ಮೂಡಬಿದಿರೆ: ಎಕ್ಸಲೆಂಟ್ ಕಾಲೇಜಿನಲ್ಲಿ ಹಿಂದಿ ದಿನಾಚರಣೆ

Update: 2018-09-22 15:46 GMT

ಮೂಡಬಿದಿರೆ, ಸೆ,22: ಸ್ವತಂತ್ರ ಭಾರತದಲ್ಲಿ ಭಾಷಾವಾರು ಪ್ರಾಂತ್ಯಗಳಿದ್ದರೂ ಬಹುಸಂಖ್ಯಾತ ರಾಜ್ಯಗಳಲ್ಲಿ ಮಾತನಾಡುವ ಭಾಷೆ ಹಿಂದಿ. ಹೀಗಾಗಿ ರಾಷ್ಟ್ರಭಾಷೆಯಾದ ಹಿಂದಿ ಇಡೀ ಭಾರತದಲ್ಲಿ ಪ್ರಮುಖ ಭಾಷೆಯಾಗಿ ಸ್ಥಾನವನ್ನು ಪಡೆದಿದೆ ಮತ್ತು ಭಾರತದ ಯಾವ ಭಾಗಕ್ಕೆ ಹೋದರೂ ಹಿಂದಿಯನ್ನು ಬಲ್ಲವರಾದರೆ ಜೀವಿಸಬಹುದಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಹಿಂದಿ ಭಾಷೆಯ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಎಂದು ಜೈನ ಪ್ರೌಢ ಶಾಲೆ ಮೂಡಬಿದಿರೆಯ ಅಧ್ಯಾಪಕ ರಾಯಿರಾಜಕುಮಾರ್ ಹೇಳಿದರು. 

 ಕಲ್ಲಬೆಟ್ಟುವಿನಲ್ಲಿರುವ ಎಕ್ಸಲೆಂಟ್ ಕಾಲೇಜಿನಲ್ಲಿ "ಹಿಂದಿ ದಿನಾಚರಣೆ" ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಸಮಾರಂಭದ ಅದ್ಯಕ್ಷತೆ ವಹಿಸಿದ ವಿದ್ಯಾಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್ ಮಾತನಾಡಿ ನಮ್ಮ ಸಂಸ್ಥೆಯಲ್ಲಿ ಹಿಂದಿ ಭಾಷೆಗೆ ಉತ್ತಮ ಪ್ರೋತ್ಸಾಹ ನೀಡುತ್ತಿದ್ದು, ಭವಿಷ್ಯದಲ್ಲಿ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಹೆಚ್ಚಿನ ಸಾಧನೆಗೈಯಲಿ ಎಂದು ಹಾರೈಸಿದರು. ಪ್ರಾಂಶುಪಾಲ ಪ್ರದೀಪ್‍ಕುಮಾರ್ ಶೆಟ್ಟಿ ಮಾತನಾಡಿ ಹಿಂದಿ ಭಾಷೆಯಲ್ಲಿ ಅತ್ಯುತ್ತಮ ಅಂಕಗಳಿಕೆಗೆ ಅವಕಾಶವಿದ್ದು ಸತತ ಪರಿಶ್ರಮದಿಂದ ಸಾಧನೆ ಮಾಡುವಂತೆ ಕರೆ ನೀಡಿದರು. ಪ್ರೌಢಶಾಲಾ ಮುಖ್ಯೋಪಾಧ್ಯಾಯ ಗುರುಪ್ರಸಾದ್ ಶೆಟ್ಟಿ ಸಾಂದರ್ಭಿಕವಾಗಿ ಮಾತನಾಡಿ ಭಾಷೆ ಹಾಗೂ ವ್ಯಾವಹಾರಿಕ ಮಾಧ್ಯಮದ ಮಹತ್ವ ತಿಳಿಸಿದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ರಚಿತವಾದ ಭಿತ್ತಿಪತ್ರಿಕೆಯನ್ನು ಉದ್ಘಾಟಿಸಲಾಯಿತು. ವಿದ್ಯಾಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹಿಂದಿ ಭಾಷಾ ವಿಭಾಗ ಮುಖ್ಯಸ್ಥ ಶ್ರೀ ವಿನಾಯಕ ಜೋಗ್ ಸ್ವಾಗತಿಸಿದರು. ಕುಮಾರಿ ಝೆಬಾ ಕಾರ್ಯಕ್ರಮ ನಿರೂಪಿಸಿದರು, ಹಿಂದಿ ಭಾಷಾ ಅಧ್ಯಾಪಕಿ ವೃಂದಾ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News