ಭಾರತದ ಅಹಂಕಾರದ ಪ್ರತಿಕ್ರಿಯೆಯಿಂದ ನಿರಾಶೆ: ಇಮ್ರಾನ್

Update: 2018-09-22 15:55 GMT

ಇಸ್ಲಾಮಾಬಾದ್, ಸೆ. 22: ಈ ತಿಂಗಳ ಕೊನೆಯಲ್ಲಿ ನ್ಯೂಯಾರ್ಕ್‌ನಲ್ಲಿ ನಡೆಯಲು ನಿಗದಿಯಾಗಿದ್ದ ವಿದೇಶ ಸಚಿವರ ನಡುವಿನ ಸಭೆಯನ್ನು ರದ್ದುಪಡಿಸಿರುವ ಭಾರತದ ಕ್ರಮವನ್ನು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಶನಿವಾರ ಟೀಕಿಸಿದ್ದಾರೆ.

‘‘ಶಾಂತಿ ಮಾತುಕತೆಯನ್ನು ಪುನರಾರಂಭಿಸುವ ನನ್ನ ಕರೆಗೆ ಭಾರತ ನೀಡಿರುವ ಅಹಂಕಾರದ ಮತ್ತು ನಕಾರಾತ್ಮಕ ಪ್ರತಿಕ್ರಿಯೆಯಿಂದ ನಿರಾಶೆಯಾಗಿದೆ. ಆದರೆ ಇದೇನೂ ಹೊಸತಲ್ಲ. ಸಣ್ಣ ವ್ಯಕ್ತಿಗಳು ದೊಡ್ಡ ಅಧಿಕಾರದಲ್ಲಿರುವುದನ್ನು ನನ್ನ ಬುದುಕಿನಲ್ಲಿ ನೋಡುತ್ತಲೇ ಬಂದಿದ್ದೇನೆ. ದೊಡ್ಡ ಮಟ್ಟದಲ್ಲಿ ಯೋಚಿಸುವ ದೂರದೃಷ್ಟಿ ಅವರಲ್ಲಿಲ್ಲ’’ ಎಂದು ಇಂಗ್ಲಿಷ್ ಮತ್ತು ಉರ್ದು ಭಾಷೆಗಳಲ್ಲಿ ಮಾಡಿದ ಟ್ವೀಟ್‌ಗಳಲ್ಲಿ ಅವರು ಹೇಳಿದ್ದಾರೆ.

ಪಾಕಿಸ್ತಾನದಲ್ಲಿ ನೆಲೆಸಿರುವ ಗುಂಪುಗಳು ಕಾಶ್ಮೀರದಲ್ಲಿ ಭದ್ರತಾ ಪಡೆಗಳನ್ನು ಕೊಲ್ಲುತ್ತಿವೆ ಹಾಗೂ ಓರ್ವ ಭಯೋತ್ಪಾದಕ ಮತ್ತು ಭಯೋತ್ಪಾದನೆಯನ್ನು ವೈಭವೀಕರಿಸುವ 20 ಅಂಚೆ ಚೀಟಿಗಳ ಸರಣಿಯೊಂದನ್ನು ಪಾಕಿಸ್ತಾನ ಬಿಡುಗಡೆ ಮಾಡುತ್ತಿದೆ ಎಂದು ಆರೋಪಿಸಿ, ವಿದೇಶ ವ್ಯವಹಾರಗಳ ಸಚಿವೆ ಸುಶ್ಮಾ ಸ್ವರಾಜ್ ಮತ್ತು ಪಾಕಿಸ್ತಾನದ ವಿದೇಶ ಸಚಿವ ಶಾ ಮೆಹ್ಮೂದ್ ಕುರೇಶಿ ನಡುವೆ ನ್ಯೂಯಾರ್ಕ್‌ನಲ್ಲಿ ನಡೆಯಲು ಪ್ರಸ್ತಾಪಿಸಲಾಗಿದ್ದ ಸಭೆಯನ್ನು ಭಾರತ ಶುಕ್ರವಾರ ರದ್ದುಪಡಿಸಿರುವುದನ್ನು ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News