'ಯಾವುದೇ ಆರೋಪ, ಪ್ರತಿಭಟನೆಗಳಿಗೆ ಎಸ್‍ಡಿಪಿಐ ಅಂಜುವುದಿಲ್ಲ'

Update: 2018-09-22 14:59 GMT

ಸುಳ್ಯ, ಸೆ. 22: ನಗರ ಪಂಚಾಯತ್ ಸದಸ್ಯ ಕೆ.ಎಸ್. ಉಮರ್ ವಿರುದ್ಧ ಕೆವಿಜಿ ಕ್ಯಾಂಪಸ್ ಹಿತರಕ್ಷಣಾ ವೇದಿಕೆಯವರು ವಿದ್ಯಾರ್ಥಿಗಳನ್ನು ಮತ್ತು ಸ್ಥಳೀಯ ರಾಜಕೀಯ ವ್ಯಕ್ತಿಗಳನ್ನು ಸೇರಿಸಿ ಸುಳ್ಯ ನಗರದಲ್ಲಿ ನಡೆಸಿದ ಮೆರವಣಿಗೆ ಮತ್ತು ಪ್ರತಿಭಟನಾ ಸಭೆಯಲ್ಲಿ ಇಲ್ಲ ಸಲ್ಲದ ಆರೋಪಗಳನ್ನು ಮಾಡಿದ್ದಾರೆ. ಸುಳ್ಯ ನಗರದಲ್ಲಿ ಆಗಿರುವ ಭೂ ಒತ್ತುವರಿ ಮತ್ತು ಅಕ್ರಮ ಕಟ್ಟಡಗಳ ವಿರುದ್ಧ ಎಸ್‍ಡಿಪಿಐ ಪಕ್ಷ ನಿರಂತರವಾಗಿ ಕಾನೂನು ಹೋರಾಟ ನಡೆಸುತ್ತದೆ. ಯಾವುದೇ ಆರೋಪ ಮತ್ತು ಪ್ರತಿಭಟನೆಗಳಿಗೆ ಅಂಜುವುದಿಲ್ಲ ಎಂದು ಸುಳ್ಯ ಎಸ್‍ಡಿಪಿಐ ಪಕ್ಷದ ಮುಖಂಡರು ಹೇಳಿದ್ದಾರೆ.

ಸುಳ್ಯದಲ್ಲಿ ನಡೆಸಿದ ಪತ್ರಿಕಾಗೋಷ್ಟಿಯಲ್ಲಿ ನಗರ ಪಂಚಾಯತ್ ಸದಸ್ಯ ಕೆ.ಎಸ್. ಉಮರ್ ಮಾತನಾಡಿ  ಕೆವಿಜಿಯವರ 6 ಎಕ್ರೆ 10 ಸೆಂಟ್ಸ್ ಸರಕಾರಿ ಭೂಮಿಗೆ ನಿರಾಕ್ಷೇಪಣೆಗೆ ಬಂದ ಅರ್ಜಿಯ ವಿಚಾರ ಪ್ರಸ್ತಾಪಕ್ಕೆ ಬಂದಾಗ ನಾನು ವಿರೋಧ ವ್ಯಕ್ತಪಡಿಸಿ, ಸಾಮಾನ್ಯ ಸಭೆಗೆ ತಂದು ಕಾನೂನು ಪ್ರಕಾರ ನೀಡಿ ಎಂದು ಹೇಳಿದ್ದೆ. 400 ಅಧಿಕ ಬಡವರು ನಿವೇಶನಕ್ಕೆ ಅರ್ಜಿ ಹಾಕಿದ್ದಾರೆ. ಅವರಿಗೆ ಮೊದಲು ನಿವೇಶನ ನೀಡಿ ಎಂದು ಆಗ್ರಹಿಸಿದ್ದೆ. ಅಲ್ಲದೇ ನಗರದಲ್ಲಿರುವ ಅಕ್ರಮ ಕಟ್ಟಡಗಳನ್ನು ಪರಿಶೀಲನೆ ಮಾಡಿ ಅದಕ್ಕೆ ಸರಿಯಾದ ತೆರಿಗೆ ವಿಧಿಸಿದರೆ 2 ಕೋಟಿಗೂ ಅಧಿಕ ತೆರಿಗೆ ನಗರ ಪಂಚಾಯತ್‍ಗೆ ಬರುತ್ತದೆ. ಇದರಿಂದ ನಗರದ ಅಭಿವೃದ್ದಿಗೆ ಸಮಸ್ಯೆ ಆಗುವುದಿಲ್ಲ. ಇದೇ ವಿಚಾರಕ್ಕೆ ನನ್ನ ವಿರುದ್ದ ಇಲ್ಲ ಸಲ್ಲದ ಆರೋಪ ಮತ್ತು ಪ್ರತಿಭಟನೆ ನಡೆಸಿದರು ಅಲ್ಲದೇ ಮಾನನಷ್ಟ ಮೊಕದ್ದಮೆ ಕೂಡ ಹಾಕಿದ್ದರು.

