ಸೆ. 27ರಿಂದ ವಿಶ್ವ ಪ್ರವಾಸೋದ್ಯಮ ದಿನಾಚರಣೆ: ಈ ಬಾರಿ ‘ದ್ರಾಕ್ಷಾರಸ ಉತ್ಸವ’ದ ಆಕರ್ಷಣೆ

Update: 2018-09-22 15:14 GMT

ಉಡುಪಿ, ಸೆ.21: ಜಿಲ್ಲಾಡಳಿತ, ಉಡುಪಿ ಪ್ರವಾಸೋದ್ಯಮ ಇಲಾಖೆ, ಮಲ್ಪೆ ಅಭಿವೃದ್ಧಿ ಸಮಿತಿ, ಕೇಂದ್ರ ಪ್ರವಾಸೋದ್ಯಮ ಮಂತ್ರಾಲಯ ಇವರ ಸಹಯೋಗದೊಂದಿಗೆ ಸೆ.27ರಿಂದ 30ರವರೆಗೆ ಜಿಲ್ಲೆಯಲ್ಲಿ ‘ಪರ್ಯಟನ ಪರ್ವ’ಹಾಗೂ ವಿಶ್ವ ಪ್ರವಾಸೋದ್ಯಮ ದಿನಾಚರಣೆಯನ್ನು ಆಚರಿಸಲಾಗುತ್ತದೆ.

‘ಪ್ರವಾಸೋದ್ಯಮ ಹಾಗೂ ಡಿಜಿಟಲ್ ರೂಪಾಂತರ’ ಎಂಬ ಸಂದೇಶ ದೊಂದಿಗೆ ವಿಶ್ವ ಪ್ರವಾಸೋದ್ಯಮ ದಿನಾಚರಣೆಯನ್ನು ಮಲ್ಪೆ ಬೀಚ್‌ನಲ್ಲಿ ಆಚರಿಸಲಾ ಗುತ್ತಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕಿ ಅನಿತಾ ಭಾಸ್ಕರ್ ತಿಳಿಸಿದ್ದಾರೆ. ಈ ಬಾರಿಯ ವಿಶೇಷವೆಂದರೆ ಮಲ್ಪೆ ಬೀಚ್‌ನಲ್ಲಿ ನಡೆಯುವ ‘ದ್ರಾಕ್ಷಾರಸ ಉತ್ಸವ’. ಪ್ರತಿದಿನ ಅಪರಾಹ್ನ 2:00ರಿಂದ ರಾತ್ರಿ 10:30ರವರೆಗೆ ನಡೆಯುವ ಈ ಉತ್ಸವದಲ್ಲಿ 21 ವರ್ಷಕ್ಕೆ ಮೇಲ್ಪಟ್ಟವರು ಮಾತ್ರ ಭಾಗವಹಿಸಲು ಅವಕಾಶವಿದೆ.

ವಿಶ್ವ ಪ್ರವಾಸೋದ್ಯಮ ದಿನಾಚರಣೆಯನ್ನು ಸೆ.27ರ ಗುರುವಾರ ಸಂಜೆ 6:30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲ ಉದ್ಘಾಟಿಸಲಿದ್ದು, ಶಾಸಕ ಕೆ.ರಘುಪತಿ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ. ಅಂದು ಬೀಚ್‌ನಲ್ಲಿ ಆಹಾರ ಮೇಳ, ವೈನ್ ಉತ್ಸವ, ಯಕ್ಷಗಾನ ಕೇಂದ್ರದ ಸಂಜೀವ ಸುವರ್ಣರಿಂದ ಯಕ್ಷಗಾನ ಬ್ಯಾಲೆ ಹಾಗೂ ನೃತ್ಯ ಕಾರ್ಯಕ್ರಮಗಳಿವೆ. ಬೆಳಗ್ಗೆ 9:30ರಿಂದ ಬೀಚ್ ವಾಲಿಬಾಲ್ ಅಲ್ಲಿ ನಡೆಯಲಿದೆ.

ನಂತರ ಸೆ.30ರವರೆಗೆ ಪ್ರತಿದಿನ ಸಂಜೆ 6:30ರಿಂದ 9:30ರವರೆಗೆ ಮಲ್ಪೆ ಬೀಚ್‌ನಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಪ್ರವಾಸೋದ್ಯಮ ದಿನಾಚರಣೆ ನಡೆಯಲಿದೆ. ಇದರೊಂದಿಗೆ ಕಾಪು ಬೀಚ್, ಪಡುಬಿದ್ರಿ ಬೀಚ್, ಕುಂದಾಪುರ-ಕೋಡಿ ಬೀಚ್, ಯುವ ಮೆರಿಡಿಯನ್ ಕೋಟೇಶ್ವರಗಳಲ್ಲಿ ಸರ್ಫಿಂಗ್, ಸೈಕ್ಲಿಂಗ್, ರಿಮೋಟ್ ಕಂಟ್ರೋಲ್ ಎರ್‌ಶೋ ನಡೆಯಲಿದೆ ಎಂದು ಅನಿತಾ ಭಾಸ್ಕರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News