ್ದ ಎಲ್ಲರಲ್ಲೂ ವಿದ್ಯುತ್ ಸಮಸ್ಯೆಯನ್ನು ಹೇಳಿಕೊಂಡಿದ್ದೆ. ಆದರೆ ಯಾರೂ ಸ್ಪಂದಿಸಿರಲಿಲ್ಲ. ಆದರೆ ಎಸ್‍ಡಿಪಿಐ ಪಕ್ಷದವರು ಗೆದ್ದರೆ ಮಾಡಿಕೊಡುತ್ತೇವೆ ಎಂದು ಹೇಳಿದ್ದರು. ಈಗ ಅವರು ನೀಡಿದ ಭರವಸೆಯನ್ನು ಈಡೇರಿಸಿದ್ದಾರೆ ಎಂದರು. 

ಎಸ್‍ಡಿಪಿಐ ಪುತ್ತೂರು ಕ್ಷೇತ್ರ ಸಮಿತಿಯ ಜತೆ ಕಾರ್ಯದರ್ಶಿ ಅಶ್ರಫ್ ಬಾವ,ಪುತ್ತೂರು ನಗರ ಸಮಿತಿಯ ಅಧ್ಯಕ್ಷ ಹಂಝ ಅಫ್ನಾನ್, ಬನ್ನೂರು ವಲಯಾಧ್ಯಕ್ಷ ಮೊಹಮ್ಮದ್ ಹುಸೇನ್,ಬನ್ನೂರು ವಲಯ ಕಾರ್ಯದರ್ಶಿ ಇಫಾಝ್,ರಫೀಕ್ ಬಾಂಬೆ, ಮೊಹಮ್ಮದ್ ಮೋನು ಮತ್ತಿತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News