ಕೆವಿಜಿಯ ಸಂಸ್ಥೆಗೆ 6.10 ಎಕರೆ ಜಾಗವನ್ನು ಎನ್‍ಒಸಿ ಮಾಡಲು ಬಿಡದ ಪರಿಣಾಮ ಸಂಸ್ಥೆಯವರು ಮತ್ತು ರಾಜಕೀಯ ಪಕ್ಷದವರು ಸೇರಿಕೊಂಡು ಕ್ಯಾಂಪಸ್  ಹಿತರಕ್ಷಣಾ ವೇದಿಕೆ ರಚಿಸಿಕೊಂಡು ನನ್ನ ವಿರುದ್ದ ಪ್ರತಿಭಟನೆ ನಡೆಸಿದರು. ಇದೇ ಹಿತ ರಕ್ಷಣಾ ವೇದಿಕೆ 6 ವರ್ಷದ ಹಿಂದೆ ರಾಮಕೃಷ್ಣ ಭಟ್ ಅವರನ್ನು ಕೊಲೆ ಮಾಡಿದ ಸಂದರ್ಭ ಪ್ರತಿಭಟನೆ ಏಕೆ ಮಾಡಿಲ್ಲ. ಮೊನ್ನೆ ಅಕ್ಷತಾ ಎಂಬ ವಿಧ್ಯಾರ್ಥಿನಿಯನ್ನು ಸಹ ವಿದ್ಯಾರ್ಥಿ ಕೊಲೆ ಮಾಡಿದಾಗ ಯಾಕೆ ಹೋರಾಟ ಮಾಡಿಲ್ಲ. ಆ ಸಂದರ್ಭದಲ್ಲಿ ಮಾನ ಹಾನಿ ಆಗಿರಲಿಲ್ವ. ಅವರ ಹಿತರಕ್ಷಣಾ ವೇದಿಕೆಯವರು ಎಲ್ಲಿ ಹೋಗಿದ್ದರು ಎಂದು ಪ್ರಶ್ನಿಸಿದ ಅವರು ನನ್ನ ವಿರುದ್ಧ ಆರೋಪ ಮಾಡಲು ಯಾವ ವಿಷಯವೂ ಸಿಗದೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರು ನನ್ನ ವಿರುದ್ಧ ಮಾತನಾಡುತ್ತಿದ್ದಾರೆ ಎಂದರು.

