ಗೋಲ್ಡನ್ ಗ್ಲೋಬ್ ಸ್ಪರ್ಧೆ: ಗಾಯಾಳು ನಾವಿಕನ ರಕ್ಷಣೆಗೆ ನೌಕಾಪಡೆಯ ಪ್ರಯತ್ನ

Update: 2018-09-22 16:28 GMT

ಕೊಚ್ಚಿ, ಸೆ.22: ಗೋಲ್ಡನ ಗ್ಲೋಬ್ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ವೇಳೆ ದಕ್ಷಿಣ ಹಿಂದು ಮಹಾಸಾಗರದಲ್ಲಿ ಭಾರೀ ಚಂಡಮಾರುತ ಹಾಯಿನೌಕೆಗೆ ಅಪ್ಪಳಿಸಿದ ಬಳಿಕ ಗಾಯಗೊಂಡಿರುವ ತನ್ನ ಅಧಿಕಾರಿಯನ್ನು ರಕ್ಷಿಸಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಿರುವುದಾಗಿ ಭಾರತೀಯ ನೌಕಾಪಡೆಯು ಶನಿವಾರ ತಿಳಿಸಿದೆ.

 ಭಾರತವನ್ನು ಪ್ರತಿನಿಧಿಸಿದ್ದ ನೌಕಾಪಡೆಯ ಕಮಾಂಡರ್ ಅಭಿಲಾಷ್ ಟೋಮಿ ಅವರು ಶುಕ್ರವಾರ ಸ್ವದೇಶಿ ನಿರ್ಮಿತ ‘ಥುರಿಯಾ’ ಹಾಯಿನೌಕೆಯನ್ನು ಚಲಾಯಿಸುತ್ತಿದ್ದಾಗ ಗಂಟೆಗೆ 130 ಕಿ.ಮೀ.ವೇಗದಿಂದ ಬೀಸುತ್ತಿದ್ದ ಭಾರೀ ಗಾಳಿ ಮತ್ತು 10 ಮೀ.ಗಳೆಷ್ಟತ್ತರದ ಅಲೆಗಳಿಂದಾಗಿ ಅದರ ಸ್ತಂಭವು ಮುರಿದು ಬಿದ್ದ ಪರಿಣಾಮ ಅವರ ಬೆನ್ನಿಗೆ ತೀವ್ರ ಏಟು ಬಿದ್ದಿತ್ತು. ಈ ಸಂದರ್ಭದಲ್ಲಿ ಕಳೆದ 84 ದಿನಗಳಲ್ಲಿ 10,500 ನಾಟಿಕಲ್ ಮೈಲಿಗಳಿಗೂ ಅಧಿಕ ದೂರವನ್ನು ಕ್ರಮಿಸಿದ್ದ ಅವರು ಮೂರನೇ ಸ್ಥಾನದಲ್ಲಿದ್ದರು. ಭೂಮಿಯ ಸುತ್ತ 30,000 ಮೈಲು ಪ್ರದಕ್ಷಿಣೆಯ ಈ ಕಠಿಣ ಸ್ಪರ್ಧೆಯು ಜು.1ರಂದು ಆರಂಭಗೊಂಡಿತ್ತು. ಇದು ಅವರ ಎರಡನೇ ಬಾರಿಯ ಏಕಾಂಗಿ ಸ್ಪರ್ಧೆಯಾಗಿತ್ತು.

ಹಿಂದು ಮಹಾಸಾಗರದಲ್ಲಿ ಕಾರ್ಯಾಚರಿಸುತ್ತಿರುವ ಐಎನ್‌ಎಸ್ ಸಾತ್ಪುರಾ ನೌಕೆಯನ್ನು ರಕ್ಷಣಾ ಕಾರ್ಯಕ್ಕೆ ರವಾನಿಸಲಾಗಿದೆ ಎಂದು ರಕ್ಷಣಾ ವಕ್ತಾರರು ಇಲ್ಲಿ ತಿಳಿಸಿದರು. ಟೋಮಿ ಆಸ್ಟ್ರೇಲಿಯಾದ ಪರ್ತ್‌ನಿಂದ ಸುಮಾರು 1,900 ನಾಟಿಕಲ್ ಮೈಲು ದೂರದಲ್ಲಿದ್ದು,ಕ್ಯಾನ್‌ಬೆರಾದಲ್ಲಿರುವ ಆಸ್ಟ್ರೇಲಿಯನ್ ರಕ್ಷಣಾ ಸಮನ್ವಯ ಕೇಂದ್ರವು ಆಸ್ಟ್ರೇಲಿಯದ ರಕ್ಷಣಾ ಇಲಾಖೆ ಮತ್ತು ಭಾರತೀಯ ನೌಕಾ ಪಡೆ ಸೇರಿದಂತೆ ಹಲವಾರು ಏಜೆನ್ಸಿಗಳೊಂದಿಗೆ ರಕ್ಷಣಾ ಕಾರ್ಯಾಚರಣೆಯನ್ನು ಯೋಜಿಸುತ್ತಿದೆ ಎಂದರು.

ಟೋಮಿ(39) 2013ರಲ್ಲಿ ಭೂ ಪ್ರದಕ್ಷಿಣೆ ಮಾಡಿದ್ದ ಮೊದಲ ಭಾರತೀಯನಾಗಿದ್ದು, ಈ ಬಾರಿ ಗೋಲ್ಡನ್ ಗ್ಲೋಬ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಏಕೈಕ ಭಾರತೀಯನಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News