‘ರಾಜ್ಯವನ್ನು ಹೊತ್ತಿಸುತ್ತೇವೆ’, ‘ಜಿಲ್ಲೆಗೆ ಬೆಂಕಿ ಹಾಕ್ತೇವೆ’ ಎಂದವರಿಂದ ಪಾಠ ಕಲಿಯಬೇಕಿಲ್ಲ'

Update: 2018-09-22 16:45 GMT

ಮಂಗಳೂರು, ಸೆ.22: ಕಲ್ಲಡ್ಕದಲ್ಲಿ ಈ ಹಿಂದೆ ನಡೆದ ಪ್ರತಿಭಟನಾ ಕಾರ್ಯಕ್ರಮದಲ್ಲಿ ‘ರಾಜ್ಯವನ್ನು ಹೊತ್ತಿಸುತ್ತೇವೆ’ ಎಂದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಕೊಣಾಜೆಯ ಪ್ರತಿಭಟನಾ ಸಭೆಯೊಂದರಲ್ಲಿ ‘ಜಿಲ್ಲೆಗೆ ಬೆಂಕಿ ಹಾಕ್ತೇವೆ’ ಎಂದ ಸಂಸದ ನಳಿನ್ ಕುಮಾರ್ ಕಟೀಲ್ ಅವರಿಂದ ನಾವು ಪಾಠ ಕಲಿಯಬೇಕಾಗಿಲ್ಲ ಎಂದು ಜೆಡಿಎಸ್ ದ.ಕ. ಜಿಲ್ಲಾಧ್ಯಕ್ಷ ಮುಹಮದ್ ಕುಂಞಿ ವಿಟ್ಲ ಹೇಳಿದ್ದಾರೆ.

ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿಯ ಹೇಳಿಕೆಯ ವಿರುದ್ಧ ಬಿಜೆಪಿ ಪ್ರತಿಭಟನೆ ಹಮ್ಮಿಕೊಂಡ ಬಗ್ಗೆ ಜೆಡಿಎಸ್ ದ.ಕ. ಜಿಲ್ಲಾ ಘಟಕದ ವತಿಯಿಂದ ಶನಿವಾರ ಪಕ್ಷದ ಜಿಲ್ಲಾ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ರಾಜ್ಯದ ಜೆಡಿಎಸ್- ಕಾಂಗ್ರೆಸ್ ಸಮ್ಮಿಶ್ರ ಸರಕಾರವನ್ನು ಹೇಗಾದರೂ ಮಾಡಿ ಉರುಳಿಸುವ ಪ್ರಯತ್ನವಾಗಿ ಬಿಜೆಪಿ ಇಂತಹ ಪ್ರತಿಭಟನೆಯನ್ನು ನಡೆಸುತ್ತಿದೆ ಎಂದ ಮುಹಮ್ಮದ್ ಕುಂಞಿ, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ 3 ತಿಂಗಳಲ್ಲಿ ರೈತರ ಸಾಲ ಮನ್ನಾ ಮಾಡಿದ್ದಾರೆ. ಪ್ರತಿಯೊಂದು ಜಿಲ್ಲೆಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಅಡಿಕೆ ಕೊಳೆ ರೋಗ ನಿಯಂತ್ರಣಕ್ಕೆ 582 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ. ಇಷ್ಟು ಕಡಿಎ ಅವದಿಯಲ್ಲಿ ಇಂತಹ ಕೆಲಸವನ್ನು ಕೇಂದ್ರ ಸರಕಾರ ಮಾಡಿದೆಯೇ ಎಂದು ಪ್ರಶ್ನಿಸಿದರು.

ಶಾಸಕ ಡಾ. ವೈ. ಭರತ್ ಶೆಟ್ಟಿ ಇಂದು ಉನ್ನತ ಸ್ಥಾನ ಪಡೆದಿದ್ದರೆ ಅದು ಎಚ್.ಡಿ. ಕುಮಾರಸ್ವಾಮಿಯ ಕೃಪಾ ಕಟಾಕ್ಷದಿಂದ. ಈ ಹಿಂದೆ ಜೆಡಿಎಸ್‌ನಲ್ಲಿದ್ದ ಡಾ. ಭರತ್ ಶೆಟ್ಟಿ ಅವರನ್ನು ರಾಜಕೀಯವಾಗಿ ಮೇಲಕ್ಕೆ ಬರಲು ಎಚ್.ಡಿ. ಕುಮಾರಸ್ವಾಮಿ ಸಹಕರಿಸಿದ್ದರು. ಹಾಗಿರುವಾಗ ಅವರು ಈಗ ಮುಖ್ಯಮಂತ್ರಿಯ ವಿರುದ್ಧ ಮಾತನಾಡುವುದು ಎಷ್ಟು ಸರಿ ಎಂದು ಎಂದು ಮಹಮದ್ ಕುಂಞಿ ಪ್ರಶ್ನಿಸಿದರು. ಮುಖ್ಯಮಂತ್ರಿ ಕುಮಾರಸ್ವಾಮಿಗೆ ಆಡಳಿತ ನಡೆಸಲು ಗೊತ್ತಿಲ್ಲ ಎಂಬ ಶಾಸಕ ವೇದವ್ಯಾಸ ಕಾಮತ್‌ರ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತ ಪಡಿಸಿದ ಜೆಡಿಎಸ್ ಮಂಗಳೂರು ನಗರಾಧ್ಯಕ್ಷ ವಸಂತ ಪೂಜಾರಿ, ಇದು ವೇದವ್ಯಾಸ ಕಾಮತ್ ಅವರ ರಾಜಕೀಯ ಅಜ್ಞಾನವನ್ನು ಬಿಂಬಿಸುತ್ತದೆ ಎಂದು ಟೀಕಿಸಿದರು.

 ಇತ್ತೀಚಿನ ಭಾರತ್ ಬಂದ್ ಸಂದರ್ಭದಲ್ಲಿ ಶಾಸಕರು ತಮ್ಮ ಅಜ್ಞಾನವನ್ನು ಪ್ರದರ್ಶಿಸಿದ್ದರು. ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಗದ್ದುಗೆ ಏರುವ ಬಗ್ಗೆ ಹಗಲು ಕನಸು ಕಾಣುತ್ತಿದ್ದಾರೆ ಎಂದು ವಸಂತ ಪೂಜಾರಿ ಟೀಕಿಸಿದರು.

ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ರಾಂ ಗಣೇಶ್, ರಾಜ್ಯ ಕಾರ್ಯದರ್ಶಿ ಗೋಪಾಲಕೃಷ್ಣ ಅತ್ತಾವರ, ಜಿಲ್ಲಾ ವಕ್ತಾರ ಸುಶಿಲ್ ನೊರೋನ್ಹಾ, ಕಾರ್ಪೊರೇಟರ್ ಅಝೀಝ್ ಕುದ್ರೋಳಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News