ಈಗಾಗಲೇ ನನಗೆ 4.25 ಲಕ್ಷ ರೂಗಳ ಮಾನನಷ್ಟ ಮೊಕದ್ದಮೆ ಹಾಕಿದ್ದಾರೆ. ಅದರಲ್ಲಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷರಿಗೂ ಪಾಲು ಇದೆ. ನನ್ನ ಹೋರಾಟ ಏನಿದ್ದರೂ ಅಕ್ರಮಗಳ ವಿರುದ್ಧ. ಅದನ್ನು ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ. ಯಾದ ಬೆದರಿಗೆಗೆ ಜಗ್ಗುವುದಿಲ್ಲ. ಈ ಅಕ್ರಮಗಳ ವಿರುದ್ಧ ಲೋಕಾಯುಕ್ತ, ಎಸಿಬಿ, ಹೈಕೋರ್ಟ್ ಮೆಟ್ಟಿಲೇರುತ್ತೇನೆ. ಅಕ್ರಮ ನಡೆಸದವರು ಹೆದುರುವ ಅಗತ್ಯ ಇಲ್ಲ. ಗಾಜಿನ ಮನೆಯಲ್ಲಿ ಕುಳಿತು ಕಲ್ಲು ಬಿಸಾಡುವಾಗ ಯೋಚನೆ ಮಾಡುವುದು ಒಳಿತು ಎಂದು ಹೇಳಿದ ಅವರು ಸುಳ್ಯಕ್ಕೆ ಕುರುಂಜಿ ಅವರ ಕೊಡುಗೆ ಅಪಾರ. ಅವರನ್ನು ಗೌರವಿಸುತ್ತೇನೆ. ಅವರ ಮೇಲೆ ನನ್ನ ವೈಯಕ್ತಿಕ ದ್ವೇಷ ಇಲ್ಲ. ಆದರೆ ಕಾನೂನು ವಿಷಯ ಬಂದಾಗ ಎಲ್ಲರಿಗೂ ಒಂದೇ ಕಾನೂನು. ನನ್ನ ಮೇಲೆ ಹಾಕಿದ ಮಾನನಷ್ಟ ಹಾನಿಯ ಹಣವನ್ನು ಅವರಿಗೆ ನೀಡುತ್ತೇನೆ. ಆದರೆ ನನ್ನ ಕೈಯಿಂದ ಕೊಡುವಷ್ಟ ಹಣ ನನ್ನಲ್ಲಿ ಇಲ್ಲ. ಸಾರ್ವಜನಿಕರಲ್ಲಿ ಭಿಕ್ಷೆ ಬೇಡಿ 4.25 ಲಕ್ಷ ಅವರಿಗೆ ನೀಡುತ್ತೇನೆ ಎಂದರು.

ನಗರ ವ್ಯಾಪ್ತಿಯಲ್ಲಿ ನಡೆದಂತಹ ಎಲ್ಲಾ ಭೂ ಒತ್ತುವರಿ ಹಾಗೂ ಇತರ ಇಲಾಖೆಗಳಿಗೆ ಮಂಜೂರುಗೊಂಡ ಸ್ಥಳಗಳನ್ನು ಖಾಸಗಿಯವರು ಕಬಳಿಸಿರುವುದು ಕಂಡುಬಂದಿದೆ. ಇದರ ವಿರುದ್ದ ವ್ಯಕ್ತಿಗಳ ಮೇಲೆ ಮತ್ತು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ವಿರುದ್ದ ಕಾನೂನು ರೀತಿಯ ನಡೆಸಲಾಗುವುದು. ಸರಕಾರಿ ಜಾಗದಲ್ಲಿ ಅಕ್ರಮ ಕಟ್ಟಡ ಕಟ್ಟಿದ್ದರೆ ಸರಕಾರ ಎಷ್ಟು ಬೇಕಾದರೂ ತೆರಿಗೆ ವಿಧಿಸಬಹುದು. ಸುಳ್ಯ ನಗರ ಪಂಚಾಯತ್‍ನ ಅಧಿಕಾರಿಗಳು ಅಕ್ರಮದಲ್ಲಿ ಶಾಮೀಲಾಗಿದ್ದಾರೆ. ನ.ಪಂ ವಿರುದ್ಧ ಕೂಡ ಕಾನೂನು ಹೋರಾಟ ನಡೆಸುತ್ತೇನೆ. ಸುಳ್ಯ ನಗರದಲ್ಲಿ ಸರಕಾರಿ ಇಲಾಖೆಗಳಿಗೆ ಕಾಯ್ದಿರಿಸಿದ ಹಲವು ಎಕರೆ ಜಾಗಗಳು ಕಣ್ಮರೆ ಆಗಿದೆ. ಸಬ್ ಜೈಲು ಸ್ಥಾಪನೆಗೆ 3.67 ಏಕರೆ ಜಾಗವನ್ನು ಸರಕಾರ ಕಾಯ್ದಿರಿಸಿದೆ. ಈ ಜಾಗ ಈಗ ಎಲ್ಲಿದೆ. ಇಂತಹ ಹಲವು ಸರಕಾರಿ ಜಾಗಗಳು ಒತ್ತುವರಿ ಆಗಿದೆ. ಬಡವರು ಮನೆ ಕಟ್ಟಿಕೊಂಡು ವಾಸ ಮಾಡುತ್ತಿದ್ದರೆ ಅದನ್ನು ಕಂದಾಯ ಇಲಾಖೆಯ ಅಧಿಕಾರಿ ಕೆಡುವುತ್ತಿದ್ದಾರೆ. ಇಂತಹ ಸರಕಾರಿ ಜಾಗಗಳ ಗಡಿ ಗುರುತುಗಳನ್ನು ಕೂಡಲೇ ಮಾಡಬೇಕು ಎಂದು ಕೆ.ಎಸ್. ಉಮರ್ ಒತ್ತಾಯಿಸಿದರು.

ಎಸ್‍ಡಿಪಿಐ ಸುಳ್ಯ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ರಫೀಕ್ ಎಂ.ಎ ಮಾತನಾಡಿ ನಗರ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಕೆವಿಜಿಯವರ 6 ಎಕ್ರೆ 10 ಸೆಂಟ್ಸ್ ಸರಕಾರಿ ಭೂಮಿಗೆ ನಿರಾಕ್ಷೇಪಣೆಗೆ ಬಂದ ಅರ್ಜಿಯ ವಿಚಾರ ಪ್ರಸ್ತಾಪಕ್ಕೆ ಬಂದಾಗ ನಗರ ವ್ಯಾಪ್ತಿಯಲ್ಲಿ ಈಗಾಗಲೇ ಮನೆ ನಿವೇಶನಕ್ಕಾಗಿ 400 ಕ್ಕೂ ಮಿಕ್ಕಿ ಜನರು ಅರ್ಜಿಗಳನ್ನು ಸಲ್ಲಿಸಿದ್ದಾರೆ. ಅವರಿಗೆ ಮೊದಲು ನಿವೇಶನ ನೀಡಿದ ಬಳಿಕ ಈ ಅರ್ಜಿಯ ಬಗ್ಗೆ ಚರ್ಚಿಸೋಣ. ಮತ್ತು ನಗರ ವ್ಯಾಪ್ತಿಯಲ್ಲಿರುವ ಅಕ್ರಮ ಕಟ್ಟಡಗಳನ್ನು ಪರಿಶೀಲನೆ ನಡೆಸಿ ಸರಿಯಾದ ತೆರಿಗೆ ವಿಧಿಸಬೇಕು ಎಂದು ಉಮರ್ ಹೇಳಿದ್ದರು ಅವರು ಅಭಿವೃದ್ದಿಯ ದೃಷ್ಟಿಯಿಂದ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದರೆ ಅದನ್ನು ತಿರುಚಿ ಅವರನ್ನು ತೇಜೋವಧೆ ಮಾಡುವುದು ಖಂಡನೀಯ. ನಗರದ ಅಭಿವೃದ್ದಿಯ ದೃಷ್ಟಿಯಿಂದ ಭೂ ಒತ್ತುವರಿ ಮತ್ತು ಅಕ್ರಮ ಕಟ್ಟಡಗಳ ವಿರುದ್ದ ಮಾಡುವ ಹೋರಾಟಗಳಿಗೆ ಎಸ್‍ಡಿಪಿಐ ಬೆಂಬಲ ನೀಡಲಿದೆ ಎಂದು ಹೇಳಿದರು.

ಪತ್ರಿಕಾಗೋಷ್ಟಿಯಲ್ಲಿ ಎಸ್‍ಡಿಪಿಐ ಮುಖಂಡರಾದ ಎನ್.ಕೆ. ಮುಸ್ತಫಾ, ಬಾಬು ಎನ್. ಸವಣೂರು ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News